Advertisement

ಜಿಲ್ಲೆಯಾದ್ಯಂತ ಜಿಟಿಜಿಟಿ ಮಳೆ

10:08 AM Jul 01, 2019 | Suhan S |

ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಸಂಜೆಯಿಂದಲೇ ಹದವಾದ ಮಳೆಯಾಗಿದೆ. ರಾತ್ರಿಯಿಡೀ ಸುರಿದು ಜಿಟಿ ಮಳೆ ರವಿವಾರ ಸಂಜೆ ವರೆಗೂ ಮುಂದುವರಿದಿತ್ತು. ಈ ಬಾರಿ ಮುಂಗಾರು ಆರಂಭಗೊಂಡು ತಿಂಗಳು ಕಳೆದರೂ ಮಳೆಯಾಗದೇ ಮಂಕಾಗಿದ್ದ ರೈತರು ಈ ಮಳೆಯಿಂದ ಹುರುಪುಗೊಂಡಿದ್ದಾರೆ.

Advertisement

ಗದಗ-ಬೆಟಗೇರಿ ಅವಳಿ ನಗರದಲ್ಲಿ ಶನಿವಾರ ಸಂಜೆಯಿಂದ ಆರಂಭಗೊಂಡಿರುವ ಜಿಟಿಜಿಟಿ ಮಳೆ ಆಗೊಮ್ಮೆ- ಈಗೊಮ್ಮೆ ಬಿಡುವು ನೀಡಿದರೂ, ಕಳೆದ 24 ಗಂಟೆಗಳಿಂದ ಬಿಟ್ಟು ಬಿಡದಂತೆ ಸುರಿಯಿತು. ಶನಿವಾರ ರಾತ್ರಿ ಹಾಗೂ ರವಿವಾರ ಮಧ್ಯಾಹ್ನ ಒಂದೆರಡು ಗಂಟೆಗಳ ಕಾಲ ಬಿರುಸಿನ ಮಳೆಯಾಯಿತು.

ಮಳೆಯಿಂದಾಗಿ ಕೆಲವೆಡೆ ರಾಜಕಾಲುವೆಗಳು ಹಾಗೂ ಚರಂಡಿಗಳಲ್ಲಿ ಕೆರೆ ಕಟ್ಟಿದ್ದರಿಂದ ನೀರು ಸರಾಗವಾಗಿ ಹರಿಯದೇ ಹಲವೆಡೆ ಸ್ಲಂ ಬಡಾವಣೆಗಳಲ್ಲಿ ಚರಂಡಿಗಳು ಉಕ್ಕಿ ರಸ್ತೆಗಳಲ್ಲಿ ಮಳೆ ಹಾಗೂ ಚರಂಡಿ ನೀರು ಹರಿಯಿತು.

ಬೆಟಗೇರಿ ಭಾಗದ ನರಸಾಪುರ, ಒಕ್ಕಲಗೇರಿ ಮತ್ತಿತರೆ ಬಡಾವಣೆಗಳಲ್ಲಿ ಅಲ್ಲಲ್ಲಿ ಚರಂಡಿ ನೀರು ಹರಿಯಲು ಅಡ್ಡಿಯಾಗಿದ್ದ ತ್ಯಾಜ್ಯವನ್ನು ತೆರವುಗೊಳಿಸಲು ಸ್ಥಳೀಯರು ಹರಸಾಹಸ ನಡೆಸಿದರು. ಬೊಂಬು, ಕಬ್ಬಿಣದ ಸಲಾಕೆ, ಪಿಕಾಸಿಯಿಂದ ಚರಂಡಿಗಳನ್ನು ಸ್ವಚ್ಛಗೊಳಿಸುವ ಮೂಲಕ ಮಳೆ ನೀರು ಹರಿಯಲು ಅನುವು ಮಾಡಿದರು.

