ನಗರ: ಈ ಬಾರಿ ಮುಂಗಾರು ಪೂರ್ವ ಮಳೆ ಸುರಿಯದೇ ಇರುವುದು ಜನತೆಯ ನಿರೀಕ್ಷೆಯನ್ನು ಹುಸಿಗೊಳಿಸಿ ಹತಾಶೆಗೆ ತಳ್ಳಿದೆ. ಬೇಸಗೆ ಬಿರು ಬಿಸಿಲಿನ ಝಳಕ್ಕೆ ಜನತೆ ತತ್ತರಿಸಿದೆ.
ಕಳೆದ ವರ್ಷ ಯುಗಾದಿಯ ಅವಧಿಯಲ್ಲಿ ಅಂದರೆ ಮಾರ್ಚ್ ತಿಂಗಳ ಮಧ್ಯ ಭಾಗದಲ್ಲಿ ಆರಂಭಗೊಂಡ ಮಳೆ ನಿರಂತರತೆಯನ್ನು ಕಾಯ್ದುಕೊಂಡು ಜನತೆಯಲ್ಲಿ ಒಂದಷ್ಟು ನಿರಾಳತೆಯನ್ನು ಮೂಡಿಸಿತ್ತು. ಆದರೆ ಈ ಬಾರಿ ಮೇ ತಿಂಗಳ ಎರಡನೇ ವಾರಕ್ಕೆ ಕಾಲಿಟ್ಟರೂ ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಒಂದೇ ಒಂದು ಸಾಮಾನ್ಯ ಪ್ರಮಾಣದ ಮಳೆಯೂ ಸುರಿದಿಲ್ಲ.
ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಮತ್ತು ಕುಮಾರಧಾರಾ ಬರಿದಾಗಿದೆ. ಮತ್ತೂಂದು ಭಾಗದ ಸೀರೆ ಹೊಳೆಯೂ ಜಲಮುಕ್ತಗೊಂಡಿದೆ. ಈ ಭಾಗದ ಕೃಷಿಕರು ತಮ್ಮ ಬದುಕಿನ ಬೆಳೆಗಳು ಬಿಸಿಲಿನ ತೀಕ್ಷ್ಣತೆಯಿಂದ ಸಾಯುತ್ತಿರುವುದನ್ನು ನೋಡಲಾರದೆ ಕಣ್ಣುಮುಚ್ಚಿ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಮತ್ತು ನಗರದ ಭಾಗದ ಜನತೆ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.
ಜಿಲ್ಲೆಯ ಕೃಷಿಕರಲ್ಲಿ ಕೊಳವೆ ಬಾವಿಗಳಿದ್ದರೂ ಬಹುತೇಕ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಮತ್ತೂಂದು ಕಡೆ ವಿದ್ಯುತ್ ಸಮಸ್ಯೆಯೂ ಕೃಷಿಕರಿಗೆ ಇರುವ ನೀರನ್ನೂ ಸಮರ್ಪಕವಾಗಿ ಬಳಸಿಕೊಳ್ಳಲು ಬಿಡುತ್ತಿಲ್ಲ. ಹಳ್ಳಿಯ ಭಾಗಗಳಲ್ಲಿ ಕುಡಿಯುವ ನೀರಿನ ಬಾವಿಗಳು ಸದಾ ಜನತೆಯನ್ನು ಕಾಪಾಡುತ್ತಿದ್ದವು. ಆದರೆ ಈಗ ಕುಡಿಯುವ ನೀರಿನ ಬಾವಿಗಳು ಕಣ್ಮರೆಯಾಗಿವೆ. ಕೊಳವೆಬಾವಿಗಳನ್ನೇ ನಂಬಿರುವ ಹಳ್ಳಿಯ ಜನತೆಗೂ ನೀರಿನ ಬಿಸಿ ಉಂಟಾಗಿದೆ.
