Advertisement
ಬೊಮ್ಮನಹಳ್ಳಿ ವಲಯದ ಹಲವೆಡೆ ಶನಿವಾರ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನಾಗರಿಕರು ಇಡೀ ರಾತ್ರಿ ಜಾಗರಾಣೆ ಮಾಡುವಂತಾಯಿತು. ಕಳೆದ ವರ್ಷವೂ ಈ ಭಾಗದಲ್ಲಿ ಭಾರಿ ಮಳೆಗೆ ಹಲವು ಪ್ರದೇಶಗಳು ಜಲಾವೃತಗೊಂಡಿದ್ದವು. ಮತ್ತೆ ಅದೇ ಭಾಗದಲ್ಲಿ ಸಮಸ್ಯೆ ಮುಂದುವರಿದಿದ್ದು, ಜನರು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
Advertisement
ಕಾಲುವೆ ಮೇಲೆ ಕಟ್ಟಡ: ಹರಿಯದ ನೀರುಬೊಮ್ಮನಹಳ್ಳಿಯ ಹಲವಾರು ಭಾಗಗಳಲ್ಲಿ ಪ್ರತಿ ವರ್ಷ ಒಂದಿಲ್ಲ ಒಂದು ಪ್ರದೇಶ ಮಳೆಯಿಂದ ತೊಂದರೆಗೆ ಒಳಗಾಗುತ್ತದೆ. ಮಳೆ ಬಂದು ಮನೆಗಳಿಗೆ ನೀರು ನುಗ್ಗಿದಾಗ ಜನರು ಬಿಬಿಎಂಪಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತರೆ. ಆದರೆ, ಈ ಭಾಗದ ಬಹುತೇಕ ಬಡಾವಣೆಗಳಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿರುವುದರಿಂದ ನೀರು ಹರಿಯಲು ಸಾಧ್ಯವಾಗುತ್ತಿಲ್ಲ. ಇದರೊಂದಿಗೆ ಕಾಲುವೆಯ ಎರಡೂ ಭಾಗಗಳಲ್ಲಿ ಜಾಗ ಬಿಡದೆ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲಾಗಿದ್ದು, ಹಲವು ಕಡೆ ಕಾಲುವೆಯನ್ನು ತಿರುಗಿಸಿರುವುದರಿಂದ ನೀರು ಹಿಮ್ಮುಖವಾಗಿ ಹರಿದು ಅನಾಹುತ ಸಂಭವಿಸುತ್ತಿದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ. ನೀರು ನುಗ್ಗಿರುವುದು ಎಲ್ಲಿ?
ಬೇಗೂರು ವಾರ್ಡ್‌ನ ವಿಶ್ವಪ್ರಿಯ ಬಡಾವಣೆಯಲ್ಲಿ ಶನಿವಾರ ರಾತ್ರಿ ಬಡಾವಣೆಯ ಮೂರು ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದವು. ಈ ಕುರಿತು ದೂರು ನೀಡಿದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆ ಪರಿಹರಿಸಲು ಮುಂದಾಗಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರೊಂದಿಗೆ ಸುಬ್ರಹ್ಮಣ್ಯಪುರ, ಹೊಂಗಸಂದ್ರ, ಕೋಡಿಚಿಕ್ಕನಹಳ್ಳಿ, ಹೊಸಕೆರೆಹಳ್ಳಿಯ ದತ್ತಾತ್ರೇಯ ದೇವಸ್ಥಾನ, ಬಿಟಿಎಂ ಬಡಾವಣೆ, ಕುಮಾರಸ್ವಾಮಿ ಬಡಾವಣೆ, ಚಿಕ್ಲಲ್ಲಂದ್ರ, ವಸಂತವಲ್ಲಭನಗರ, ಎಚ್‌ಎಸ್‌ಆರ್ ಬಡಾವಣೆ ಸೇರಿದಂತೆ ಶಿವಾನಂದ ವೃತ್ತದ ರೈಲ್ವೆ ಅಂಡರ್‌ಪಾಸ್, ಶಾಂತಿನಗರ ಮೇಲ್ಸೇತುವೆ, ಸ್ಯಾಂಕಿ ರಸ್ತೆ ಅಂಡರ್ ಪಾಸ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ವಾಹನಗಳು ಮುಳುಗುವಷ್ಟು ಪ್ರಮಾಣದ ನೀರು ಸಂಗ್ರಹವಾಗಿತ್ತು. ಮರ ಬಿದ್ದು ಹಲವರಿಗೆ ಗಾಯ
ಶನಿವಾರ ಮಳೆ ಅಶ್ವತ್ಥನಗರದಲ್ಲಿ ಮರ ಧರೆಗುರುಳಿದ್ದು, ಸೌಮ್ಯ ಎಂಬುವವರ ಮನೆಗೆ ಹಾನಿಯಾಗಿ, ಮನೆ ಬೀಳುವ ಸ್ಥಿತಿಯಲ್ಲಿದೆ. ಮರ ಬಿದ್ದು ದಿನ ಕಳೆದರೂ ತೆರವುಗೊಳಿಸಲು ಮುಂದಾಗದ ಪಾಲಿಕೆ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಹಾನಿಯಾಗಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಜೆಪಿನಗರದ ರಾಗಿಗುಡ್ಡದ ಬಳಿ ಶನಿವಾರ ಸಂಜೆ ಮಳೆಯಿಂದ ರಕ್ಷಣೆ ಪಡೆಯಲು ನಿಂತಿದ್ದ ಮಹಿಳೆಯ ಮೇಲೆ ಮರದ ಕೊಂಬೆ ಉರುಳಿದ ಪರಿಣಾಮ ಅವರ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸಂಜಯಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಿರಿನಗರದಲ್ಲಿ ಬೈಕ್ ಸವಾರನ ಮೇಲೆ ಮರ ಬಿದ್ದು ತೀವ್ರವಾಗಿ ಗೊಂಡಿರುವ ಬಗ್ಗೆ ವರದಿಯಾಗಿದೆ. ಮೇಯರ್ ಪರಿಶೀಲನೆ
ಮಳೆಗೆ ಪ್ರವಾಹ ಪೀಡಿತವಾಗಿರುವ ಬಿಳೇಕಳ್ಳಿ, ಕೋಡಿಚಿಕ್ಕನಹಳ್ಳಿಯ ಮನೆಗಳಿಗೆ ಮೇಯರ್ ಜಿ.ಪದ್ಮಾವತಿ, ಭೇಟಿ ನೀಡಿ ಪರಿಶೀಲಿಸಿದರು. ಮನೆ, ಅಪಾರ್ಟ್‌ಮೆಂಟ್‌ಗಳಲ್ಲಿ ನಿಂತಿರುವ ಮಳೆ ನೀರನ್ನು ಪಂಪ್ ಮಾಡಿ ಹೊರಹಾಕುವಂತೆ ಅಧಿಕಾರಿಗಳಿಗೆ ಮೇಯರ್ ಸೂಚನೆ ನೀಡಿದರು. ನಂತರ ಅರಕೆರೆ, ಮಡಿವಾಳ ಕೆರೆ ಸುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು. ಶಾಸಕ ಸತೀಶ್ ರೆಡ್ಡಿ ಉಪಸ್ಥಿತರಿದ್ದರು.