Advertisement

ಮಳೆಕೊಯ್ಲು ಅಳವಡಿಕೆಯತ್ತ ಅಪಾರ್ಟ್‌ಮೆಂಟ್‌ಗಳ ಒಕ್ಕೊರಳ ನಿರ್ಧಾರ

11:03 PM Jul 24, 2019 | mahesh |

ಮಹಾನಗರ: ಉದಯವಾಣಿಯ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಮನೆ, ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಳೆಕೊಯ್ಲು ಅಳವಡಿಕೆ ಕಾರ್ಯ ನಡೆಯುತ್ತಿದೆ.

Advertisement

ಅದರಲ್ಲಿಯೂ ನಗರದ ಬಹಳಷ್ಟು ಅಪಾರ್ಟ್‌ಮೆಂಟ್‌ಗಳಲ್ಲಿ ಈಗ ಮಳೆಕೊಯ್ಲು ಅಳವಡಿಸುವತ್ತ ಅಲ್ಲಿನ ನಿವಾಸಿಗಳ ಅಸೋಸಿಯೇಷನ್‌ಗಳು ಕಾರ್ಯಪ್ರವೃತ್ತರಾಗುತ್ತಿರುವುದು ಉತ್ತಮ ಬೆಳವಣಿಗೆ. ಏಕೆಂದರೆ, ನಗರದಲ್ಲಿ ಕುಡಿಯುವ ನೀರಿನ ಬೇಡಿಕೆ ಹಾಗೂ ಉಪಯೋಗವು ಅಪಾರ್ಟ್‌ಮೆಂಟ್‌ಗಳಲ್ಲಿ ಜಾಸ್ತಿ ಇದೆ. ಹೀಗಿರುವಾಗ, ಇರುವ ನೀರಿನ ಮೂಲವನ್ನು ಅಥವಾ ಮಳೆ ನೀರನ್ನು ಸದ್ಬಳಕೆ ಮಾಡುವತ್ತ ಎಲ್ಲ ಅಪಾರ್ಟ್‌ಮೆಂಟ್‌ಗಳು ಗಮನಹರಿಸಿದರೆ, ಭವಿಷ್ಯದಲ್ಲಿ ಮಂಗಳೂರಿನಂಥ ನಗರದಲ್ಲಿ ತಲೆದೋರಬಹುದಾದ ನೀರಿನ ಸಮಸ್ಯೆ ದೊಡ್ಡ ಪರಿಹಾರ ದೊರೆಯಬಹುದು.

ಉದಯವಾಣಿಯ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಣೆಗೊಂಡು ನಗರದಲ್ಲಿರುವ ಬಹಳಷ್ಟು ಅಪಾರ್ಟ್‌ಮೆಂಟ್‌ಗಳಲ್ಲಿ ಮಳೆಕೊಯ್ಲು ಅಳವಡಿಸುವ ಮೂಲಕ ಬೇರೆ ಅಪಾರ್ಟ್‌ಮೆಂಟ್‌ಗಳಿಗೂ ಸ್ಫೂರ್ತಿ ನೀಡುತ್ತಿರುವುದು ಗಮನಾರ್ಹ.

ಅಪಾರ್ಟ್‌ಮೆಂಟ್‌ನಲ್ಲಿ ಮಳೆಕೊಯ್ಲು
ಈ ಬಾರಿ ಬೇಸಗೆಯಲ್ಲಿ ಉಂಟಾದ ನೀರಿನ ತಾತ್ವಾರ ಹಾಗೂ ಪತ್ರಿಕೆಯ ಮಳೆಕೊಯ್ಲು ಅಭಿಯಾನದಿಂದ ಪ್ರೇರಿತಗೊಂಡು ನಗರದ ವಿ.ಟಿ.ರಸ್ತೆಯ ಜ್ಞಾನೇಶ್ವರಿ ಆಪಾರ್ಟ್‌ಮೆಂಟ್‌ನಲ್ಲಿ ಮಳೆಕೊಯ್ಲು ಅಳವಡಿಸಲಾಗಿದೆ.

