Advertisement
ಕೆಸರಿನ ಅಭಿಷೇಕ!ಉಪ್ಪಿನಂಗಡಿಯಲ್ಲಿರುವ ಕುಮಾರಧಾರಾ ನದಿಯ ಸೇತುವೆ ಮೇಲೆ ಪಾದಚಾರಿಗಳಿಗೆ ನಡೆದಾಡಲು ಕಷ್ಟಕರವಾದ ಸ್ಥಿತಿ ನಿರ್ಮಾಣಗೊಂಡಿದೆ. ಸೇತುವೆಯಲ್ಲಿ ನೀರು ಹೋಗಲು ಮಾಡಲಾದ ರಂಧ್ರಗಳು ಮಣ್ಣು, ಕಸಕಡ್ಡಿಗಳಿಂದ ತುಂಬಿ ಮುಚ್ಚಿ ಹೋಗಿದ್ದು, ನೀರಿನ ಹರಿಯುವಿಕೆಗೆ ತಡೆಯಾಗಿ, ಮಳೆ ಬಂದ ಸಂದರ್ಭ ನೀರು ಸೇತುವೆಯ ಮೇಲೆಯೇ ನಿಂತು ಸೇತುವೆಯೇ ದೊಡ್ಡ ಹಳ್ಳವಾಗಿ ಮಾರ್ಪಾಡಾಗುತ್ತದೆ. ಇದರ ಮೇಲೆ ವಾಹನಗಳು ಸಂಚರಿಸಿದರೆ ಬದಿಯಲ್ಲಿ ನಡೆದುಕೊಂಡು ಹೋಗುವವರ, ದ್ವಿಚಕ್ರ ವಾಹನ ಸವಾರರ ಮೈಮೇಲೆಲ್ಲ ಕೆಸರು ನೀರಿನ ಪ್ರೋಕ್ಷಣೆಯಾಗುತ್ತದೆ. ಇದರಿಂದ ಪಾದಚಾರಿಗಳು, ಶಾಲಾ ಮಕ್ಕಳು, ದ್ವಿಚಕ್ರ, ಅಟೋರಿಕ್ಷಾ ಸವಾರರು ಸಮಸ್ಯೆಗೆ ಸಿಲುಕುವಂತಾಗಿದೆ. ಇದು ಒಂದೇ ಸೇತುವೆಯ ಕಥೆಯಲ್ಲ. ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಹೆಚ್ಚಿನ ಎಲ್ಲ ಸೇತುವೆಗಳಲ್ಲೂ ಇದೇ ಅವಸ್ಥೆ.
ಆದರೆ ಇಕ್ಕೆಲಗಳಲ್ಲಿ ತುದಿಯಿಂದ ಕೊನೆಯವರೆಗೆ ಬೆಳೆದಿರುವ ಹುಲ್ಲುಗಳು ಹಾಗೆಯೇ ಇರುವುದರಿಂದ ಹಾಗೂ ಸೇತುವೆಯಲ್ಲಿ ಮಣ್ಣು ತುಂಬಿರುವುದರಿಂದ ರಂಧ್ರಗಳ ಮಣ್ಣು ತೆರವುಗೊಳಿಸಿದ ನಾಲ್ಕೈದು ದಿನದಲ್ಲೇ ಮತ್ತೆ ಸೇತುವೆಯ ಮೇಲಿನ ನೀರು ಹರಿದು ಹೋಗಲು ತಡೆಯಾಗಿ ಮೊದಲಿನ ಹಾಗೆ ಸಮಸ್ಯೆಗೆ ಕಾರಣವಾಗಿದೆ. ಆದ್ದರಿಂದ ಇನ್ನಾದರೂ ಹೆದ್ದಾರಿ ಪ್ರಾಧಿಕಾರ ಎಚ್ಚೆತ್ತುಕೊಂಡು ಸೇತುವೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆ ಮುಂದಾಗಬೇಕೆನ್ನುವುದೇ ಸಾರ್ವಜನಿಕರ ಆಗ್ರಹ. ಯುವಕರಿಂದ ಶ್ರಮದಾನ!
ಈ ಬಾರಿ ಮಳೆ ಬಂದು ಹಲವು ಮಂದಿ ಕೆಸರು ನೀರಿನಲ್ಲಿ ಸ್ನಾನ ಮಾಡಿದ ಬಳಿಕವೂ ಹೆದ್ದಾರಿ ಪ್ರಾಧಿಕಾರ ಎಚ್ಚೆತ್ತುಕೊಳ್ಳದಿದ್ದಾಗ ಬೇಸತ್ತ ನೆಕ್ಕಿಲಾಡಿಯ ಕೆಲ ಯುವಕರು ಕುಮಾರಧಾರಾ ನದಿಯ ಸೇತುವೆಯ ಇಕ್ಕೆಲಗಳಲ್ಲಿ ಹೂಳು ತುಂಬಿ ಮುಚ್ಚಿಹೋಗಿದ್ದ ರಂಧ್ರಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡುವ ಸಾಮಾಜಿಕ ಕಳಕಳಿ ತೋರಿಸಿದರು.