ಭಾಲ್ಕಿ: ಚಳಕಾಪುರ ಗ್ರಾಮದಲ್ಲಿ ಭಿಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಮಣ್ಣು ಮತ್ತು ಮಳೆ ನೀರು ಸಂರಕ್ಷಣಾ ಮಹತ್ವದ ಕುರಿತು ರೈತರಿಗೆ ಪ್ರಾತ್ಯಕ್ಷಿಕೆ ತೋರಿಸಿದರು. ಈ ವೇಳೆ ಕೃಷಿ ಶಿಬಿರಾರ್ಥಿ ಮುತ್ತುರಾಜ್, ನಮ್ಮ ದೇಶದ ಬಹುಪಾಲು ಭೂಮಿ ಮಳೆಯನ್ನೇ ಅವಲಂಬಿಸಿದ್ದು, ಇಂತಹ ಪ್ರದೇಶಗಳಲ್ಲಿ ಬೀಳುವ ಮಳೆ ನೀರು ಸುಮ್ಮನೆ ವ್ಯರ್ಥವಾಗಿ ನದಿ, ಹಳ್ಳ, ಕೆರೆಗಳನ್ನು ಸೇರುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ರೈತರು ಮಳೆಯ ನೀರನ್ನು ಸಂಪೂರ್ಣವಾಗಿ ಕೃಷಿ ಭೂಮಿಗೆ ಬಳಸುವುದು ಬಹಳ ಅಗತ್ಯವಾಗಿದೆ ಎಂದು ಹೇಳಿದರು. ಶಿಬಿರದ ವಿಶೇಷ ಸಲಹೆಗಾರ ಡಾ| ಜನಾರ್ಧನ ಕಾಂಬಳೆ ಮಾತನಾಡಿ, ಮಳೆ ನೀರು ಕೋಯ್ಲು ಪರಿಸರ ಸ್ನೇಹಿ ಮತ್ತು ಸರಳ ತಂತ್ರಜ್ಞಾನವಾಗಿದ್ದು, ಅತ್ಯಂತ ಕಡಿಮೆ ಖರ್ಚಿನಲ್ಲಿ ನಿರ್ವಹಿಸಬಹುದಾಗಿದೆ. ಈ ಪದ್ಧತಿಯಿಂದ ಬರಗಾಲದಲ್ಲಿ ನೆರವಾಗುವುದು, ಅಲ್ಲದೇ ಅಂರ್ತಜಲ ಪ್ರಮಾಣ ಹೆಚ್ಚುವುದು. ಮತ್ತು ಮಣ್ಣಿನ ಸವಕಳಿಯನ್ನೂ ಕಡಿಮೆ ಮಾಡಬಹುದಾಗಿದೆ ಎಂದು ಹೇಳಿದರು. ಇದೆ ವೇಳೆ ಗ್ರಾಮದ ಶಾಲೆಯ ಮುಂಭಾಗದ ಬೆಟ್ಟದಲ್ಲಿ ಶಿಬಿರಾರ್ಥಿಗಳು ಪ್ರಾಯೋಗಿಕವಾಗಿ ಮಳೆ ನೀರು ತಡೆ ಕಾಂಟೂರ್ ಬದುಗಳನ್ನು ನಿರ್ಮಿಸಿ ರೈತರಿಗೆ ಪ್ರಾತ್ಯಕ್ಷಿಕೆ ತೋರಿಸಿದರು. ಶಾಲೆಯ ಮುಖ್ಯಶಿಕ್ಷಕ ವೀರೇಂದ್ರ ಬೂದಾರ, ಎಸ್ ಡಿಎಂಸಿ ಅಧ್ಯಕ್ಷ ಅಶೋಕ ಹಜ್ಜರಗಿ, ಶ್ರೀ ಸಿದ್ದಾರೂಢಸ್ವಾಮಿ ಸ್ವಾತಂತ್ರ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.