ಒಟ್ಟು 50 ಮನೆಗಳಿರುವ ಈ ಅಪಾರ್ಟ್‌ಮೆಂಟ್‌ನಲ್ಲಿ ಬೋರ್‌ವೆಲ್ ವ್ಯವಸ್ಥೆ ಇದೆ. ಬೇಸಗೆ ಕಾಲದಲ್ಲಿ ನೀರಿನ ಒತ್ತಡ ಕಡಿಮೆಯಾಗುತ್ತಿತ್ತು. ಕೆಲವೊಮ್ಮೆ ಟ್ಯಾಂಕರ್‌ ನೀರು ಅವಲಂಬಿಸಬೇಕಾಗಿತ್ತು. ಈ ಸಮಸ್ಯೆಗೆ ಪರಿಹಾರ ಮಳೆಕೊಯ್ಲು ಮಾಡುವುದರಿಂದ ಸಿಗಬಹುದು ಎಂಬ ನಂಬಿಕೆಯಿಂದ ಅಳವಡಿಸಿದ್ದೇವೆ. ಕಟ್ಟಡಕ್ಕೆ ಬೀಳುವ ಮಳೆ ನೀರನ್ನು ಪೈಪ್‌ ಮೂಲಕ ಬೋರ್‌ವೆಲ್ಗೆ ಸಂಪರ್ಕ ಕೊಡಲಾಗಿದೆ. ಒಟ್ಟು ಒಂದೂವರೆ ಲಕ್ಷ ರೂ. ಖರ್ಚಾಗಿದೆ ಎಂದು ಹೇಳುತ್ತಾರೆ ಕೆ.ಎನ್‌. ಆಳ್ವ ಪತ್ರಿಕೆಗೆ ತಿಳಿಸಿದ್ದಾರೆ.

Advertisement

ಮಂಗಳ ಸಮೂಹ ಸಂಸ್ಥೆಗಳಲ್ಲೂ ಮಳೆಕೊಯ್ಲು ಅಳವಡಿಕೆ
ಮಂಗಳ ಸಮೂಹ ಸಂಸ್ಥೆಯೂ ಕೈ ಜೋಡಿಸಿದೆ, ಸಂಸ್ಥೆಯ ನಿರ್ದೇಶಕ ಡಾ| ಗಣಪತಿ ಅವರ ಮುತುವರ್ಜಿಯಿಂದ ತಮ್ಮ ಎಲ್ಲ ಸಂಸ್ಥೆಗಳಲ್ಲಿ ಮಳೆಕೊಯ್ಲು ಅಳವಡಿಸಿ ಮಾದರಿಯಾಗಿದ್ದಾರೆ.

ಮಂಗಳ ಕಾಲೇಜು ಸಮೂಹದ ಸಾಧಾರಣ ಒಂದೂವರೆ ಲಕ್ಷ ಚದರ ಮೀಟರ್‌ನಷ್ಟು ದೊಡ್ಡ ಕಟ್ಟಡವನ್ನು ಸಂಪೂರ್ಣವಾಗಿ ಬಳಸಿಕೊಂಡು ಮಳೆ ಕೊಯಿಲು ಮಾಡಿ ಬಂದ ಎಲ್ಲ ನೀರನ್ನು ಕಾಲೇಜು ಕ್ಯಾಂಪಸ್‌ನಲ್ಲಿ ಆಳವಡಿಸಿದ 5 ಬೋರ್‌ವೆಲ್ಗಳಲ್ಲಿ ನೀರಿನ ಮರು ಪೂರಣ ಮಾಡಿಸಲಾಗುತ್ತಿದೆ. ಇನ್ನೂ ಸಂಸ್ಥೆಯ ಹಾಸ್ಟೆಲ್ಗಳ ಬಳಕೆಯ ನೀರನ್ನು ಇಂಗಿಸಲಾಗುತ್ತಿದೆ. ಮಂಗಳ ಆಸ್ಪತ್ರೆಯ ಕಟ್ಟಡದ ನೀರನ್ನು ಆಸ್ಪತ್ರೆ ಆವರಣದ ಬಾವಿ ಮತ್ತು ಬೋರ್‌ವೆಲ್ಗಳಿಗೆ ಮರುಪೂರಣ ಮಾಡಲಾಗುತ್ತಿದೆ.

ಮಳೆ ನೀರು ವ್ಯರ್ಥವಾಗಿ ಹರಿದುಹೋಗುತ್ತಿದ್ದು, ಅದನ್ನು ತಡೆದು ಬಳಸುವ ಉದ್ದೇಶದಿಂದ ಮಳೆಕೊಯ್ಲು ಮಾಡಲಾಗುತ್ತಿದೆ. ಪ್ರತಿ ಮನೆ, ಸಂಸ್ಥೆಗಳಲ್ಲೂ ಮಳೆಕೊಯ್ಲು , ಜಲಮರುಪೂರಣದಂತಹ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.

