Advertisement

ರೈತರ ಮೊಗದದಲ್ಲಿ ಕಳೆ ತಂದ ಮಳೆ

02:34 PM Jun 23, 2022 | Team Udayavani |

ಬೀದರ: ಮುಂಗಾರು ಮುನಿಸಿನಿಂದಾಗಿ ಕಂಗಾಲಾಗಿದ್ದ ಧರಿನಾಡಿನ ಅನ್ನದಾತರು ಕಳೆದ ಮೂರ್‍ನಾಲ್ಕು ದಿನಗಳಿಂದ ಸುರಿದ ಮಳೆಯಿಂದ ನಿಟ್ಟಿಸಿರು ಬಿಟ್ಟಿದ್ದು, ಬಿತ್ತನೆಯತ್ತ ಮುಖ ಮಾಡಿದ್ದಾರೆ.

Advertisement

ಮುಂಗಾರು ಋತುವಿನಲ್ಲಿ ಜಿಲ್ಲೆಯ ವಿವಿಧೆಡೆ 70 ಮಿ.ಮೀ. ವರ್ಷಧಾರೆ ಆಗಿದ್ದು, ಶೇ.18ರಿಂದ 20ರಷ್ಟು ಬಿತ್ತನೆ ಆಗಿದೆ. ಜಿಲ್ಲೆಯಲ್ಲಿ ಸುರಿದ ಪೂರ್ವ ಮುಂಗಾರು ಮಳೆ ಈ ಬಾರಿ ಸಮೃದ್ಧ ಬೆಳೆಯ ಭರವಸೆ ಮೂಡಿಸಿತ್ತು. ಆದರೆ, ಮುಂಗಾರು ಶುರುವಾಗಿ ಎರಡು ವಾರ ಕಳೆದರೂ ಮಳೆ ಬಾರದಿರುವುದು ರೈತರನ್ನು ಚಿಂತೆಗೇಡು ಮಾಡಿತ್ತು.

ಪ್ರಸಕ್ತ ಹಂಗಾಮು ಬಿತ್ತನೆಗಾಗಿ ಭೂಮಿಯನ್ನು ಸಜ್ಜುಗೊಳಿಸಿ ಬೀಜ ಮತ್ತು ರಸಗೊಬ್ಬರ ದಾಸ್ತಾನು ಮಾಡಿಕೊಂಡಿರುವ ಅನ್ನದಾತರು ಆಕಾಶದತ್ತ ಮುಖ ಮಾಡಿ ವರುಣನ ಕೃಪೆಗಾಗಿ ಪ್ರಾರ್ಥಿಸುತ್ತಿದ್ದರು. ಕೊನೆಗೂ ವರುಣ ಕೃಪೆ ತೋರಿದ್ದು, ಮೂರ್‍ನಾಲ್ಕು ದಿನಗಳಿಂದ ಉತ್ತಮ ಮಳೆಯಾಗಿದೆ.

ಕೃಷಿ ಇಲಾಖೆ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಜ.1ರಿಂದ ಮೇ 31ರವರೆಗೆ 74 ಮಿ.ಮೀ ಮಳೆ ಆಗಬೇಕಿದ್ದು, 71 ಮಿ.ಮೀ ಬಂದಿದೆ. ಇನ್ನೂ ಮುಖ್ಯವಾಗಿ ಮುಂಗಾರು ದಿನಗಳಾಗಿರುವ ಜೂ.1ರಿಂದ 21ರವರೆಗೆ 82 ಮಿ.ಮೀ ಮಳೆ ಪೈಕಿ 74 ಮಿ.ಮೀ ಬಿದ್ದಿದೆ. ಶೇ.11ರಷ್ಟು ಮಳೆ ಕೊರತೆ ಇದೆ.