ನಗರಸಭಾ ವ್ಯಾಪ್ತಿಗೆ ಕುಮಾರಧಾರ ನದಿಗೆ ನಿರ್ಮಿಸಲಾದ ಕಿಂಡಿಅಣೆಕಟ್ಟಿನಿಂದ ನೀರು ಸರಬರಾಜು ನಡೆಯುತ್ತಿದ್ದರೂ ಕಿಂಡಿಅಣೆಕಟ್ಟಿನ ನೀರಿನ ಸಂಗ್ರಹ ಇಳಿಕೆಯಾಗತೊಡಗಿದೆ. ನಗರಸಭಾ ವ್ಯಾಪ್ತಿಯ ಪೆರಿಯತ್ತೋಡಿ, ಬೊಳ್ಳಾಣ, ಉರ್ಲಾಂಡಿ, ಬೆದ್ರಾಳ, ಕುಬಲಾಜೆ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು. ಇಲ್ಲಿ ಹೊಸ ಕೊಳವೆಬಾವಿ ಕೊರೆದರೂ ನೀರೇ ಸಿಗದೆ ಯಾವುದೇ ಪ್ರಯೋಜನವಾಗಿಲ್ಲ. ತಾಲೂಕಿನ ಬಡಗನ್ನೂರು ಗ್ರಾ. ಪಂ. ವ್ಯಾಪ್ತಿಯ ನೆಕ್ರಾಜೆ, ಗಾಣಪದವು, ಒಳಮೊಗ್ರು ಗ್ರಾ. ಪಂ., ಬಲಾ°ಡು ಗ್ರಾ. ಪಂ. ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ.
ಗ್ರಾಮಾಂತರಕ್ಕೆ 26 ಹೊಸ ಕೊಳವೆಬಾವಿ
ತಾಲೂಕಿನ 41 ಗ್ರಾ.ಪಂ. ವ್ಯಾಪ್ತಿಗಳಲ್ಲಿ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವಲ್ಲಿಗೆ ತುರ್ತಾಗಿ ಪರಿಹರಿಸಲು 26 ಕೊಳವೆ ಬಾವಿಗಳನ್ನು ಹೊಸದಾಗಿ ಕೊರೆಸಲು ತಾಲೂಕು ಪಂಚಾಯತ್‌ಕಾರ್ಯನಿರ್ವಾಹಣಾಧಿಕಾರಿಯವರು ಪುತ್ತೂರು ಉಪವಿಭಾಗದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಕಾರ್ಯಪಾಲಕ ಅಭಿಯಂತರರಿಗೆ ಸುತ್ತೋಲೆ ನೀಡಿದ್ದಾರೆ. ಕೆಲವು ಗ್ರಾಮ ಪಂ.ಚಾಯತ್‌ಗಳಲ್ಲಿರುವ 18 ಕೊಳವೆ ಬಾವಿಗಳನ್ನು ಪುನಶ್ಚೇತನಗೊಳಿಸುವಂತೆ ಅವರು ಸೂಚನೆ ನೀಡಿದ್ದಾರೆ.
ನಗರದಲ್ಲಿ 6 ಹೊಸ ಕೊಳವೆಬಾವಿ
ಪುತ್ತೂರು ನಗರಸಭಾ ವ್ಯಾಪ್ತಿಯಲ್ಲೂ ನೀರಿನ ಸಮಸ್ಯೆ ತಲೆದೋರಿದ ಕಡೆಗಳಲ್ಲಿ 6 ಕೊಳವೆಬಾವಿಗಳನ್ನು ಕೊರೆಸಲು ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಯವರ ಅನುಮೋದನೆ ಲಭಿಸಿದೆ. ಈ ಹಿನ್ನೆಲೆಯಲ್ಲಿ ಮಚ್ಚಿಮಲೆ, ಉರ್ಲಾಂಡಿ ಪರಿಸರದಲ್ಲಿ ಈಗಾಗಲೇ ಕೊಳವೆ ಬಾವಿ ಕೊರೆಸಿದ್ದರೂ ಎರಡೂ ವಿಫಲಗೊಂಡಿವೆ. ಆದರೆ ಬೆದ್ರಾಳ ನೆಕ್ಕರೆ ಪರಿಸರದಲ್ಲಿ ಕೊರೆಸಿದ ಕೊಳವೆ ಬಾವಿಗೆ ನೀರು ಸಿಕ್ಕಿದೆ. ಪೆರಿಯತ್ತೋಡಿ, ಕುಬಲಾಜೆ ಪರಿಸರದಲ್ಲಿ ಕೊಳವೆ ಬಾವಿ ಕೊರೆಸಲು ಸಿದ್ಧತೆ ನಡೆಯುತ್ತಿದೆ.
– ರಾಜೇಶ್ ಪಟ್ಟೆ