ಬೆಂಗಳೂರು: ಮಳೆ ಬಂದರೆ ನೀರು ಅಂಗಡಿಗಳಿಗೆ ನುಗ್ಗುತ್ತದೆ. ರಸ್ತೆ ಸಂಚಾರ ದುಸ್ತರವಾಗುತ್ತದೆ. ಒಳಚರಂಡಿ ನೀರು ರಸ್ತೆ ಮೇಲೆ ನಿಲ್ಲುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ಇಷ್ಟೆಲ್ಲ ಸಮಸ್ಯೆ ಎದುರಿಸುತ್ತಿರುವುದು ವಿಲ್ಸನ್ ಗಾರ್ಡನ್ ನಿವಾಸಿಗಳು. ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣ ಹಿಂಭಾಗದ ವಿಲ್ಸನ್ ಗಾರ್ಡನ್‌ನ 1ರಿಂದ 4ನೇ ಅಡ್ಡ ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದು, ಸಾಂಕ್ರಾಮಿಕ ರೋಗ ಹರಡುವ ತಾಣವಾಗಿ ಮಾರ್ಪಟ್ಟಿದೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಅವುಗಳ ಮೇಲೆ ನೀರು ನಿಂತಿರುವ ಕಾರಣ ಸವಾರರು ಭಯದಲ್ಲೇ ಸಂಚರಿಸುವ ಸ್ಥಿತಿಯಿದೆ.
ಬಾಯ್ತೆರೆದ ಮ್ಯಾನ್‌ಹೋಲ್‌ಗಳು: ವಿಲ್ಸನ್ ಗಾರ್ಡನ್‌ನ ಎರಡನೇ ಅಡ್ಡ ರಸ್ತೆಯಲ್ಲಿ ಮ್ಯಾನ್‌ಹೋಲ್ ಬಾಯ್ತರೆದುಕೊಂಡು ಒಳಚರಂಡಿ ನೀರು ಹೊರಬರುತ್ತಿದೆ. ಪಕ್ಕದಲ್ಲಿಯೇ ಚರಂಡಿ ಇದ್ದರೂ, ನೀರು ಹೋಗುತ್ತಿಲ್ಲ. 3ನೇ ಅಡ್ಡರಸ್ತೆ ಮೇಲೆ ಕೆಸರು ಶೇಖರಣೆಗೊಂಡಿದೆ. ನಗರದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದ್ದು, ರಸ್ತೆ ಮೇಲೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕೆಂದು ಪಾಲಿಕೆ ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿದ್ದರೂ, ವಿಲ್ಸನ್ ಗಾರ್ಡನ್ ಅಧಿಕಾರಿಗಳು ಮಾತ್ರ ಆದೇಶ ಪರಿಗಣಿಸಿದಂತಿಲ್ಲ.
ರಸ್ತೆ ತುಂಬಾ ನೀರು ನಿಂತಿದೆ. ಮ್ಯಾನ್‌ಹೋಲ್‌ನಿಂದಲೂ ನೀರು ಹೊರಬರುತ್ತಿದ್ದು, ಸುತ್ತಲ ಪ್ರದೇಶ ದುರ್ವಾಸನೆ ಬೀರುತ್ತಿದೆ. ನಮಗಂತೂ ವ್ಯಾಪಾರ ನಡೆಸುವುದೇ ಕಷ್ಟವಾಗಿದೆ. ಎರಡು ದಿನಗಳ ಹಿಂದೆ ಬೈಕ್ ಸವಾರನೊಬ್ಬ ರಸ್ತೆ ಗುಂಡಿಗೆ ಬಿದ್ದು ಆಸ್ಪತ್ರೆ ಸೇರಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಿಸಬೇಕಿದೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿ ಅಮೃತ್.
ವಿಲ್ಸನ್ ಗಾರ್ಡನ್‌ನ ಅಡ್ಡರಸ್ತೆಗಳ ಕಾಂಕ್ರಿಟೀಕರಣ ಮಾಡಲಾಗುತ್ತಿದೆ. ಇನ್ನು ಮೂರ್‍ನಾಲ್ಕು ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ. ರಸ್ತೆ ಮೇಲೆ ನೀರೇ ನಿಲ್ಲಲ್ಲ.
-ಡಿ.ಚಂದ್ರಪ್ಪ, ಹೊಂಬೇಗೌಡ ನಗರ ವಾರ್ಡ್ ಸದಸ್ಯ