Advertisement

ಮಳೆ ನೀರು ಕೊಯ್ಲು ಕಡ್ಡಾಯ

11:50 AM Sep 13, 2019 | Team Udayavani |

ಹೊಸಕೋಟೆ: ನಗರಸಭೆಗೆ ಸೇರಿದ ಕಚೇರಿ ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ನಗರಸಭೆ ಕಚೇರಿಗೆ ಗುರುವಾರ ಭೇಟಿ ನೀಡಿ ಪ್ರಗತಿ ಪರಿಶೀಲಿಸಿ ನಂತರ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ನಗರದಪ್ರಮುಖ ಸಾರ್ವಜನಿಕ ಸ್ಥಳಗಳಾದ ಕಲ್ಯಾಣಮಂಟಪ, ಚಿತ್ರಮಂದಿರ, ಪೆಟ್ರೋಲ್ ಬಂಕ್‌, ಹೋಟೆಲ್, ವಾಣಿಜ್ಯ ಸಂಕೀರ್ಣಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಲು ಸೂಚಿಸುವುದಲ್ಲೆ, ನಗರಸಭೆ ಕಾಮಗಾರಿ ಕೈಗೊಂಡು ವೆಚ್ಚವನ್ನು ಭರಿಸಲು ಮಾಲೀಕರಿಗೆ ತಿಳಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಮಳೆ ನೀರು ಕೊಯ್ಲು ಅನುಷ್ಠಾದ ಬಗ್ಗೆ ಪ್ರತಿ ತಿಂಗಳೂ ನಡೆಯುವ ಸಭೆಯಲ್ಲಿ ಪ್ರಗತಿಯ ಮಾಹಿತಿ ನೀಡಬೇಕು. ಈ ಬಗ್ಗೆ ಅಂದಾಜು ವೆಚ್ಚದ ಕ್ರಿಯಾ ಯೋಜನೆ ತಯಾರಿಸಿ ಸಲ್ಲಿಸಿದಲ್ಲಿ ಮಂಜೂರಾತಿ ನೀಡಲಾಗುವುದು ಎಂದರು.

ಆದಾಯ ವೃದ್ಧಿಗೆ ಆದ್ಯತೆ: ನಗರ ಸಭೆ ವ್ಯಾಪ್ತಿಯಲ್ಲಿ ಖಾಸಗಿ ಸ್ಥಳಗಳಲ್ಲಿ ಅಳವಡಿಸಿಕೊಂಡಿರುವ ಜಾಹಿರಾತು ಫ‌ಲಕಗಳಿಗೂ ಶುಲ್ಕ ವಿಧಿಸಿ ಸಂಗ್ರಹಿಸುವ ಮೂಲಕ ಆದಾಯ ವೃದ್ಧಿಗೆ ಆದ್ಯತೆ ನೀಡಬೇಕು. ನಗರಸಭೆ ಸಿಬ್ಬಂದಿಗೆ ಆಸ್ತಿ ತೆರಿಗೆ ಸಂಗ್ರಹಣೆ ಬಗ್ಗೆ ಪ್ರತಿ ತಿಂಗಳೂ ಗುರಿ ನಿಗದಿಪಡಿಸಬೇಕು. ಸಾಧಿಸಲು ನಿರ್ಲಕ್ಷ್ಯ ತೋರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು. ನಗರಸಭೆಯ ವಾಣಿಜ್ಯ ಮಳಿಗೆಗಳಲ್ಲಿ ಕೆಲವರು ಬಾಡಿಗೆ ಪಾವತಿಸದಿರುವುದು ಕಂಡುಬಂದಿದ್ದು ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಅವೈಜ್ಞಾನಿಕ ಕಾಮಗಾರಿ?: ನಗರಸಭೆಯ ವ್ಯಾಪ್ತಿಯ ಬಡಾವಣೆಗಳಲ್ಲಿ ಕೈಗೊಂಡಿರುವ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಎರಡೂ ಬದಿಯಲ್ಲೂ ಚರಂಡಿಗಳು ನಿರ್ಮಾಣಗೊಳ್ಳದ ಕಾರಣ ತೀವ್ರ ಸಮಸ್ಯೆಯಾಗುವುದಲ್ಲದೇ ಹಣ ಪೊಲಾಗಿದೆ ಎಂದು ವಿಶ್ವೇಶ್ವರಯ್ಯ ಬಡಾವಣೆಯ ನಿವಾಸಿ ಟೌನ್‌ ಬ್ಯಾಂಕ್‌ನ ಮಾಜಿ ಉಪಾಧ್ಯಕ್ಷ ಎಸ್‌.ಮಂಜುನಾಥ್‌ ಮನವಿ ಸಲ್ಲಿಸಿದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

Advertisement

ನಗರಸಭೆ ಪೌರಾಯುಕ್ತ ನಿಸಾರ್‌ ಅಹಮದ್‌, ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್‌ ಲಕ್ಷ್ಮೀದೇವಿ, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಕಾಮಗಾರಿ ವಿಳಂಬಕ್ಕೆ ಅಸಮಾಧಾನ:

ನಗರದಲ್ಲಿ 2013-14ರಲ್ಲಿ ಕೈಗೊಂಡಿರುವ ಒಳಚರಂಡಿ ಕಾಮಗಾರಿಯನ್ನು ಇನ್ನೂ ಪೂರ್ಣ ಗೊಳಿಸದ ಬಗ್ಗೆ ಜಿಲ್ಲಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಸ್ಪಷ್ಟನೆ ನೀಡಿದ ನಗರಸಭೆ ಅಧಿಕಾರಿಗಳು ಸರ್ಕಾರದ ಅನುದಾನ ಬಿಡುಗಡೆ ತಡವಾಗುತ್ತಿರುವ ಕಾರಣ ಕಾಮಗಾರಿ ಕುಂಠಿತಗೊಳ್ಳುತ್ತಿದೆ. 1ನೇ ಹಂತದ ಶೇ.70ರಷ್ಟು ಕಾಮಗಾರಿಯನ್ನು ಮುಕ್ತಾಯಗೊಳಿಸಿ 2020ರ ಮಾರ್ಚ್‌ ವೇಳೆಗೆ ಸಾರ್ವಜನಿಕರ ಬಳಕೆಗೆ ನೀಡಲು ಉದ್ದೇಶಿಸ ಲಾಗಿದೆ. 2ನೇ ಹಂತದ ಕಾಮಗಾರಿ ಸಹ ಪೂರ್ಣಗೊಂಡಿದ್ದು ಸಂಸ್ಕರಣಾ ಘಟಕ ನಿರ್ಮಾಣದ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅನುಮತಿ ದೊರಕದ ಕಾರಣ ತಡವಾಗುತ್ತಿದೆ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next