Advertisement

ಮಳೆ ಬಿಲ್ಲು : ಕರಗದೆ ಉಳಿದ ಬಣ್ಣ

12:51 AM Oct 11, 2020 | mahesh |

ಇದು ಹೊಸ ಅಂಕಣ. ಸಾಮಾಜಿಕ ಮಾಧ್ಯಮಗಳು ನಮ್ಮ ಇಂದಿನ ಬದುಕಿನಲ್ಲಿ ಹಾಸು ಹೊಕ್ಕಾಗಿವೆ. ದಿನಕ್ಕೆ ನೂರಾರು, ಸಾವಿರಾರು ಸಂದೇಶಗಳು ವಾಟ್ಸ್‌ಆ್ಯಪ್‌. ನಮ್ಮ ಫೇಸ್‌ಬುಕ್‌ ವಾಲ್‌ಗ‌ಳಲ್ಲಿ ಹರಿದಾಡುತ್ತವೆ. ಕೆಲವು ನಮ್ಮ ಸ್ನೇಹಿತರು ನೋಡಿ ಕಳುಹಿಸಿದ್ದು, ಇನ್ನು ಹಲವು ನೋಡದೇ ಫಾರ್ವರ್ಡ್‌ ಮಾಡಿದ್ದು. ಅಂಥವುಗಳನ್ನು ಹೆಕ್ಕಿ ಕೊಡುವ ಪ್ರಯತ್ನ ಇದು. ನೀವೂ ನಿಮಗೆ ಖುಷಿಕೊಟ್ಟ ಮೆಸೇಜ್‌ಗಳ ಕುರಿತು ನಮ್ಮೊಂದಿಗೆ ಹಂಚಿಕೊಳ್ಳಿ. 76187 74529 (ಈ ಸಂಖ್ಯೆ  ವಾಟ್ಸ್‌ಆ್ಯಪ್‌ ಗೆ ಮಾತ್ರ) ಈ ಸಂಖ್ಯೆಗೆ ವಾಟ್ಸ್‌ಆ್ಯಪ್‌ ಮಾಡಿ. ಸೂಕ್ತ ಬರಹಗಳನ್ನು ಪ್ರಕಟಿಸುತ್ತೇವೆ.

Advertisement

ನಮಗಾಗಿ ಕ್ಷಮಿಸಬೇಕು
ಕ್ಷಮಿಸಿಬಿಡುವುದು ನಿಜಕ್ಕೂ ಮಹತ್ಕಾರ್ಯ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಬೇಕಾದ ಸತ್ಯ. ಕೆಲವೊಮ್ಮೆ ಅಮೂಲ್ಯ ಸಂಬಂಧವನ್ನು ಉಳಿಸಲು ನಾವು ಆತ್ಮೀಯರ ತಪ್ಪನ್ನು ಮನ್ನಿಸಬೇಕಾಗುತ್ತದೆ ಅಥವಾ ನಮ್ಮಿಂದ ತಪ್ಪಾಗಿದ್ದರೆ ಸ್ನೇಹಿತರು ಕ್ಷಮಿಸಿ ಬಿಡಲಿ ಎಂದು ಭಿನ್ನವಿಸುತ್ತೇವೆ. ಒಟ್ಟಿನಲ್ಲಿ ಸಂಬಂಧಗಳ ಉಳಿವಿಗೆ ಕೆಲವೊಮ್ಮೆ ಮನಸ್ಸನ್ನು ಒಗ್ಗಿಸಿಕೊಳ್ಳುವುದು ಅನಿವಾರ್ಯ. ಇನ್ನೂ ಕೆಲವೊಮ್ಮೆ ಕ್ಷಮೆಗೆ ಅರ್ಹರಲ್ಲದಿದ್ದರೂ ನಮ್ಮ ಮನಃಶಾಂತಿಗಾಗಿ ಅವರನ್ನು ಮನ್ನಿಸಬೇಕಾದ ಪ್ರಸಂಗ ಎದುರಾಗುತ್ತದೆ. ಬೇಸರ, ದ್ವೇಷ ಮುಂದುವರಿಸಿಕೊಂಡು ಹೋಗುವಷ್ಟು ದೊಡ್ಡದಾಗೇನೂ ಇಲ್ಲ ಜೀವನ ಎನ್ನುವ ವಾಟ್ಸ್‌ಆ್ಯಪ್‌ ಸಂದೇಶ ಬೆಳ್ಳಂಬೆಳಗ್ಗೆ ನನ್ನ ಗಮನ ಸೆಳೆಯಿತು. ನಮ್ಮ ಮನಸ್ಸಿನಲ್ಲಿ ದ್ವೇಷ, ಸೇಡು ಮುಂತಾದ ಋಣಾತ್ಮಕ ಅಂಶಗಳು ತುಂಬಿದ್ದರೆ ಪ್ರತಿಯೊಂದು ಕೂಡ ಕೆಟ್ಟದಾಗಿಯೇ ಕಾಣಿಸುತ್ತದೆ. ಹೀಗಿದ್ದರೆ ಜೀವನವನ್ನು ಸಂತೋಷವಾಗಿ ಅನುಭವಿಸಲು ಸಾಧ್ಯವಿಲ್ಲ. ಜತೆಗೆ ಮಾನಸಿಕ ಒತ್ತಡ ಹೆಚ್ಚಾಗಿ ನೆಮ್ಮದಿಯೇ ನಾಶವಾಗಿ ಬಿಡಬಹುದು ಎನ್ನುತ್ತದೆ ಮನಃಶಾಸ್ತ್ರ. ಆದ್ದರಿಂದ ಇತರರಿಗಾಗಿ ಅಲ್ಲದಿದ್ದರೂ ನಮಗಾಗಿ ಅವರನ್ನು ಕ್ಷಮಿಸಿ ಬಿಡಬೇಕು ಎನ್ನುವುದನ್ನು ಈ ಸಂದೇಶ ಸರಳವಾಗಿ, ಮನಮುಟ್ಟುವ ಹಾಗೆ ಹೇಳಿದಂತಿದೆ.
– ರಮೇಶ್‌

