Advertisement
ಬೆಳ್ತಂಗಡಿ, ಉಜಿರೆ, ಮಡಂತ್ಯಾರು, ಗುರುವಾಯನಕೆರೆ, ನಾರಾವಿ, ಧರ್ಮಸ್ಥಳ, ಶಿಬಾಜೆ, ಬಂದಾರು, ಇಳಂತಿಲ, ನೆಲ್ಯಾಡಿ, ಬಂಟ್ವಾಳ, ವಿಟ್ಲ, ಕನ್ಯಾನ, ಬದಿಯಡ್ಕ, ಅಜಿಲಮೊಗರು, ಮಾಣಿ, ಪೆರ್ನೆ, ಉಪ್ಪಿನಂಗಡಿ, ಕರಾಯ, ತಣ್ಣೀರುಪಂತ, ಕಣಿಯೂರು, ಪುತ್ತೂರು, ಕಡಬ, ಸಂಟ್ಯಾರು, ಬೆಟ್ಟಂಪಾಡಿ, ಸುಬ್ರಹ್ಮಣ್ಯ, ಸುಳ್ಯ, ತೋಡಿಕಾನ, ಕಲ್ಮಕಾರು, ಸುಬ್ರಹ್ಮಣ್ಯ, ಪಂಜ, ಉಳ್ಳಾಲ, ಸುರತ್ಕಲ್, ಮೂಡುಬಿದಿರೆ ಸಹಿತ ಜಿಲ್ಲೆಯ ಅನೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.
Related Articles
ಮಂಗಳವಾರ ನಗರದಲ್ಲಿ ಸುರಿದ ಮಳೆಗೆ ಜಿಲ್ಲೆಯ ಕೆಲವು ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ ಉಂಟಾಗಿದೆ. ಕೆಲವು ಕಡೆ ಯಕ್ಷಗಾನ ಪ್ರದರ್ಶನ ಪೂರ್ತಿ ರದ್ದುಗೊಂಡಿದ್ದು, ಇನ್ನೂ ಕೆಲವೆಡೆ ತಾತ್ಕಾಲಿಕವಾಗಿ ಕೆಲ ಕಾಲ ಸ್ಥಗಿತಗೊಳಿಸಿ ಮತ್ತೆ ಆರಂಭಿಸಲಾಯಿತು.ಮೂಡುಬಿದಿರೆಯಲ್ಲಿ ನಡೆಯಬೇಕಾದ ಯಕ್ಷಗಾನ ಕೆಲ ಕಾಲ ರದ್ದುಗೊಳಿಸಲಾಗಿದೆ.
Advertisement
ಇಂದು ಬೆಳಗ್ಗೆವರೆಗೆ “ಎಲ್ಲೋ ಅಲರ್ಟ್’ಕರಾವಳಿ ಭಾಗದಲ್ಲಿ ಬಿರುಸಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಜ.10ರಂದು ಬೆಳಗ್ಗೆವರೆಗೆ ಕರಾವಳಿ ಭಾಗದಲ್ಲಿ “ಎಲ್ಲೋ ಅಲರ್ಟ್’ ಘೋಷಿಸಲಾಗಿದೆ. ಈ ವೇಳೆ ಬಿರುಸಿನ ಮಳೆ, ಗಾಳಿ ಇರುವ ಸಾಧ್ಯತೆ ಇದೆ. ಸಾಂಕ್ರಾಮಿಕ ರೋಗ ಎಚ್ಚರವಿರಲಿ
ಅನಿರೀಕ್ಷಿತ ಮಳೆ, ಹವಾಮಾನ ಬದಲಾವಣೆಯ ಪರಿಣಾಮ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಕೆಮ್ಮು, ಜ್ವರ, ಗಂಟಲು ನೋವು, ತಲೆನೋವು ಮುಂತಾದ ಲಕ್ಷಣ ಕಂಡುಬರುತ್ತಿದೆ. ಇದೇ ಕಾರಣಕ್ಕೆ ವೈದ್ಯರ ಬಳಿ ಬರುವ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ತಿಮ್ಮಯ್ಯ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ “ಸಾಂಕ್ರಾಮಿಕ ರೋಗದ ಬಗ್ಗೆ ಎಚ್ಚರ ಅಗತ್ಯ. ಹೆಚ್ಚಾಗಿ ಬಿಸಿ ನೀರು ಕುಡಿಯಿರಿ, ಬೇಯಿಸಿದ ಆಹಾರ ಪದಾರ್ಥ ಸೇವನೆ ಮಾಡಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಿ, ಜ್ವರ, ರೋಗ ಲಕ್ಷಣವಿದ್ದರೆ ತತ್‌ಕ್ಷಣ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ’ ಎನ್ನುತ್ತಾರೆ. ಬೆಳ್ತಂಗಡಿ: ಭಾರೀ ಮಳೆ, ಸಿಡಿಲು ಬಡಿದು ಹಾನಿ
