Advertisement
ಸಂಜೆಯಾಗುತ್ತಿದ್ದಂತೆ ಕಾರ್ಮೋಡ ಕವಿದು ಜೋರು ಗಾಳಿ ಬೀಸಲು ಆರಂಭವಾಗಿ, ಜತೆಯಲ್ಲಿ ಮಳೆಯೂ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಸಂಜೆ 5.30ರ ಸುಮಾರಿಗೆ ಆಗಮಿಸಿದ ಮಳೆ ಭಾರೀ ಗಾಳಿಯೊಂದಿಗೆ 6.30 ಗಂಟೆವರೆಗೂ ಸುರಿಯಿತು. ಜೊತೆಗೆ ಗುಡುಗು ಸಿಡಿಲೂ ಇತ್ತು. ಜೋರು ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಕ್ಕೆ ನೀರು ಹರಿಯಿತು.
Related Articles
Advertisement
ಕುಕ್ಕರಹಳ್ಳಿ ಶಾಲೆಯ ಪಕ್ಕ ಒಂದು, ಈಜುಕೊಳ್ಳದ ರಸ್ತೆಯಲ್ಲಿ ನಾಲ್ಕು ಮರಗಳು ಧರೆಗುರುಳಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸರಸ್ವತಿಪುರಂನ ಅಗ್ನಿಶಾಮಕದಳದ ಮುಂದೆ ಮರವೊಂದರ ಜತೆಗೆ ವಿದ್ಯುತ್ ಕಂಬವೂ ಧರೆಗುರುಳಿದೆ. ಜಯಲಕ್ಷ್ಮೀ ವಿಲಾಸ ರಸ್ತೆಯಲ್ಲಿ ಹತ್ತಕ್ಕೂ ಹೆಚ್ಚು ಮರಗಳ ಕೊಂಬೆ ಮುರಿದು ಬಿದ್ದ ಪರಿಣಾಮ ವಿದ್ಯುತ್ ತಂತಿ ತುಂಡಾಗಿತ್ತು.
ಜೊತೆಗೆ ಎರಡು ಕಾರುಗಳು ಜಖಂಗೊಂಡವು. ಇನ್ನು ರೈಲ್ವೆ ನಿಲ್ದಾಣ, ಕುವೆಂಪುನಗರ, ಗೀತಾ ರಸ್ತೆ, ಜೆ.ಪಿ.ನಗರ, ಕೌಟಿಲ್ಯ ರಸ್ತೆಗಳಲ್ಲಿ ಮರಗಳು ಧರೆಗುರುಳಿದವು. ಅನಘಾ ಆಸ್ಪತ್ರೆ ಬಳಿ ಮಳೆಗೆ ಮರವೊಂದು ಕಾರಿನ ಮೇಲೆ ಬಿದ್ದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕುವೆಂಪುನಗರದ ಉದಯರವಿ ರಸ್ತೆ, ಕಾವೇರಿ ಶಾಲೆ ಮತ್ತು ಕೆ.ಆರ್.ಮೊಹಲ್ಲಾ ವೀಣೆ ಶೇಷಣ್ಣ ರಸ್ತೆಯ 7ನೇ ಕ್ರಾಸ್ ಬಳಿ ಮರ ಬಿದ್ದಿದ್ದು, ವಿದ್ಯುತ್ ತಂತಿ ಹರಡಿ ಅಪಾಯಕ್ಕೆ ಆಹ್ವಾನ ನೀಡುವಂತಿತ್ತು. ಅಲ್ಲದೆ, ನಗರದ ಶಾಂತಲಾ ಚಿತ್ರಮಂದಿರದ ನಾರಾಯಣಶಾಸಿŒ ರಸ್ತೆ ಬಳಿ ಮರದ ಜತೆಗೆ ವಿದ್ಯುತ್ ಕಂಬ ಧರೆಗುರುಳಿದ್ದವು.
ಮಳೆಯಿಂದ ಲೋಕೋಪಯೋಗಿ ಕಚೇರಿಗೆ ನೀರು ನುಗ್ಗಿತು. ಕನಕಗಿರಿ, ಗಾಂಧಿನಗರದಲ್ಲಿ ಕೆಲವು ಮನೆಗಳಿಗೆ ಒಳಚರಂಡಿ ನೀರು ನುಗ್ಗಿತು. ಮಂಡಿಮೊಹಲ್ಲಾದ ಬಳಿಯೂ ವಿದ್ಯುತ್ ಕಂಬ ರಸ್ತೆ ಬದಿಗೆ ಬಿದ್ದಿತ್ತು. ರಸ್ತೆಯಲ್ಲಿ ಬಿದ್ದ ಮರಗಳ ಕೊಂಬೆಯನ್ನು ಪಾಲಿಕೆಯ ಮೂರು ಅಭಯ ತಂಡದ ಸಿಬ್ಬಂದಿ ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.