ಕೆಸರು ಗದ್ದೆಯಾಗಿ ಮಾರ್ಪಟ್ಟ ರಸ್ತೆ: ಇಲ್ಲಿನ ಗಂಗಾಪುರ ಪೇಟೆಯ ವೃತ್ತದಿಂದ ಹೊಂಬಳ ನಾಕಾ ವರೆಗಿನ ರಸ್ತೆ ಭಾಗಶಃ ಸಿಸಿ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಇನ್ನುಳಿದ ರಸ್ತೆಗೆ ಕಾಯಕಲ್ಪವಿಲ್ಲದೇ ಅಕ್ಷರಶಃ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಇಲ್ಲಿನ ಆದಿ ಜಾಂಬವ ನಗರದ ತಿರುವಿನಲ್ಲಿರುವ ಮಾಸ್ತರ್‌ ಅಂಗಡಿಯಿಂದ ಹೊಂಬಳ ನಾಕಾ ರೈಲ್ವೆ ಗೇಟ್ ವರೆಗಿನ ಸುಮಾರು 200 ಮೀಟರ್‌ ಉದ್ದದ ರಸ್ತೆಯಲ್ಲಿ ಬೃಹತ್‌ ಗುಂಡಿಗಳು ಬಾಯ್ತೆರೆದಿದೆ. ಬೃಹತ್‌ ಗುಂಡಿಗಳಲ್ಲಿ ಮಳೆ ನೀರು ನಿಂತಿದೆ. ರಸ್ತೆ ಹಾಗೂ ಗುಂಡಿಗಳನ್ನು ಅಂದಾಜಿಸಲಾಗದೇ ವಾಹನ ಸವಾರರು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಪರದಾಡುವಂತಾಗಿದೆ. ಜಿಟಿ ಮಳೆಯಿಂದಾಗಿ ರಸ್ತೆಯಲ್ಲಿ ಮೂರನಾಲ್ಕು ವೃದ್ಧರು ಕಾಲು ಜಾರಿ ಬಿದ್ದಿದ್ದಾರೆ. ವಾಹನಗಳು ಸ್ಕಿಡ್‌ ಆಗುತ್ತಿವೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

Advertisement

ರೈತರಿಗೆ ಹುರುಪು: ಈ ಬಾರಿ ಮುಂಗಾರಿನ ಆರಂಭದಲ್ಲೇ ಮೃಗಶಿರ ಮಳೆ ನಕ್ಷತ್ರ ಕೈಕೊಟ್ಟಿದೆ. ಜೂ. 8ರಿಂದ 21ರ ವರೆಗೂ ಮಳೆಯ ದರ್ಶನವಿಲ್ಲದೇ ರೈತಾಪಿ ಜನರು ಮೋಡಗಳತ್ತ ಮುಖ ಮಾಡುವಂತಾಯಿತು. ಮುಂಗಾರು ಹಂಗಾಮಿನ ಸಂಪೂರ್ಣ ಭರವಸೆ ಕಳೆದುಕೊಂಡಿದ್ದ ಜಿಲ್ಲೆಯ ರೈತರಿಗೆ ಶನಿವಾರ ಮತ್ತು ಭಾನುವಾರ ಸುರಿದ ಮಳೆಯು ಮರುಭೂಮಿಯಲ್ಲಿ ಒಯಾಸಿಸ್‌ ಕಂಡಂತಾಗಿದೆ. ರೈತಾಪಿ ಜನರಲ್ಲಿ ಹುರುಪು ಹೆಚ್ಚಿಸಿದೆ.

ಕೃಷಿ ಇಲಾಖೆ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 2.45 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿತ್ತು. ಆದರೆ, ಮಳೆ ಕೊರತೆಯಿಂದ ಜೂ. 15ರ ವರೆಗೆ ಕೇವಲ 43,714 ಹೆಕ್ಟೇರ್‌ನಲ್ಲಿ ಮಾತ್ರ (ಶೇ. 17.80) ಬಿತ್ತನೆಯಾಗಿದೆ.

