Advertisement

ಮಳೆ ನೀರು ಕೊಯ್ಲು ಅನಿವಾರ್ಯ; ಇನ್ನಾದರೂ ಎಚ್ಚೆತ್ತು ಮಳೆ ನೀರು ಸಂಗ್ರಹಿಸಿ

12:25 AM May 23, 2019 | sudhir |

ಬ್ರಹ್ಮಾವರ: ಪ್ರಸ್ತುತ ನಾಡಿನಾದ್ಯಂತ ಕೇಳಿ ಬರುವ ಸಮಸ್ಯೆ ನೀರ ಬವಣೆ. ನೀರು ನಿಧಿ ಎನ್ನುವ ತಜ್ಞರ ನುಡಿಕಟ್ಟು ಸತ್ಯ ಅರಿವಾಗತೊಡಗಿದೆ. ಈಗಲಾದರೂ ಎಚ್ಚೆತ್ತು ಮಳೆ ನೀರು ಸಂಗ್ರಹಕ್ಕೆ ಮನಸ್ಸು ಮಾಡಬೇಕಿದೆ.

Advertisement

ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಜನ ಜೀವನ ನಡೆಸುತ್ತಿರುವವರು ಸುಮಾರು ವಾರ್ಷಿಕ 4,000 ಮಿ.ಮೀ. ನಷ್ಟು ಮಳೆನೀರು ಪಡೆದರೂ ಬರಗಾಲ ಕಾಡುತ್ತಿರುವುದು ದುರದೃಷ್ಟ. ಇದಕ್ಕಾಗಿ ಜಾಗೃತರಾಗಬೇಕಿದ್ದು ಮಳೆ ನೀರ ಕೊಯ್ಲಿನ ಪದ್ಧತಿಗಳನ್ನು ಅನುಷ್ಠಾನಗೊಳಿಸಲೇಬೇಕು.

ಇದು ಮೂರು ವಿಧಾನಗಳನ್ನು ಹೊಂದಿದೆ
ಛಾವಣಿ ಮಳೆ ನೀರ ಸಂಗ್ರಹ
ಮಾಡಿನ‌ ಮೇಲೆ ಬೀಳುವ ಮಳೆ ನೀರನ್ನು ಪೈಪ್‌ಗ್ಳ ಮೂಲಕ ಹಾಯಿಸಿ ಮನೆಯ ಆಸುಪಾಸಿನಲ್ಲಿ ಒಂದು ತೊಟ್ಟಿ ನಿರ್ಮಿಸಿ, ಅದರಲ್ಲಿ ಸಂಗ್ರಹವಾಗುವ ನೀರನ್ನು ಉಪಯೋಗಿಸುವುದು. ಅಗತ್ಯವಾದ ಶೋಧಕ ಹಾಗೂ ಟಾಂಕಿ ನಿರ್ಮಾಣವನ್ನು ನಿಯಮದಂತೆ ರಚಿಸಬೇಕು.

ಜಲ ಮರುಪೂರಣ
ಇದು ಮಿತವ್ಯಯಕಾರಿ. ಬೀಳುವ ಮಳೆಯನ್ನು ಇಂಗಿಸ‌ಬೇಕು. ಇದು ನಮ್ಮ ವಾಸದ ಮನೆ, ಆವರಣ, ತೋಟ, ಮೈದಾನ, ಬಯಲುಗಳಲ್ಲಿ ಮಾಡಬೇಕು. ಇದರಿಂದ ಅಂತರ್ಜಲ ವೃದ್ಧಿಯಾಗಿ ನೀರಿನ ಬವಣೆ ಹೋಗಲಾಡಿಸಬಹುದು. ಬೀಳುವ ಮಳೆ ನೀರನ್ನು ತಡೆಯಲು ಪ್ರಮುಖವಾಗಿ ಮಾಡಬೇಕಾದುದು ಮನೆಯಂಗಳ, ತೋಟ, ಕೃಷಿ ಭೂಮಿ ಎಲ್ಲವುಗಳನ್ನು ಸಾಧ್ಯವಾದಷ್ಟು ಸಮತಟ್ಟುಗೊಳಿಸುವುದು. ಬಿದ್ದ ಮಳೆ ನೀರು ರಭಸದಿಂದ ಹರಿದುಹೋಗದಂತೆ ಚಿಕ್ಕ ಚಿಕ್ಕ ಬದುಗಳನ್ನು ಹಾಕಿ, ಅಲ್ಲಲ್ಲಿ ಚಿಕ್ಕ ಚಿಕ್ಕ ಇಂಗು ಗುಂಡಿಗಳನ್ನು ಅನುಕೂಲಕ್ಕೆ ತಕ್ಕಂತೆ ನಿರ್ಮಿಸಬೇಕು. ಇಂಗು ಗುಂಡಿಗಳನ್ನು ಪರ್ವತ ಗುಂಡಿ, ತೊಟ್ಟಿಲು ಗುಂಡಿ, ಬಟ್ಟಲುಗುಂಡಿ, ಕತ್ತರಿ ಗುಂಡಿ, ಶೋಧಕ ಗುಂಡಿ ಎನ್ನುವ ವಿಧಾನಗಳಿಂದ ನಿರ್ಮಿಸಬಹುದು.