ನೋವು ಕ್ಷಣಿಕ
ಈ ಸಮಯ ಕಳೆದು ಹೋಗುತ್ತದೆ. ಇತ್ತೀಚೆಗೆ ಯಾರದೋ ಫೇಸ್‌ಬುಕ್‌ ವಾಲ್‌ನಲ್ಲಿ ಈ ಸಾಲನ್ನು ಓದಿದಾಗ ಖುಷಿಯಾಯಿತು. ಜತೆಗೆ ಎಲ್ಲೋ ಓದಿದ ನೆನಪು. ಮತ್ತೆ ಒಂದಿಬ್ಬರು ಸ್ನೇಹಿತರ ಬಳಿ ಕೇಳಿದಾಗ ಅದು ಕೃಷ್ಣನ ಸೂಕ್ತಿಯೆಂದು ತಿಳಿಯಿತು. ಬಹುಶಃ ಖುಷಿ, ದುಃಖ ಎರಡನ್ನೂ ಬಹಳವಾಗಿ ಅನುಭವಿಸುವವರಿಗೆ ಈ ಮಾತು ಹೇಳಿ ಮಾಡಿಸಿದಂತಿದೆ. ನಮ್ಮ ಜೀವನದ ಪ್ರತೀ ಘಟನೆಗಳು ಶಾಶ್ವತವಲ್ಲ. ಅದು ಆ ಕ್ಷಣಕ್ಕೆ ಮಾತ್ರ ಸೀಮಿತ. ಮತ್ತೂಂದು ಘಳಿಗೆಯಲ್ಲಿ ಬದಲಾಗಬಹುದು. ಅದನ್ನು ಮನಸ್ಸು ಅರಿತು ವರ್ತಿಸಿದರೆ ಯಾವ ತೊಂದರೆಯೂ ಇರದು. ನೋವು ಪ್ರತಿಯೊಬ್ಬರ ಜೀವನದಲ್ಲೂ ಘಟಿಸುತ್ತದೆ. ಆ ಕ್ಷಣಕ್ಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದರ ಮೇಲೆ ಭವಿಷ್ಯ ನಿಂತಿರುತ್ತದೆ. ಕೊನೆಗೆ ಅದೇ ಮಾತು ಈ ಕ್ಷಣ ಕಳೆದು ಹೋಗುತ್ತದೆ.
– ರುಚಿತಾ

ಆತ್ಮಾವಲೋಕನ ಮಾಡಿಕೊಳ್ಳೋಣ
ಒಂದೂರಿನ ಅರಸ ಬ್ರಾಹ್ಮಣರಿಗೆ ಭೋಜನ ಏರ್ಪಡಿಸಿದ್ದ. ಭೋಜನ ಶಾಲೆಯ ಸಮೀಪದಲ್ಲಿ ಗರುಡವೊಂದು ಹಾವನ್ನು ಕಚ್ಚಿಕೊಂಡು ಹಾರುತ್ತಿತ್ತು. ಹಾವು ನೋವಿನಿಂದ ಒದ್ದಾಡುತ್ತಿದ್ದಾಗ ಅದರ ಬಾಯಿಂದ, ಅಲ್ಲೇ ತೆರೆದಿಟ್ಟಿದ್ದ ತುಪ್ಪದ ಕುಡಿಕೆಗೆ ವಿಷ ಬಿತ್ತು. ಗೊತ್ತಿಲ್ಲದೆ ಇದನ್ನು ತಿಂದ ಕೆಲವು ಬ್ರಾಹ್ಮಣರು ಸತ್ತರು.