ಸಮರ್ಪಕ ಮಳೆಯಾಗಿದ್ದರೆ ಈ ವೇಳೆಗೆ ಹೆಸರುಕಾಳು ಮೊಳಕೆಯೊಡೆದು, ಇಡೀ ಜಮೀನು ಹಸಿರಿನಿಂದ ಕಂಗೊಳಿಸುತ್ತಿತ್ತು. ಆದರೆ, ಈ ಬಾರಿ ಕೇವಲ 30,557 ಹೆಕ್ಟೇರ್‌ನಲ್ಲಿ (ಶೇ.30.6) ಮಾತ್ರ ಹೆಸರು ಬಿತ್ತನೆಯಾಗಿದೆ. ಒಟ್ಟು 1 ಲಕ್ಷ ಹೆಕ್ಟೇರ್‌ನಲ್ಲಿ ಹೆಸರುಕಾಳು ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿತ್ತು. ಹೆಸರುಕಾಳು ಬಿತ್ತನೆ ಅವ ಈಗಾಗಲೇ ಮುಗಿದಿದೆ. ಆದರೆ, ಕೆಲವೆಡೆ ರೈತರು ಧೈರ್ಯ ಮಾಡಿ ಈರುಳ್ಳಿ ಮತ್ತು ಹೆಸರುಕಾಳು ಎರಡೂ ಬೀಜಗಳನ್ನು ಮಿಶ್ರಣ ಮಾಡಿ ಬಿತ್ತಿದ್ದಾರೆ.

ಹೆಸರು, ತೊಗರಿ, ಮೆಕ್ಕೆಜೋಳ, ಶೇಂಗಾ, ಬಿಟಿ ಹತ್ತಿ ಜಿಲ್ಲೆಯ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳು. ಒಟ್ಟು 45 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಗೋವಿನ ಜೋಳ ಮತ್ತು 33,000 ಹೆಕ್ಟೇರ್‌ನಲ್ಲಿ ಬಿ.ಟಿ ಹತ್ತಿ ಬಿತ್ತನೆ ಗುರಿ ನಿಗದಿಪಡಿಸಲಾಗಿದೆ. ಇದರಲ್ಲಿ ಶೇ. 12ರಷ್ಟು ಗೋವಿನ ಜೋಳ ಮತ್ತು ಶೇ. 17.6ರಷ್ಟು ಬಿ.ಟಿ ಹತ್ತಿ ಬಿತ್ತನೆ ಆಗಿದೆ. 44 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಗುರಿ ನಿಗದಿಪಡಿಸಲಾಗಿದೆ. ಇದರಲ್ಲಿ ಶೇ. 1.9ರಷ್ಟು ಬಿತ್ತನೆ ಆಗಿದೆ. ಕಳೆದ ಬಾರಿ ಮುಂಗಾರಿನಲ್ಲಿ ಹೆಸರುಕಾಳು ಕೈಕೊಟ್ಟಾಗ ಬಳ್ಳಿ ಶೇಂಗಾ ರೈತರ ಕೈ ಹಿಡಿದಿತ್ತು.

ಕೆಲವೆಡೆ ಕೃಷಿಹೊಂಡಗಳಿಗೆ ಸಾಕಷ್ಟು ನೀರು ಹರಿದು ಬಂದಿದೆ. ಇಂತಹದೇ ಇನ್ನೊಂದೆರಡು ಮಳೆ ಲಭಿಸಿದರೆ ಕೃಷಿ ಹೊಂಡಗಳು ಬಹುತೇಕ ಭರ್ತಿಯಾಗಲಿವೆ ಎನ್ನುತ್ತಾರೆ ರೈತರು. ಮಳೆ ಸುರಿದ ಬೆನ್ನಲ್ಲೇ, ಬಿತ್ತನೆ ಬೀಜಗಳಿಗೆ ದಿಢೀರ್‌ ಬೇಡಿಕೆ ಹೆಚ್ಚಾಗಿದೆ. ರೈತರು ಸಮೀಪದ ಸಹಕಾರಿ ಸಂಘ, ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ, ಗೊಬ್ಬರ ಖರೀದಿಗೆ ವಿಚಾರಿಸುತ್ತಿದ್ದಾರೆ. ಮಳೆಯಾಗದ್ದರಿಂದ ಯೂರಿಯಾ, ಡಿಎಪಿ, ಎಂಎಪಿ, ಕಾಂಪ್ಲೆಕ್ಸ್‌ ಸೇರಿ 6145 ಟನ್‌ ಗೊಬ್ಬರ ಮಾರಾಟವಾಗದೆ ಬಾಕಿ ಉಳಿದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next