ಫಲವತ್ತಾದ ಮಣ್ಣಿನ ಸಂರಕ್ಷಣೆ
ಮಳೆಗಾಲದ ಆರಂಭದಲ್ಲಿ ರಭಸದಿಂದ ಸುರಿಯುವ ಮಳೆ ನೀರು ನಮ್ಮ ಮನೆಯಂಗಳದ, ತೋಟದ, ಗದ್ದೆಯ ಉತ್ತಮವಾದ ಸಾವಯವ ಮಣ್ಣನ್ನು ಕೊಚ್ಚಿಕೊಂಡು ಮೇಲ್ಮಣ್ಣಿನ ಸವಕಳಿಯಾಗುತ್ತದೆ. ಇದನ್ನು ತಡೆಗಟ್ಟಿ ಹೆಚ್ಚಿನ ಪ್ರಮಾಣದ ನೀರನ್ನು ಇಂಗಿಸುವ ಪ್ರಯತ್ನ ಮಾಡಿದರೆ ಅಂತರ್ಜಲ ವೃದ್ಧಿಯಾಗುತ್ತದೆ.

Advertisement

ಕರಾವಳಿಯಲ್ಲಿ ಮಳೆಗಾಲದ ಪ್ರಾರಂಭದಲ್ಲಿ ಅತ್ಯಂತ ರಭಸವಾಗಿ ಮಳೆ ಬೀಳುವುದರಿಂದ ಈ ನೀರನ್ನು ಸಂಪೂರ್ಣವಾಗಿ ಇಂಗಿಸಲು ಸಾಧ್ಯವೂ ಇಲ್ಲ, ಸಾಧುವೂ ಅಲ್ಲ, ಕಾರಣ ನೈಸರ್ಗಿಕವಾಗಿ ಜಲಚರಗಳ ಅಭಿವೃದ್ಧಿಗೆ ನೀರಿನ ಅಗತ್ಯವೂ ಇದೆ. ಆದರೆ ಅಂರ್ತಜಲ ವೃದ್ಧಿ ಹಾಗೂ ಭೂ ಸವಕಳಿ ಕಡಿಮೆ ಮಾಡಲು ಮಾರ್ಗೋಪಾಯಗಳನ್ನು ನ‌ಡೆಸಲೇಬೇಕು. ಮಳೆಗಾಲದ ಪ್ರಾರಂಭದಲ್ಲಿ ಅಸಾಧ್ಯವಾದರೂ, ಒಂದೆರಡು ತಿಂಗಳ ಅನಂತರದಲ್ಲಿ ಬೀಳುವ ಮಳೆ ನೀರನ್ನು ಸಂಪೂರ್ಣವಾಗಿ ಇಂಗಿಸಿ, ಅಂರ್ತಜಲವೃದ್ಧಿಗೊಳಿಸಿ ಎಲ್ಲಾ ತೆರೆದ ಬಾವಿ ಹಾಗೂ ಕೊಳವೆ ಬಾವಿ (ಬೋರ್‌ವೆಲ್‌)ಗಳಲ್ಲಿ ನೀರಿನ ಲಭ್ಯತೆಯನ್ನು ಮಾಡಿಕೊಳ್ಳಬಹುದು. ಮಳೆಗಾಲದಲ್ಲಿ ಕೊಳವೆ ಬಾವಿ(ಬೋರ್‌ವೆಲ್‌)ಗಳಿಗೆ ಜಲಮರುಪೂರಣ ಕಾರ್ಯವನ್ನು ವಿವಿಧ ರೀತಿಯಲ್ಲಿ ಅಳವಡಿಸಿಕೊಳ್ಳಬಹುದು. ತೆರೆದ ಬಾವಿಗಳಿಗೆ ಜಲ ಮರುಪೂರಣವನ್ನು ಪ್ರತಿಯೊಬ್ಬರೂ ತಮ್ಮ ಮನೆಯ ಆವರಣದ ಮಳೆ ನೀರನ್ನೇ ಉಪಯೋಗಿಸಿ ಕೊಳ್ಳಬಹುದು.