ಇದು ಚಿತ್ರಗುಪ್ತನಿಗೆ ಬಹಳ ಚಿಂತೆಯ ವಿಷಯವಾಯಿತು. ರಾಜನಾಗಲಿ, ಅಡುಗೆಯವರಾಗಲಿ, ಗರುಡವಾಗಲಿ ತಿಳಿದು ವಿಷ ಹಾಕಲಿಲ್ಲ. ಹಾವು ಸಂಕಟದಲ್ಲಿದ್ದಾಗ ವಿಷ ಬಿತ್ತು. ಹೀಗಾಗಿ ಪಾಪ ಯಾರ ಪಾಲಿಗೆ ಹಾಕಲಿ ಅನ್ನುವ ಚಿಂತೆಯಲ್ಲಿ ಯಮನ ಬಳಿ ಹೇಳಿದ. ಯಮ ಸ್ವಲ್ಪ ಕಾಲ ಕಾಯು ಅಂತ ಸಮಾಧಾನಿಸಿದ. ಮುಂದೆ ಒಂದು ದಿನ ಒಬ್ಬ ಬ್ರಾಹ್ಮಣ ಅರಮನೆಯ ದಾರಿಯನ್ನು, ಊರ ಬಳಿ ಇದ್ದ ಹರಕು ಬಾಯಿ ಹೆಂಗಸೊಬ್ಬಳ ಬಳಿ ಕೇಳಿದ. ಆಗ, ದಾರಿ ಹೇಳಿ, ಜಾಗ್ರತೆ, ಅರಸ ಬ್ರಾಹ್ಮಣರನ್ನು ಕೊಲ್ಲುತ್ತಾನೆ ಎಂದಳು ಆಕೆ. ಚಿತ್ರಗುಪ್ತ ಯಮನ ಆಜ್ಞೆಯಂತೆ ಅವಳ ಪಾಲಿಗೆ ಬ್ರಾಹ್ಮಣರನ್ನು ಕೊಂದ ಪಾಪ ಬರೆದ. ಫೇಸ್‌ ಬುಕ್‌ನಲ್ಲಿ ಹೆಚ್ಚಿನ ಮಂದಿ ಹಂಚಿಕೊಂಡ ಈ ಕಥೆ ನಮ್ಮ ಬದುಕಿಗೂ ಅದ್ಭುತ ಪಾಠವನ್ನು ಹೇಳಿದೆ. ನಾವೂ ಅಷ್ಟೇ. ಬದುಕಿನಲ್ಲಿ ತಿಳಿಯದೇ ಯಾರ್ಯಾರದೋ ಬಗ್ಗೆ ಮಾತನಾಡುತ್ತೇವೆ. ಒಬ್ಬರ ವಿಮರ್ಶೆಯಲ್ಲಿ ತೊಡಗುವ ನಮಗೆ ನಮ್ಮ ತಪ್ಪು ಕಾಣುವುದಿಲ್ಲ. ಇನ್ನೊಬ್ಬರನ್ನು ಅಪರಾಧಿ ಮಾಡಲು ಸಕಾರಣವಿಲ್ಲದೆ ನಾವು ಪ್ರಯತ್ನಿಸಿದರೆ ನಮ್ಮ ಜೀವನವೂ ಪಾಪವೆನಿಸುತ್ತದೆ.
– ರಾಧಾ

Advertisement

ಆತ್ಮವಿಶ್ವಾಸದ ಹಣತೆ ಬೆಳಗಲಿ
ಬದುಕುವ ಆಸೆ ಇದ್ದರೆ ನಿನ್ನ ಶತ್ರುಗಳ ಕಣ್ಣೆದುರಲ್ಲೇ ಬದುಕು… ಅವರು ನಿನ್ನ ಎದುರು ಸುಳಿದಾಗಲೆಲ್ಲ ನಿನ್ನಲ್ಲಿ ಬದುಕುವ ಛಲ ಎಚ್ಚೆತ್ತುಕೊಳ್ಳುತ್ತದೆ. ವಾಟ್ಸ್‌ಆ್ಯಪ್‌ನಲ್ಲಿ ಹರಿದು ಬಂದ ಸ್ವಾಮಿ ವಿವೇಕಾನಂದರ ಈ ಸಂದೇಶ ಬದುಕಿಗೆ ಹೊಸ ಚೈತನ್ಯ ತುಂಬುತ್ತದೆ. ಬದುಕಬೇಕು ಎನ್ನುವ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ಯಾವ ರೀತಿ ಎನ್ನುವುದು ನಮಗೆ ಬಿಟ್ಟಿದ್ದು. ಶತ್ರುಗಳು ನಮ್ಮ ಜತೆ ಇದ್ದಾಗ ಅವರಿಗೆ ಪೈಪೋಟಿ ನೀಡಲಾದರೂ ನಾವು ಬದುಕುತ್ತೇವೆ, ಹೊಸ ದಾರಿ ಹುಡುಕುತ್ತೇವೆ, ನಮ್ಮೊಳಗೆ ಆತ್ಮವಿಶ್ವಾಸದ ಜ್ಯೋತಿ ಹಚ್ಚುತ್ತೇವೆ ಎನ್ನುವ ಮಾತಿಗೆ ಪೂರಕ ಮತ್ತು ಪ್ರತಿಯೊಬ್ಬರಿಗೂ ಪ್ರೇರಣೆ ನೀಡಬಲ್ಲ ಸಂದೇಶ ಎನ್ನುವಂತಿದೆ ಈ ಮಾತುಗಳು.
– ಸಂಜನಾ

Advertisement

Udayavani is now on Telegram. Click here to join our channel and stay updated with the latest news.

Next