Advertisement

ಜಿಲ್ಲೆಯಾದ್ಯಂತ ವ್ಯಾಪಕ ಮಳೆ: ವಿವಿಧೆಡೆ ಹಾನಿ

12:20 AM Jun 18, 2020 | Sriram |

ಉಡುಪಿ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಂಗಳವಾರ ರಾತ್ರಿ, ಬುಧವಾರ ಉತ್ತಮ ಮಳೆಯಾಗಿದೆ.ಮಂಗಳವಾರದ ಮಳೆಯಿಂದ ಉಡುಪಿ, ಕಾರ್ಕಳ, ಕಾಪು ಭಾಗದಲ್ಲಿ ಗಾಳಿ, ಮಳೆಗೆ ಹಲವು ಮನೆಗಳಿಗೆ ಹಾನಿಯಾಗಿದೆ. ಗಾಳಿಗೆ ಮನೆಯ ಹೆಂಚುಗಳು ಹಾರಿಹೋಗಿವೆ. ಕಾಪು ತಾಲೂಕು ಪಡು ಗ್ರಾಮದ ನಿವಾಸಿ ಭಾಸ್ಕರ ಹಾಗೂ ಇದೇ ಗ್ರಾಮದ ಲಲಿತಾ ಅವರ ಮನೆಯ ಹೆಂಚುಗಳು ಗಾಳಿ ಮಳೆಗೆ ಹಾರಿಹೋಗಿ ತಲಾ 7ಸಾವಿರ ರೂ. ಅಂದಾಜಿನಷ್ಟು ನಷ್ಟ ಆಗಿದೆ. ಬೇಬಿ ಮಡಿವಾಳ ಅವರ ಮನೆಯ ಹೆಂಚು ಕೂಡ ಹಾರಿಹೋಗಿ ರೂ. 5 ಸಾವಿರದಷ್ಟು ನಷ್ಟ ಆದ ಬಗ್ಗೆ ಅಂದಾಜಿಸಲಾಗಿದೆ. ಕಾರ್ಕಳ ತಾ| ಎರ್ಲಪ್ಪಾಡಿ ನಿವಾಸಿ ವಿಶ್ವನಾಥ ಪೂಜಾರಿ ಅವರ ಮನೆಯ ಛಾವಣಿಗೂ ಹಾನಿಯಾಗಿದ್ದು 10 ಸಾವಿರದಷ್ಟು ನಷ್ಟ ಅಂದಾಜಿಸಲಾಗಿದೆ.

Advertisement

ಮಳೆ ಜತೆ ಗಾಳಿಯೂ ಬೀಸಿದ್ದರಿಂದ ಈ ಭಾಗದ ಕೃಷಿಕರ ಕೃಷಿ ತೋಟಗಳ ಬೆಳೆಗಳಿಗೆ ಹಾನಿಯುಂಟಾಗಿದ್ದು, ಕೃಷಿಕರು ಅಪಾರ ನಷ್ಟಕ್ಕೆ ಒಳಗಾಗಿದ್ದಾರೆ. ಬುಧವಾರ ಬೆಳಗ್ಗೆ ನಗರದಲ್ಲಿ ಲಘು ಪ್ರಮಾಣದಲ್ಲಿ ಮಳೆಯಾಗಿತ್ತು. ಅನಂತರದಲ್ಲಿ ಉತ್ತಮ ಮಳೆಯಾಗಿದೆ. ಮಳೆ ವ್ಯಾಪಕವಾಗುತ್ತಿದ್ದಂತೆ ರಸ್ತೆ ಬದಿಯ ಚರಂಡಿಗಳಿಂದ ನೀರು ರಸ್ತೆ ಕಡೆಗೆ ಹರಿದು ಅಸ್ತವ್ಯಸ್ತವಾಗುತ್ತಿರುವ ದೃಶ್ಯಗಳು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಒಳ ಭಾಗದ ರಸ್ತೆಗಳಲ್ಲಿ ಕಂಡು ಬಂತು. ನಗರದ ಮುಖ್ಯ ಪೇಟೆಗಳ ರಸ್ತೆಗೂ ಮಳೆ ನೀರು ಹರಿದು ಸಮಸ್ಯೆಗಳು ಕಾಣಿಸಿಕೊಂಡಿದ್ದವು.

ಜಿಲ್ಲೆಯ ಸರಾಸರಿ ಮಳೆ ಜೂ.17ರ ಬೆಳಗ್ಗಿನ 8.30ರ ವರೆಗಿನ 24 ತಾಸುಗಳಲ್ಲಿ 113.67 ಮಿ. ಮೀ ಎಂದು ದಾಖಲಾಗಿದೆ.

ಮಣಿಪಾಲ ಹೆದ್ದಾರಿ ಮಧ್ಯೆ ನೀರು ಸೋರಿಕೆ
ಉಡುಪಿ: ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವ ಮಣಿಪಾಲ ಬಬ್ಬು ಸ್ವಾಮಿ ದೈವಸ್ಥಾನದ ಮುಂಭಾಗ ಹೆದ್ದಾರಿ ಮಧ್ಯೆ ನಗರಸಭೆಗೆ ಸೇರಿದ ನೀರು ಚಿಮ್ಮುತ್ತಿದ್ದು , ಶುದ್ಧ ಕುಡಿಯುವ ನೀರು ಪಕ್ಕದ ಚರಂಡಿಗೆ ಹರಿದು ಪೋಲಾಗುತ್ತಿದೆ.

ರಾ.ಹೆ. ವಿಸ್ತರಣೆಗೆಂದು ಇಲ್ಲಿ ಕಾಂಕ್ರೀಟ್‌ ಕಾಮಗಾರಿ ಮುಗಿದಿದೆ. ಈ ಹೆದ್ದಾರಿ ವ್ಯಾಪ್ತಿಯಲ್ಲಿ ಅಳವಡಿಸಿದ ನಗರಸಭೆ ಕುಡಿಯುವ ನೀರು ಯೋಜನೆಯ ತಿರುಗಣೆ ಚೇಂಬರ್‌ನಲ್ಲಿ ನೀರು ಸೋರಿಕೆಯಾಗಿ ಅದು ಮೇಲಕ್ಕೆ ಚಿಮ್ಮುತ್ತಿದೆ. ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ವಾಹನ ಸಂಚಾರದ ವೇಳೆಯೂ ಅಡಚಣೆಯಾಗುತ್ತಿದೆ.

Advertisement

ಕಳೆದ ಹನ್ನೆರಡು ದಿನಗಳಿಂದ ಈ ರೀತಿ ಶುದ್ಧ ನೀರು ಅನಾವಶ್ಯಕವಾಗಿ ಪೋಲಾಗುತ್ತಿದೆ. ಸಾರ್ವಜನಿಕ ಸ್ಥಳದಲ್ಲೆ ಈ ರೀತಿ ನೀರು ಚಿಮ್ಮಿ ಹರಿಯುತ್ತಿದ್ದರೂ, ನಗರಸಭೆ ಗಮನಕ್ಕೆ ಅದಿನ್ನು ಬಾರದೇ ಇರುವುದರ ಬಗ್ಗೆ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಗರಸಭೆ ಅಧಿಕಾರಿಗಳು, ಸಿಬಂದಿ ಇನ್ನಾದರೂ ಎಚ್ಚೆತ್ತುಕೊಂಡು ಇಲ್ಲಿ ನೀರು ಪೋಲಾಗುವುದನ್ನು ತಡೆಗಟ್ಟಬೇಕು ಎಂದು ಅಲ್ಲಿಯವರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next