ಬೆಳ್ತಂಗಡಿ: ಎರಡು ದಿನಗಳ ಹಿಂದೆ ಬೆಳ್ತಂಗಡಿ ತಾಲೂಕಿನಲ್ಲಿ ಸಾಧಾರಣ ಮಳೆಯಾಗಿದ್ದು ಮಂಗಳವಾರ ಸಂಜೆ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಮಂಗಳವಾರ ಸುರಿದ ಮಳೆಯಿಂದಾಗಿ ಪ್ರಗತಿಯಲ್ಲಿರುವ ಪುಂಜಾಲಕಟ್ಟೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಳದಲ್ಲಿ ನೀರು ರಸ್ತೆಯಲ್ಲಿ ಸಂಗ್ರಹವಾಗಿ ವಾಹನ ಸವಾರರು ಪರದಾಟ ನಡೆಸಿದರು. ರವಿವಾರ ರಾತ್ರಿ ಸುಮಾರು ಅರ್ಧ ತಾಸಿಗಿಂತ ಅಧಿಕ ಕಾಲ ಉತ್ತಮ ಮಳೆ ಸುರಿದಿತ್ತು. ಕಾಮಗಾರಿ ಕಾರಣ ಚರಂಡಿಗಳು ಮುಚ್ಚಿದ್ದು ಮಳೆ ನೀರು ರಸ್ತೆಯ ಮೇಲೆ ಹರಿದು ಅಲ್ಲಲ್ಲಿ ಸಂಗ್ರಹಗೊಳ್ಳುತ್ತಿದೆ. ಅಗೆದು ಹಾಕಿರುವ ಸ್ಥಳಗಳಲ್ಲಿ ಮಣ್ಣಿನ ರಸ್ತೆ ಇದ್ದು ವಿಪರೀತ ಜಾರುತ್ತಿರುವುದರಿಂದ ಕೆಲವು ದ್ವಿಚಕ್ರ ವಾಹನ ಸವಾರರು ಉರುಳಿ ಬಿದ್ದು ಗಾಯಗೊಂಡಿದ್ದಾರೆ. ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಇಳಿಸಿ ನೀರು ಸಂಗ್ರಹಕ್ಕೆ ಮುಂದಾಗಿದ್ದವರು ಪ್ರಸ್ತುತ ಸ್ಥಗಿತಗೊಳಿಸಿದ್ದಾರೆ. ಕ್ಷೀಣ ಗೊಳ್ಳತೊಡಗಿದ್ದ ನದಿ, ಹೊಳೆಗಳಲ್ಲಿ ನೀರಿನ ಹರಿವು ಕಾಣುತ್ತಿದೆ. ಕೃಷಿಕರ ಕೊಯ್ಲಿನ ಅಡಿಕೆ ಸಂಪೂರ್ಣ ಒದ್ದೆಯಾಗಿದೆ. ಎರಡನೇ ಕೊಯ್ಲಿಗೆ ಅಡಿಕೆಯು ಹಣ್ಣಾಗಿ ತಯಾರಾಗಿದ್ದು ಕೊಯ್ಲು ನಡೆಸಲು ಮಳೆ ಅಡ್ಡಿಯಾಗಿದೆ. ಮಳೆಯಿಂದಾಗಿ ಕನ್ಯಾಡಿ ಸಮೀಪ ಮನೆಯೊಂದರ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಹೊತ್ತಿ ಉರಿದಿದೆ. ಸಿಡಿಲು ಮಳೆಯಿಂದಾಗಿ ಇಂಟರ್‌ನೆಟ್ ಕೈಕೊಟ್ಟಿತ್ತು. ಉಜಿರೆಯಲ್ಲಿ ನಡೆಯಬೇಕಿದ್ದ ಯಕ್ಷಗಾನ ಮಳೆಯಿಂದಾಗಿ ರದ್ದಾಗಿರುವ ಮಾಹಿತಿ ಲಭ್ಯವಾಗಿದೆ. ಸುಳ್ಯ: ರಸ್ತೆಯಲ್ಲೇ ಹರಿದ ಮಳೆ ನೀರು
ಸುಳ್ಯ: ಸುಳ್ಯ ತಾಲೂಕಿನ ವಿವಿಧೆಡೆ ಮಂಗಳವಾರ ಸಂಜೆ ವೇಳೆಗೆ ಗುಡುಗು ಸಹಿತ ಧಾರಾಕಾರ ಮಳೆ ಸುರಿಯಿತು.
ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು ಸಂಜೆಯಾಗುತ್ತಲೇ ಗುಡುಗು ಸಹಿತ ಭಾರೀ ಮಳೆಯಾಗಿದೆ. ನಗರದ ರಸ್ತೆಗಳಲ್ಲಿ ಮಳೆನೀರು ಹರಿದು ವಾಹನ ಸವಾರರು, ಪಾದಾಚಾರಿಗಳು ಸಮಸ್ಯೆ ಅನುಭವಿಸಿದರು. ರವಿವಾರ ಹಾಗೂ ಸೋಮವಾರ ರಾತ್ರಿಯೂ ಮಳೆಯಾಗಿತ್ತು. ಸುಳ್ಯ ನಗರ, ಜಾಲ್ಸೂರು, ಮಂಡೆಕೋಲು, ಪಂಬೆತ್ತಾಡಿ, ಕೊಲ್ಲಮೊಗ್ರು, ಸಂಪಾಜೆ, ಪಂಜ, ಬಳ್ಪ, ಎಲಿಮಲೆ, ಕಲ್ಲಾಜೆ, ಸುಬ್ರಹ್ಮಣ್ಯ, ಗುತ್ತಿಗಾರು ಪರಿಸರದ ಕೆಲವೆಡೆಯೂ ಮಳೆಯಾಗಿದೆ. ಉಡುಪಿ ಜಿಲ್ಲಾದ್ಯಂತ ಧಾರಾಕಾರ ಮಳೆ
ಉಡುಪಿ: ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ, ಮಂಗಳವಾರ ಸಂಜೆ ಧಾರಾಕಾರ ಮಳೆ ಸುರಿದಿದೆ. ವಿಪರೀತ ಗಾಳಿ ಮಳೆಯಿಂದಾಗಿ ಹಲವು ಕಡೆ ವಿದ್ಯುತ್ ಕಂಬಗಳಿಗೆ, ಮನೆಗಳಿಗೆ ಹಾನಿಯುಂಟಾಗಿದೆ. ಉಡುಪಿ, ಕಾಪು ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಗಾಳಿಯಿಂದಾಗಿ ನಗರದ ವಾಣಿಜ್ಯ ಕಟ್ಟಡಗಳ ಮೇಲೆ ಅಳವಡಿಸಿದ ಬೃಹತ್ ಬ್ಯಾನರ್‌ಗಳಿಗೆ ಹಾನಿ ಸಂಭವಿಸಿದೆ. ಸೋಮವಾರ ರಾತ್ರಿ ಮಲ್ಪೆ, ಉಡುಪಿ, ಮಣಿಪಾಲ ಸುತ್ತಮುತ್ತ ಗುಡುಗು ಸಹಿತ ನಿರಂತರ ಮಳೆ ಸುರಿದಿದೆ. ಮಂಗಳವಾರ ಬೆಳಗ್ಗೆನಿಂದ ಮೋಡ ಕವಿದ ವಾತಾವರಣದಿಂದ ಕೂಡಿದ್ದು, ಸಂಜೆಯಾಗುತ್ತಲೆ ವಿಪರೀತ ಗಾಳಿಯೊಂದಿಗೆ ಧಾರಾಕಾರ ಮಳೆಯಾಗಿದೆ.
ಉಡುಪಿ, ಕಾಪು, ಬ್ರಹ್ಮಾವರ, ಕುಂದಾಪುರ, ಕಾರ್ಕಳ ಸುತ್ತಮುತ್ತಲಿನ ಭಾಗದಲ್ಲಿ ಬಿಟ್ಟುಬಿಟ್ಟು ಉತ್ತಮ ಮಳೆಯಾಗಿದೆ. ಗಾಳಿ ಮಳೆಗೆ ಕಾಪು ತಾಲೂಕಿನ ಮಹಮ್ಮದ್ ಸುಹೈಲ್, ಬೈಂದೂರಿನ ತೆಗ್ಗರ್ಸೆಯ ಅಬ್ಬಕ್ಕ ಅವರ ಮನೆಗಳಿಗೆ ಹಾನಿ ಸಂಭವಿಸಿದೆ.