ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಉಲ್ಲಾಸ..ಉತ್ಸಾಹದೊಂದಿಗೆ ಆತಂಕವು ಮನೆ ಮಾಡಿದೆ. ಕೊರೊನಾ ಸಮಯದಿಂದ ಯಾರೂ ಅಷ್ಟಾಗಿ ಗಮನಕೊಡದೇ ಈ ವರ್ಷ ಮಳೆ ಹೆಚ್ಚಾಗಿದೆ ಎಂದು ಜನರು ಮಾತಾನಾಡಿಕೊಳ್ಳುತ್ತಿದ್ದಾರೆ. ಆದರೆ ನನಗೆ ಈ ವರ್ಷದ ಮಳೆಯ ಅನುಭವ ಬೇರೆ!
ಮನೆಯಿಂದ ಹಾಸ್ಟೆಲಿಗೆ ಬಂದ ನಂತರ ‘ಹೆಚ್ಚು ಮಳೆಯಿಂದಾಗಿ ಕಾಲೇಜಿಗೆ ರಜೆ ಘೋಷಿಸಲಾಗಿದೆ’ ಎಂಬ ಸುದ್ದಿ ತಿಳಿಯಿತು. ಅಯ್ಯೊ ಮೊದಲೇ ಗೊತ್ತಿದ್ದರೇ ಮನೆಯಲ್ಲೇ ಇರಬಹುದಿತ್ತು ಎಂಬ ಭಾವನೆಯೂ ಬಂದಿತು. ಈಗ ಬಂದ್ದದಾಗಿದೆ. ಮುಂದೆ ನೋಡೊಣ ಎಂದು ಸುಮ್ಮನಾದೆ.
ನಾನು ಓದಿದ್ದು ಬೆಂಗಳೂರಿನಲ್ಲಿ, ಬಸವನಗುಡಿಯಲ್ಲಿ. ನಮಗೆ ಆ ಮುಷ್ಕರ, ಈ ಸ್ಟ್ರೈಕ್ ಎಂದು ರಜಾ ಸಿಗುತ್ತಿತ್ತೇ ಹೊರತು, ಮಳೆಗೆ ಎಂದೂ ರಜೆ ಸಿಕ್ಕ ನೆನಪಿಲ್ಲ. ಎಷ್ಟೇ ಮಳೆಯಾದರೂ, ರೋಡಿನ ಮೇಲೆ ನೀರು ಉಕ್ಕಿ ಹರಿದರೂ ಮಾರನೇ ದಿನ ಕಾಲೇಜು ಇದ್ದೇ ಇರುತ್ತಿತ್ತು. ನಾವೇ ಹಟ ಮಾಡಿ, ಅಂಗಲಾಚಿ ತರಗತಿಗಳನ್ನು ಫ್ರೀ ಬಿಡಿಸಿಕೊಂಡು ಬಿಸಿಯಾದ ಮ್ಯಾಗಿ, ಇಲ್ಲ ಸ್ಯಾಂಡ್‌ವಿಚ್ ಇತ್ಯಾದಿಗಳನ್ನು ತಿಂದು ಬರುತ್ತಿದ್ದೆವು.
ಆದರೆ ಸ್ನಾತಕೋತ್ತರ ಪದವಿ ಪಡೆಯಲು ಹಂಬಲಿಸಿ ದಕ್ಷಿಣ ಕನ್ನಡಕ್ಕೆ ಬಂದ ಮೇಲೆ ನಿಜವಾದ ಮಳೆಯ ಅರಿವಾಯಿತು. ಒಮ್ಮೆ ಶುರುವಾದರೆ ಎರಡು ಮೂರು ದಿನದ ನಂತರ ಒಂದು ಘಳಿಗೆ ನಿಂತರೆ ನಮ್ಮ ಅದೃಷ್ಟ. ಇಲ್ಲ ಅದೂ ಇಲ್ಲ. ನನಗೆ ಮಳೆಯಿಂದ ಸಮಸ್ಯೆ ಏನಿಲ್ಲ. ಆದರೆ ಬಟ್ಟೆ ಒಣಗುವುದಿಲ್ಲ ಎಂಬುದನ್ನು ಹೊರತು ಪಡಿಸಿ ಮಳೆಯ ಅಭಿಮಾನಿಯೇ ನಾನು.
