Advertisement

Rain ಗುಡುಗು-ಸಿಡಿಲು ಮಳೆ; ಓರ್ವ ಸಾವು, ಇಬ್ಬರಿಗೆ ಗಾಯ; ಏಕಾಏಕಿ ವರ್ಷಧಾರೆ, ಹಲವು ಕಡೆ ಹಾನಿ

01:49 AM May 12, 2024 | Team Udayavani |

ಮಂಗಳೂರು: ಕರಾವಳಿಯಲ್ಲಿ ಪೂರ್ವ ಮುಂಗಾರು ಮಳೆ ಭರ್ಜರಿ ಆರಂಭ ದಾಖಲಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಶನಿವಾರ ಸಂಜೆ ಬಳಿಕ ಗುಡುಗು- ಸಿಡಿಲಿನಿಂದ ಕೂಡಿದ ಬಿರುಸಿನ ಮಳೆಯಾಗಿದ್ದು, ಮರಳು ಗಾರಿಕೆ ನಿರತರಾಗಿ ಶೆಡ್‌ನ‌ಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಕಾರ್ಮಿಕನೊಬ್ಬ ಸಿಡಿಲು ಬಡಿದು ಮೃತಪಟ್ಟ ಘಟನೆ ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ನಡೆದಿದೆ.

Advertisement

ಸುಳ್ಯ ಮತ್ತು ಕಡಬ ತಾಲೂಕಿನಲ್ಲಿ ಭಾರೀ ಗಾಳಿ-ಮಳೆಗೆ ರಸ್ತೆಗೆ ಮರ ಬಿದ್ದು, ಸಂಚಾರ ವ್ಯತ್ಯಯ, ಕೆಲವು ಕಡೆ ವಿದ್ಯುತ್‌ ತಂತಿಗೆ ಮರ ಬಿದ್ದಿದೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯ ಪ್ರಮಾಣ ಕಡಿಮೆ ಇತ್ತು. ಶನಿವಾರ ಬೆಳಗ್ಗೆಯಿಂದಲೇ ಉರಿ ಬಿಸಿಲು ಮತ್ತು ಸೆಕೆಯಿಂದ ಕೂಡಿತ್ತು. ದಿನವಿಡೀ ಮೋಡದ ವಾತಾವರಣ ಇತ್ತು. ಸಂಜೆ ವೇಳೆಗೆ ಕಡಬ, ಸುಬ್ರಹ್ಮಣ್ಯ, ಸುಳ್ಯ, ಪುತ್ತೂರು, ಉಪ್ಪಿನಂಗಡಿ, ಇಳಂತಿಲ, ಬಂದಾರು, ಕೋಡಿಂಬಾಳ, ಬೆಳ್ತಂಗಡಿ, ಕೊಲ್ಲಮೊಗ್ರು, ಪೆರ್ಲ, ಕಾಸರಗೋಡು ಸಹಿತ ಹಲವೆಡೆ ಮಳೆ ಯಾದ ವರದಿಯಾಗಿದೆ. ಹಲವೆಡೆ ವಿದ್ಯುತ್‌ ವ್ಯತ್ಯಯವಾಗಿತ್ತು.

ರಸ್ತೆಗೆ ಉರುಳಿ ಬಿದ್ದ ಮರ
ಸುಳ್ಯ: ಕಡಬ-ಪಂಜ ರಸ್ತೆಯ ಪುಳಿಕುಕ್ಕು ಎಂಬಲ್ಲಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡ್ಡಿಯುಂಟಾಗಿತ್ತು, ಬಳಿಕ ಮರ ತೆರವು ಮಾಡಿ ಸಂಚಾರಕ್ಕೆ ಅವಕಾಶ ಮಾಡಲಾಯಿತು. ಉಬರಡ್ಕ ಮಿತ್ತೂರಿನ ಸೂಂತೋಡು ಎಂಬಲ್ಲಿ ಮರವೊಂದು ರಸ್ತೆಗೆ ಬಿದ್ದಿದ್ದು ಬಳಿಕ ತೆರವು ಮಾಡಲಾಯಿತು. ಘಟನೆಯಲ್ಲಿ 4 ವಿದ್ಯುತ್‌ ಕಂಬಗಳು ಹಾನಿಗೊಂಡಿದೆ. ಕಡಬ ತಾಲೂಕಿನ ಎಡಮಂಗಲದ ಉದಯ ಕುಮಾರ್‌ ಎಂಬವರ ತೋಟದಲ್ಲಿ 200ಕ್ಕೂ ಅಧಿಕ ಅಡಿಕೆ ಮರಗಳು, ತೆಂಗು ಧರಾಶಾಯಿಯಾಗಿದೆ. ಕಟ್ಟಡ ಶೀಟಿಗೂ ಹಾನಿಯಾಗಿದೆ. ದೊಡ್ಡತೋಟ-ಮರ್ಕಂಜ ರಸ್ತೆಯ ಬೆಟ್ಟ ಎಂಬಲ್ಲಿ ರಸ್ತೆಗೆ ಮರ ಬಿದ್ದು ವಿದ್ಯುತ್‌ ಕಂಬ ಮುರಿದಿದೆ.