ಅಭಿಯಾನಕ್ಕೆ ಒಂದು ತಿಂಗಳು: ಜನಾಭಿಪ್ರಾಯ

ತುಂಬಾ ಉಪಯುಕ್ತ

‘ಉದಯವಾಣಿ’ ಮಳೆಕೊಯ್ಲು ಅಭಿಯಾನವು ತುಂಬಾ ಉಪಯುಕ್ತವಾಗಿದೆ. ಅಂತರ್ಜಲ ಹೆಚ್ಚಿಸಲು ಸರಳ ವಿಧಾನವೇ ಮಳೆಕೊಯ್ಲು. ಈ ಬಾರಿ ಕಡಿಮೆ ಮಳೆಯಿಂದಾಗಿ ನೀರಿಗಾಗಿ ಜನ ತೊಂದರೆ ಅನುಭವಿಸಿದ್ದರು. ಮುಂದೆ ಅಂತಹ ತೊಂದರೆ ಎದುರಾಗದಂತೆ ಜನರನ್ನು ಎಚ್ಚಿಸುವ ಸಲುವಾಗಿ ಅಭಿಯಾನ ಸಹಕಾರಿ.

-ಸುಜಯಾ ಹರೀಶ್‌, ಬೆಳುವಾಯಿ

ಜಾಗೃತಿ ಹುಟ್ಟಿಸಲು ಪತ್ರಿಕೆ ಕಾರಣ

ನೀರಿನ ಮಹತ್ವ ಮತ್ತು ಅದನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಕರ್ತವ್ಯವನ್ನು ‘ಉದಯವಾಣಿ’ ಮಳೆಕೊಯ್ಲು ಅಭಿಯಾನ ತಿಳಿಸಿಕೊಟ್ಟಿದೆ. ಈ ವರ್ಷದ ಮಳೆಯನ್ನು ವಿಭಿನ್ನ ದೃಷ್ಟಿಯಲ್ಲಿ ನೋಡುವಂತೆ ಜಾಗೃತಿ ಹುಟ್ಟಿಸಲು ಪತ್ರಿಕೆ ಕಾರಣವಾಗಿದೆ. ಈಗಾಗಲೇ ಬಹುತೇಕ ಜನರು ತಮ್ಮ ಮನೆಯಲ್ಲಿ ಮಳೆಕೊಯ್ಲು ಅಳವಡಿಸಿರುವುದು ಉದಯವಾಣಿಯ ಜನಸೇವೆ ಎಂದೇ ಹೇಳಬಹುದು.
-ಆದಿತ್‌ ಪ್ರವೀಣ್‌ ಬೋಳಾರ, ಜೆಪ್ಪಿನಮೊಗರು

ನೀರುಳಿಕೆಗೆ ಸ್ಫೂರ್ತಿ

ಪ್ರತಿ ವರ್ಷ ಮಾರ್ಚ್‌-ಜೂನ್‌ ತಿಂಗಳಿನಲ್ಲಿ ತೆಂಕ ಎಡಪದವು ಗ್ರಾಮದ ಕಣ್ಣೋರಿ ದರ್ಖಾಸ್ತುವಿನಲ್ಲಿ ಜನತೆ ನೀರಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ವರ್ಷ ಸ್ಥಳೀಯ ಯುವಕರ ನೆರವಿನಿಂದ ಊರಲ್ಲಿ ಇರುವ ಏಕೈಕ ಸರಕಾರಿ ಭಾವಿಗೆ ಮಳೆಕೊಯ್ಲು ಅಳವಡಿಸಿದ್ದೇವೆ. ನೀರುಳಿಕೆಗೆ ಸ್ಫೂರ್ತಿ ನೀಡಿದ ‘ಉದಯವಾಣಿ’ ಅಭಿಯಾನಕ್ಕೆ ಧನ್ಯವಾದಗಳು.
-ನಿತ್ಯಾನಂದ ಎಡಪದವು
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿದ್ದಾರೆ.ಜತೆಗೆ ತಮ್ಮ ಖುಷಿಯನ್ನು ಉಳಿದವರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000
Advertisement

Udayavani is now on Telegram. Click here to join our channel and stay updated with the latest news.

Next