ಬೀದರ, ಔರಾದ ಮತ್ತು ಕಮಲನಗರ ತಾಲೂಕುಗಳಲ್ಲಿ ಹೆಚ್ಚಿನ ಮಳೆಯಾಗಿದ್ದರೆ, ಹುಲಸೂರು, ಹುಮನಾಬಾದ ಮತ್ತು ಭಾಲ್ಕಿ ತಾಲೂಕುಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸುರಿದಿಲ್ಲ. ಮಣ್ಣಿನ ತೇವಾಂಶ ಹೊಂದಿರುವ ಭೂಮಿಯಲ್ಲಿ ಕೃಷಿಕರು ಬಿತ್ತನೆ ಕೆಲಸ ಶುರು ಮಾಡಿದ್ದಾರೆ. ಯಾವುದೇ ನೀರಾವರಿ ಯೋಜನೆಗಳು ಇಲ್ಲದ ಮಳೆಯಾಶ್ರಿತ ಪ್ರದೇಶವಾಗಿರುವ ಬೀದರ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ 3.75 ಲಕ್ಷ ಹೆಕ್ಟೇರ್‌ ಜಮೀನಿನಲ್ಲಿ ಬಿತ್ತನೆ ಗುರಿ ಇದ್ದು, ಒಟ್ಟಾರೆ 27.22 ಟನ್‌ ಕೃಷಿ ಉತ್ಪಾದನೆ ಅಂದಾಜಿಸಲಾಗಿದೆ. ಒಟ್ಟು ಬಿತ್ತನೆ ಪ್ರದೇಶದ ಪೈಕಿ ಶೇ.55ರಷ್ಟು ಅಂದರೆ 1.92 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಸೋಯಾಬಿನ್‌ ಬೆಳೆಯಲು ನಿರ್ಧರಿಸಲಾಗಿದೆ.

Advertisement

ಮುಂಗಾರಿಗೆ ಸೋಯಾಬಿನ್‌ ಜತೆಗೆ ಉದ್ದು ಮತ್ತು ಹೆಸರು ಬಿತ್ತನೆ ಆಗುತ್ತದೆ. ಆದರೆ, ಮಳೆ ವಿಳಂಬ ಹಿನ್ನಲೆ ಕೆಲ ರೈತರು ಈಗ ಉದ್ದು, ಹೆಸರು ಬದಲು ಸೋಯಾಬಿನ್‌ನತ್ತ ವಾಲುತ್ತಿದ್ದಾರೆ. ಹವಾಮಾನ ಇಲಾಖೆ ಮಾಹಿತಿಯಂತೆ ಜಿಲ್ಲೆಯಲ್ಲಿ ಇನ್ನೊಂದು ವಾರ ಮಳೆಯಾಗಲಿದೆ. ಉತ್ತಮ ಮಳೆ ಬಿದ್ದಿರುವ ಪ್ರದೇಶಗಳಲ್ಲಿ ಬಿತ್ತನೆ ಮಾಡಬಹುದು. ನಿರೀಕ್ಷಿತ ಮಟ್ಟದಲ್ಲಿ ಮಳೆ ಆಗದ ಕಡೆಗಳಲ್ಲಿ ಮಣ್ಣಿನ ತೇವಾಂಶ ನೋಡಿಕೊಂಡು ಬಿತ್ತನೆ ಮುಂದಾಗಬೇಕು ಎನ್ನುತ್ತಾರೆ ಕೃಷಿ ವಿಜ್ಞಾನಿಗಳು

ಬೀದರ ಜಿಲ್ಲೆಯಲ್ಲಿ ಮುಂಗಾರು ಮಳೆ ಬಿಳುತ್ತಿದ್ದು, ಈವರೆಗೆ ಶೇ.18-20ರಷ್ಟು ಬಿತ್ತನೆ ಆಗಿದೆ. ಇನ್ನೊಂದು ವಾರ ಮಳೆ ಸುರಿಯಲಿದೆ. ಮಣ್ಣಿನ ತೇವಾಂಶ ಗಮನಿಸಿ ಬಿತ್ತನೆ ಮಾಡಿದರೆ ಉತ್ತಮ. ಜಿಲ್ಲೆಯಲ್ಲಿ ಬೀಜ ಮತ್ತು ಗೊಬ್ಬರದ ಕೊರತೆ ಇಲ್ಲ. ಪಿಕೆಪಿಎಸ್‌ ಮತ್ತು ಖಾಸಗಿ ಕೇಂದ್ರಗಳ ಮೂಲಕ ವಿತರಣೆ ಮಾಡಲಾಗುತ್ತಿದೆ. ಗುರುವಾರ ಹೆಚ್ಚುವರಿಯಾಗಿ ಡಿಎಪಿ ಗೊಬ್ಬರ ಬೀದರಗೆ ಬರಲಿದ್ದು, ರೈತರು ಆತಂಕ ಬೇಡ. -ಜಿ.ಎಚ್‌ ತಾರಾಮಣಿ ಜಂಟಿ ಕೃಷಿ ನಿರ್ದೇಶಕರು, ಬೀದರ

Advertisement

Udayavani is now on Telegram. Click here to join our channel and stay updated with the latest news.

Next