ಪುತ್ತೂರಿನಲ್ಲಿ ಸಾಧಾರಣ ಮಳೆ
ಪುತ್ತೂರು: ತಾಲೂಕಿನ ವಿವಿಧೆಡೆ ಶನಿವಾರ ಸಂಜೆ ಗುಡುಗು ಸಹಿತ ಮಳೆ ಸುರಿದಿದೆ. 5 ಗಂಟೆ ಹೊತ್ತಿಗೆ ಮೋಡ ಕವಿದ ವಾತಾವರಣ ಉಂಟಾಗಿದ್ದು, ಸ್ವಲ್ಪ ಹೊತ್ತಿನಲ್ಲೇ ಗುಡುಗು ಸಹಿತ ಮಳೆ ಸುರಿದಿದೆ.

ಇಂದೂ ಮಳೆ ಸಾಧ್ಯತೆ
ಕರಾವಳಿ ಭಾಗದಲ್ಲಿ ಮೇ 12ರಂದೂ ಮಳೆಯಾಗುವ ನಿರೀಕ್ಷೆ ಇದ್ದು, ಭಾರತೀಯ ಹವಾಮಾನ ಇಲಾಖೆಯು “ಎಲ್ಲೋ ಅಲರ್ಟ್‌’ ಘೋಷಿಸಿದೆ. ಈ ವೇಳೆ ಗುಡುಗು, ಸಿಡಿಲಿನಿಂದ ಕೂಡಿದ ಮಳೆಯಾಗುವ ಮುನ್ಸೂಚನೆ ನೀಡಿದೆ.

Advertisement

ಇಚ್ಲಂಪಾಡಿಯಲ್ಲಿ ಸಿಡಿಲು ಬಡಿದು ಕಾರ್ಮಿಕ ಮೃತ್ಯು
ಸುಬ್ರಹ್ಮಣ್ಯ: ಸಿಡಿಲು ಬಡಿದು ಹೊರ ರಾಜ್ಯದ ಓರ್ವ ಕಾರ್ಮಿಕ ಸಾವನ್ನಪ್ಪಿ, ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಇಚ್ಲಂಪಾಡಿಯಲ್ಲಿ ಶನಿವಾರ ಸಂಜೆ ಸಂಭವಿಸಿದೆ.

ಉತ್ತರ ಪ್ರದೇಶದ ಚೈನ್‌ಪುರ ಗುಲ್ವಾರ ಎಂಬಲ್ಲಿ ಶ್ರೀಕಿಸುನ್‌ (56) ಮೃತರು. ಬಿಹಾರ ಮೂಲದ ಮಹದೇವ್‌ (30) ಹಾಗೂ ಗೌರಿ ಚೌದ್ರಿ (45) ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಇಚ್ಲಂಪಾಡಿಯ ಕುರಿಯಾಳಕೊಪ್ಪ ಎಂಬಲ್ಲಿ ಶನಿವಾರ ಕಾರ್ಮಿಕರು ಮರಳು ತೆಗೆಯುವ ಕೆಲಸ ಮಾಡುತ್ತಿದ್ದು, ಸಂಜೆ ವೇಳೆ ಗುಡುಗು ಸಹಿತ ಗಾಳಿ-ಮಳೆ ಆರಂಭಗೊಂಡ ಹಿನ್ನೆಲೆಯಲ್ಲಿ ಕಾರ್ಮಿಕರು ಕೆಲಸ ನಿಲ್ಲಿಸಿ ನದಿ ಬದಿಯಲ್ಲಿನ ಶೆಡ್‌ಗೆ ಬಂದು ಕುಳಿತ್ತಿದ್ದಾರೆ. ಈ ವೇಳೆ ಒಂದು ಶೆಡ್‌ನ‌ಲ್ಲಿ ನಾಲ್ವರಿದ್ದು ಅಲ್ಲಿಗೆ ಸಿಡಿಲು ಬಡಿದಿದ್ದು, ಘಟನೆಯಲ್ಲಿ ಓರ್ವ ಸ್ಥಳದಲ್ಲೇ ಮೃತರಾಗಿದ್ದು, ಇಬ್ಬರು ಗಾಯಗೊಂಡಿದ್ದರು. ಗಾಯಗೊಂಡ ಗಾಯಾಳುಗಳನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹವನ್ನು ಕಡಬ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಘಟನೆಯಿಂದ ಶೆಡ್‌ಗೆ ಹಾನಿ ಸಂಭವಿಸಿದೆ. ವಾರದ ಹಿಂದೆ (ಮೇ 3) ತಾಲೂಕಿನ ಸುಬ್ರಹ್ಮಣ್ಯ ಸಮೀಪ ಸಿಡಿಲು ಬಡಿದು ನವ ವಿವಾಹಿತನೋರ್ವ ಮƒತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಕಡಬ ತಾಲೂಕಿನಲ್ಲಿ ಸಿಡಿಲಿಗೆ ಮತ್ತೂಂದು ಬಲಿಯಾಗಿದೆ.

ಕನಿಷ್ಠ ತಾಪಮಾನದಲ್ಲಿ ಭಾರೀ ಏರಿಕೆ
ಕಳೆದ ಕೆಲವು ದಿನಗಳಿಂದ ಮಂಗಳೂರು ನಗರ ಸಹಿತ ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ ದಾಖಲಾಗುತ್ತಿದೆ. ಅದರಲ್ಲೂ ಕನಿಷ್ಠ ತಾಪಮಾನದಲ್ಲಿ ಭಾರೀ ಏರಿಕೆ ಕಾಣುತ್ತಿದೆ. ಮಂಗಳೂರಿನಲ್ಲಿ ಮೇ 11ರಂದು 34.8 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.9 ಡಿ.ಸೆ. ಏರಿಕೆ ಮತ್ತು 27.5 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 2.4 ಡಿ.ಸೆ. ಏರಿಕೆ ಕಂಡಿದೆ.

ನಡುಗಿಸಿದ ಗಾಳಿ-ಮಳೆ
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಶನಿವಾರ ಸಂಜೆ ಗುಡುಗು ಸಹಿತ ಗಾಳಿ-ಮಳೆಗೆ ವಿವಿಧೆಡೆ ಹಾನಿ ಸಂಭವಿಸಿದೆ.

ಸುಬ್ರಹ್ಮಣ್ಯ ಪರಿಸರದ ವಿವಿಧೆಡೆ ಶನಿವಾರ ಸಂಜೆ ಗುಡುಗು ಸಹಿತ ಗಾಳಿ ಮಳೆಯಾಗಿದೆ. ಕುಲ್ಕುಂದ ಎಂಬಲ್ಲಿ ಮೀನು ಅಂಗಡಿ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಸುಬ್ರಹ್ಮಣ್ಯದ ಸಮೀಪದ ಇಂಜಾಡಿ ಎಂಬಲ್ಲಿ ಮರ ಬಿದ್ದು ವಿದ್ಯುತ್‌ ಕಂಬಗಳು ಹಾನಿಗೊಂಡಿದೆ.

ನಡುಗಲ್ಲು ಸಮೀಪದ ಮರಕತ ಎಂಬಲ್ಲಿ ವಿದ್ಯುತ್‌ ಲೈನ್‌ ಮೇಲೆ ಮರ ಬಿದ್ದು ಹಲವು ವಿದ್ಯುತ್‌ ಕಂಬಗಳು ಧರಾಶಾಯಿಯಾಗಿದೆ. ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಸಂಭವಿಸಿದೆ. ಸುಬ್ರಹ್ಮಣ್ಯ-ಗುತ್ತಿಗಾರು ರಸ್ತೆಯ ಅಲ್ಲಲ್ಲಿ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಬಳಿಕ ಮರಗಳತೆರವು ಮಾಡಲಾಗಿದೆ.

ಸುಬ್ರಹ್ಮಣ್ಯ ಪರಿಸರದ ಸುಬ್ರಹ್ಮಣ್ಯ, ಐನೆಕಿದು, ಹರಿಹರ, ಕೊಲ್ಲಮೊಗ್ರು, ಕಲ್ಮಕಾರು, ಕೈಕಂಬ, ಕುಲ್ಕುಂದ, ಏನೆಕಲ್ಲು, ಬಳ್ಪ, ಗುತ್ತಿಗಾರು, ಬಿಳಿನೆಲೆ ಪರಿಸರದಲ್ಲೂ ಗುಡುಗು ಸಹಿತ ಗಾಳಿ-ಮಳೆಯಾಗಿದೆ

ಉಡುಪಿ ಜಿಲ್ಲೆಯಲ್ಲೂ ಮಳೆ
ದ.ಕ. ಜಿಲ್ಲೆಯ ಹೆಚ್ಚಿನ ಕಡೆ ಗಾಳಿ ಸಹಿತ ಮಳೆ ಬಿದ್ದಿದ್ದರೆ ಉಡುಪಿ ಜಿಲ್ಲೆಯಲ್ಲೂ ವರ್ಷಧಾರೆ ಸುರಿದಿದೆ. ಕಾಪು, ಕಟಪಾಡಿ, ಉಡುಪಿ, ಮಣಿಪಾಲ, ಹೆಬ್ರಿ, ಹಿರಿಯಡ್ಕ ಮತ್ತಿತರ ಕಡೆಗಳಲ್ಲಿ ಸಾಧಾರಣ ಮಳೆ ಬಿದ್ದಿದೆ. ಉಡುಪಿ ಜಿಲ್ಲೆಯಲ್ಲಿ ಭಾನುವಾರವೂ ಮಳೆ ಬೀಳುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next