ಒಂದೆಡೆ ಭುವಿಯಿಂದ ನಭಕ್ಕೆ ಏಣಿಯಿಟ್ಟಂತಿರುವ ದಟ್ಟವಾದ ವೃಕ್ಷಗಳ ಸಾಲು, ಇನ್ನೊಂದೆಡೆ ಇಳಿದರೆ ಇನ್ನಾವುದೋ ಒಂದು ಲೋಕವಿರುವಂತೆ, ದ್ವಿಜರಾಜ ಹಾಗೂ ಆತನ ಬಳಗದವರ ಪ್ರತಿಬಿಂಬಿಸುವ ಜಲರಾಶಿ. ದಿವಸ್ಪತಿಯ ಬೆಳಕನ್ನು ನಮ್ಮೆಡೆಗೆ ಅಭಿಷೇಕ ಮಾಡುವ ಶಶಿಯ ಬೆಳದಿಂಗಳಲ್ಲಿ, ದಾರಿಯುದ್ದಕ್ಕೂ ಮೆತ್ತನೆಯ, ಸೊಂಪಾಗಿ ಬೆಳೆದ ಗರಿಕೆ ಹುಲ್ಲಿನ ರಾಶಿಯ ಮೇಲೆ ಒಂದೊಂದು ಹೆಜ್ಜೆಯ ಇಡಲು, ಕಾಲ್ಗೆಜ್ಜೆಯ ದನಿ ಕೇಳಿ ಕುತೂಹಲದಿಂದ ಹುಲ್ಲಿನ ಮೇಲಿರುವ ಮಳೆಹನಿಗಳು ಬೆಳಕಿನ ಚಿಕ್ಕ ಚಿಕ್ಕ ಚುಕ್ಕಿಯಂತೆ ರೂಪಾಂತರಗೊಂಡು ವಸುಂಧರೆಯಿಂದ ಒಂದರ ಹಿಂದೆ ಒಂದರಂತೆ ಮೇಲೆದ್ದು, ನನ್ನ ಸುತ್ತ ಸುಳಿಯತೊಡಗಿದವು. ಆಗಲೇ ತಣ್ಣನೆಯ ಗಾಳಿ ಬೀಸಿ ರೋಮಾಂಚನಗೊಂಡು, ಮೇಲೆ ನೋಡಲು ಹುಣ್ಣಿಮೆಯ ಚಂದ್ರಮನು ಜ್ಯೇಷ್ಠ ತಾರೆಯ ಬಳಿ ನಿಂತು ಪ್ರೀತಿಯ ನಗೆ ಬೀರಿದ. ಆ ನಗುವಿಗೆ ಮನಸೋತು ಕಲ್ಪನಾಲೋಕಕ್ಕೆ ಜಾರಿ ಆತನ ಪ್ರಪಂಚಕ್ಕೆ ತೆರಳಲು ಬಾನಂಚಲ್ಲಿ ಒಂದು ಮಳೆಬಿಲ್ಲು ಮೂಡಬಾರದೆ ಎಂದೆನಿಸಿತು !
ರಕ್ಷಿತಾ ಎಂ.
ಬಿಇ- 7ನೆಯ ಸೆಮಿಸ್ಟರ್, ಕೆನರಾ ಇಂಜಿನಿಯರಿಂಗ್ ಕಾಲೇಜು, ಬೆಂಜನಪದವು