Advertisement

ಅ. 31ರ ವರೆಗೆ ಮಳೆ?

01:10 AM Oct 30, 2019 | Team Udayavani |

ಮಣಿಪಾಲ: “ಕ್ಯಾರ್‌’ ಚಂಡಮಾರುತದ ಪ್ರಭಾವ ಮರೆಯಾಗಿ ಕರಾವಳಿಗರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಂತೆಯೇ ಕೊಮೊರಿನ್‌ ಮತ್ತು ಹಿಂದೂ ಮಹಾಸಾಗರದ ಆಸುಪಾಸಿನ ಭಾಗದಲ್ಲಿ ರೂಪುಗೊಂಡಿರುವ ನಿಮ್ನ ಒತ್ತಡ ಮತ್ತೆ ಮಳೆಯನ್ನು ತರುವುದೇ ಎಂಬ ಕಳವಳಕ್ಕೆ ಕಾರಣವಾಗಿದೆ.

Advertisement

ಈ ನಿಮ್ನ ಒತ್ತಡವು ಅ. 30 ಮತ್ತು 31ರ ಹೊತ್ತಿಗೆ ಲಕ್ಷದ್ವೀಪ – ಮಾಲ್ಡೀವ್ಸ್‌ ಸಮೀಪದಲ್ಲಿ ವಾಯುಭಾರ ಕುಸಿತವಾಗಿ ಪರಿವರ್ತನೆ ಹೊಂದುವ ಸಾಧ್ಯತೆ ಇದ್ದು, ಕ್ಯಾರ್‌ ಸಂಚರಿಸುವ ದಾರಿಯಲ್ಲಿ ಸಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಈ ವಾಯುಭಾರ ಕುಸಿತದ ಪ್ರಭಾವದಿಂದ ತಮಿಳುನಾಡು, ಕೇರಳ, ಲಕ್ಷದ್ವೀಪ ಮತ್ತು ಕರ್ನಾಟಕದಲ್ಲಿ ಅ. 31ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಕಟಾವಿಗೆ ಅಡ್ಡಿ?
“ಕ್ಯಾರ್‌’ ಚಂಡಮಾರುತದ ಪ್ರಭಾವದಿಂದ ಮೂರು ದಿನಗಳ ಕಾಲ ಭಾರೀ ಮಳೆಯಾಗಿದ್ದು, ಬಹುತೇಕ ಕಡೆ ಗದ್ದೆಗಳಲ್ಲಿ ಬೆಳೆದು ನಿಂತ ಭತ್ತದ ಪೈರು ಧರಾಶಾಯಿಯಾಗಿದೆ. ಕರಾವಳಿಯಲ್ಲಿ ಸೋಮವಾರದಿಂದ ಬಿಸಿಲಿನಿಂದ ಕೂಡಿದ ಕಟಾವಿಗೆ ಪೂರಕ ವಾತಾವರಣ ಇದೆ. ಆದರೆ ಮತ್ತೆ ಮಳೆ ಸುರಿದರೆ ಕಟಾವಿಗೆ ಅಡ್ಡಿಯಾಗುವ ಸಾಧ್ಯತೆ ಇದೆ. ಪೈರು ಗಾಳಿ ಮಳೆಗೆ ನೆಲ ಹಿಡಿದರೆ ಯಾಂತ್ರೀಕೃತ ಕಟಾವು ನಡೆಸುವುದು ಕಷ್ಟಸಾಧ್ಯ. ಈಗಾಗಲೇ ಭಾರೀ ಮಳೆಯಿಂದಾಗಿ ಕಟಾವಾಗಿ ಗದ್ದೆಗಳಲ್ಲಿದ್ದ ಪೈರು, ಕಟಾವಿಗೆ ಸಿದ್ಧವಾಗಿರುವ ಬೆಳೆ ಒದ್ದೆಯಾಗಿ ಮೊಳಕೆಯೊಡೆಯುವ ಸ್ಥಿತಿಯಲ್ಲಿದ್ದು, ರೈತರು ನಷ್ಟದ ಭಯದಲ್ಲಿದ್ದಾರೆ.

ದೂರಕ್ಕೆ ಚಲಿಸಿದ “ಕ್ಯಾರ್‌’
ಇದೇವೇಳೆ ಅರಬ್ಬೀ ಸಮುದ್ರದ ವಾಯವ್ಯ ಭಾಗದಲ್ಲಿ ರೂಪುಗೊಂಡು ಕರಾವಳಿಯಲ್ಲೂ ಭಾರೀ ಗಾಳಿ ಮಳೆಯನ್ನು ಉಂಟು ಮಾಡಿದ್ದ “ಕ್ಯಾರ್‌’ ಚಂಡಮಾರುತವು ಭಾರತೀಯ ಕರಾವಳಿಯಿಂದ ಮತ್ತಷ್ಟು ದೂರಕ್ಕೆ ಚಲಿಸಿದ್ದು, ಮಂಗಳವಾರ ಒಮಾನ್‌ ಕರಾವಳಿಯ ಸನಿಹ ತಲುಪಿದೆ. ಇನ್ನು ಅದು ಮುಂದಕ್ಕೆ ಚಲಿಸಿ ಮುಂದಿನ ಮೂರು ದಿನಗಳಲ್ಲಿ ಒಮಾನ್‌-ಯೆಮೆನ್‌ ಕರಾವಳಿಯ ಆಡೆನ್‌ ಕೊಲ್ಲಿಯತ್ತ ಚಲಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆ ಬಳಿಕ ಅದು ನಿಧಾನವಾಗಿ ದುರ್ಬಲಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next