ಹೂಳೆತ್ತುವಿಕೆ
ಈ ವಿಧಾನ ಸರಕಾರದಿಂದ, ವಿವಿಧ ಸಂಘ ಸಂಸ್ಥೆಗಳಿಂದ ಮಾಡಬೇಕಾದ ಕಾರ್ಯ. ಹಿಂದೆ ರಾಜ ಮಹಾರಾಜರುಗಳೇ ನಿರ್ಮಿಸಿರುವ ಕೆ‌ರೆ, ಸರೋವರ, ಮದಗಗಳು ಇಂದು ಹೂಳು ತುಂಬಿ ಮಳೆ ನೀರು ಇಂಗದೆ ಮಳೆಗಾಲದಲ್ಲಿ ಮಾತ್ರ ನೀರು ಶೇಖರಣೆಯಾಗುವ ಕೆರೆಗಳಾಗಿವೆ. ಇವುಗಳ ಕೆಸರು ತೆಗೆದಲ್ಲಿ ಪ್ರಯೋಜನಕಾರಿ.

ಮಳೆ ನೀರು ಸಂಗ್ರಹ ಪ್ರಾತ್ಯಕ್ಷಿಕೆ
ಭಾರತೀಯ ವಿಕಾಸ ಟ್ರಸ್ಟ್‌ ಬೆಂಗಳೂರಿನ ಸೆಲ್ಕೋ ಸೋಲಾರ್‌ ಪ್ರತಿಷ್ಠಾನದ ನೆರವಿನಿಂದ ಜಲಜಾಗೃತಿ ಸಂಘದ ಮೂಲಕ ಮಳೆ ನೀರು ಸಂಗ್ರಹದ ವಿವಿಧ ರೀತಿಯ ಪ್ರಾತ್ಯಕ್ಷಿಕೆಗಳನ್ನು ಪ್ರೌಢ ಶಾಲೆಗಳ ಆವರಣದಲ್ಲಿ ನಿರ್ಮಿಸುತ್ತಿದೆ. ಬಾರಕೂರು, ಕೂರಾಡಿ, ನಡೂರು, ಸಾೖಬ್ರಕಟ್ಟೆ, ಕುಂಜಾಲು, ಪೆರ್ಡೂರು, ಚೇರ್ಕಾಡಿ, ಪಟ್ಲ, ಪರ್ಕಳ, ಕೋಟ, ವಡ್ಡರ್ಸೆ, ಕಾವಡಿ, ಆವರ್ಸೆ, ಕೊಕ್ಕರ್ಣೆ, ಕರ್ಜೆ, ಬ್ರಹ್ಮಾವರ, ಹಿರಿಯಡ್ಕ ಪ್ರೌಢ ಶಾಲೆಗಳಲ್ಲಿ ಹಾಗೂ ದ.ಕ. ಜಿಲ್ಲೆಯ 8 ಪ್ರೌಢ ಶಾಲೆಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ. ಜೂ.15ರ ಅನಂತರ ಆಯಾ ಪರಿಸರದವರು ವೀಕ್ಷಿಸಬಹುದಾಗಿದೆ.

ಅಂತರ್ಜಲ ವೃದ್ಧಿ ಮಾಡಬೇಕು
ನಾವು ಸಂಘ ಸಂಸ್ಥೆಗಳ ಮೂಲಕ ಸಮೀಪದ ಕೆರೆಯ ಸ್ವಲ್ಪ ಭಾಗದಲ್ಲಾದರೂ ಕೆಸರು ತೆಗೆದು ಮಳೆ ನೀರನ್ನು ಇಂಗಿಸಬಹುದು. ಮುಖ್ಯವಾಗಿ ನಮ್ಮ ತೆರೆದ ಬಾವಿ, ಸನಿಹದ ಕೆರೆ, ಹಳ್ಳಗಳ ಕೆಸರು 2-3 ವರ್ಷಕ್ಕೊಮ್ಮೆಯಾದರೂ ತೆಗೆಯಿಸಿ ಅಂತರ್ಜಲ ವೃದ್ಧಿ ಮಾಡಬೇಕು.
-ಬಾರಕೂರು ಸೀತಾರಾಮ ಶೆಟ್ಟಿ, ಸಂಪನ್ಮೂಲ ವ್ಯಕ್ತಿ, ಭಾರತೀಯ ವಿಕಾಸ ಟ್ರಸ್ಟ್‌

Advertisement

Udayavani is now on Telegram. Click here to join our channel and stay updated with the latest news.

Next