ಬೆಂಗಳೂರಿನಲ್ಲಿ ಮಳೆ ಎಂದರೆ ಬೆಚ್ಚಗೆ ಹೊದ್ದು ಮಲಗುವುದು, ಬಿಸಿಯಾದ ಬೋಂಡಾ, ಬಜ್ಜಿಗಳನ್ನು ಮನೆಯಲ್ಲೇ ಮಾಡುವುದು. ಆಚೆ ಮಾತ್ರ ಹೋಗುವುದಿಲ್ಲ. ಕಾರೇ ಇರಲಿ. ಆ ಮಳೆಯಲ್ಲಿ ಬಟ್ಟೆ ನೆನೆಸಿಕೊಂಡು ಯಾರು ಹೋಗುತ್ತಾರೆ??..ಎಲ್ಲಾ ಕೂತಲ್ಲಿಗೆ ಸಪ್ಲೈ ಆಗಲಿ ಎನ್ನುತ್ತಿದ್ದೆ.
ಈಗ ಕಾಲ ಬದಲಾಗಿದೆ, ನಾನು ಸಹ!. ಜೋರು..ಚಂಡಿ ಮಳೆಯಲ್ಲೂ ಛತ್ರಿ ಹಿಡಿದು ಎಷ್ಟು ದೂರವಾದರೂ ಹೋಗುತ್ತೇನೆ. ಎಲ್ಲಾ ಕೆಲಸಗಳನ್ನು ನಾನೇ ಖುದ್ದು ಮಾಡಿಕೊಳ್ಳುತ್ತೇನೆ. ಮಳೆಯಲ್ಲಿಯೇ ಎದ್ದು ಊಟ ತಿಂಡಿಗೆ ಹೋಗುತ್ತೇನೆ…ಮಳೆಯಲ್ಲಿ ಬಟ್ಟೆ ನೆನೆಯದಂತೆ ಜಾಗರೂಕತೆ ವಹಿಸುವ ಕಲೆ ಕರಗತವಾಗಿದೆ. ನೆಂದ ಬಟ್ಟೆಗಳನ್ನು ಕಂಫರ್ಟ್ ನಲ್ಲಿ ನೆನೆಸಿಟ್ಟು ವಣಗಿಸುವ ಪರಿಪಾಠ ಆರಂಭವಾಗಿದೆ.
ಜೀವನದಲ್ಲಿ ಮಳೆಗಾಗಿ ಎಂದೂ ರಜೆ ಪಡೆಯದೇ ಇದ್ದ ಜೀವ ಇಂದು ಮಳೆಯ ರಜೆಯಲ್ಲಿ ಕುಳಿತು ಈ ಅನುಭವ ಬರೆಯುತ್ತಿದೆ. ನನ್ನಂತೆ ಈ ಊರಿನಿಂದ ನನ್ನ ಊರಿಗೆ ಕೆಲಸಕ್ಕೆ ವಲಸೆ ಹೋಗಿರುವ ಅದೆಷ್ಟೋ ಜನ ತಮ್ಮ ಮಳೆಯ ರಜೆಯನ್ನು ನೆನೆಯುತ್ತಾ, ಬೆಂಗಳೂರಿನ ಟ್ರಾಫಿಕ್, ಜನ ಇತ್ಯಾದಿಗಳನ್ನು ಮನಸೋಯಿಚ್ಛೆ ಬೈದುಕೊಳ್ಳುತ್ತಾ ಇರುತ್ತಾರೆ…
ಆದರೆ ಇಬ್ಬರ ಆಲೋಚನೆ ಒಂದೇ ಮಳೆಯ ರಜೆ!!
– ಶ್ರೀರಕ್ಷಾ ಶಂಕರ್, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ.