ಮಂಗಳೂರು: ಕರಾವಳಿ ಭಾಗದಲ್ಲಿ ಕೆಲವು ವಾರಗಳಿಂದ ಬಿರುಸಿನ ಮಳೆಯಾಗುತ್ತಿದ್ದು, ಪರಿಣಾಮವಾಗಿ ಮಳೆ ಕೊರತೆಯ ಸ್ಥಿತಿ ದೂರವಾಗಿದೆ. ಸದ್ಯ ಕರಾವಳಿಯಲ್ಲಿ ವಾಡಿಕೆಗಿಂತ ಶೇ. 1ರಷ್ಟು ಮಳೆ ಹೆಚ್ಚಾಗಿದೆ.
ಕೇರಳಕ್ಕೆ ಮೇ 30ರಂದು ಪ್ರವೇಶ ಪಡೆದ ಮುಂಗಾರು ಜೂ. 2ರಂದು ರಾಜ್ಯ ಕರಾವಳಿಯನ್ನು ಪ್ರವೇಶಿಸಿತ್ತು. ಆದರೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮುಂಗಾರಿನ ಲಕ್ಷಣ ಕಾಣಿಸಿಕೊಂಡಿರಲಿಲ್ಲ. ಸಾಮಾನ್ಯವಾಗಿ ಮುಂಗಾರು ಆಗಮಿಸಿದ ವೇಳೆ ಕೆಲವು ದಿನ ಮೋಡ ಕವಿದು, ಗಾಳಿ ಸಹಿತ ಬಿರುಸಿನ ಮಳೆಯಾಗುತ್ತದೆ.
ಆದರೆ ಈ ಬಾರಿ ಎರಡರಿಂದ ಮೂರು ವಾರಗಳ ಕಾಲ ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ಮಳೆ ಸುರಿದಿರಲಿಲ್ಲ. ಆದರೆ ಪ್ರಸ್ತುತ ಜುಲೈ ಆರಂಭದಿಂದಲೇ ಕರಾವಳಿಯಲ್ಲಿ ಭಾರೀ ವರ್ಷಧಾರೆಯಾಗುತ್ತಿದ್ದು, ವಾಡಿಕೆಗಿಂತ ಅಧಿಕ ಮಳೆಯಾಗಿದೆ.
ಜೂನ್ ತಿಂಗಳಿನಿಂದ ಈವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,440 ಮಿ.ಮೀ. ವಾಡಿಕೆ ಮಳೆಯಲ್ಲಿ 1,309 ಮಿ.ಮೀ. ಮಳೆಯಾಗಿದ್ದು, ಸದ್ಯ ಶೇ. 9ರಷ್ಟು ಮಳೆ ಕೊರತೆ ಇದೆ. ಉಡುಪಿ ಜಿಲ್ಲೆಯಲ್ಲಿ ಈ ಅವಧಿಯಲ್ಲಿ 1,705 ಮಿ.ಮೀ. ವಾಡಿಕೆ ಮಳೆಯಲ್ಲಿ 1,737 ಮಿ.ಮೀ. ಮಳೆಯಾಗಿ ಶೇ. 2ರಷ್ಟು ಹೆಚ್ಚಳ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 1,098 ಮಿ.ಮೀ. ವಾಡಿಕೆಯಲ್ಲಿ 1,168 ಮಿ.ಮೀ. ಮಳೆಯಾಗಿ ಶೇ. 6ರಷ್ಟು ಹೆಚ್ಚಳವಾಗಿದೆ. ಒಟ್ಟಾರೆ ಕರಾವಳಿಯಲ್ಲಿ ಈ ಅವಧಿಯಲ್ಲಿ 1,302 ಮಿ.ಮೀ. ವಾಡಿಕೆ ಮಳೆಯಾಗಬೇಕಿದ್ದರೆ ಈ ಬಾರಿ 1,313 ಮಿ.ಮೀ. ಮಳೆಯಾಗಿ ಶೇ. 1ರಷ್ಟು ಹೆಚ್ಚಳವಾಗಿದೆ.
ಮತ್ತಷ್ಟು ಮಳೆ ನಿರೀಕ್ಷೆ
ಬಿರುಸಿನ ಮಳೆ ಇನ್ನೂ ಕೆಲವು ದಿನ ಮುಂದುವರಿಯುವ ಸಾಧ್ಯತೆ ಇದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಸೋಮವಾರಕ್ಕೆ ರೆಡ್ ಅಲರ್ಟ್ ಇದೆ. ಹವಾಮಾನ ಇಲಾಖೆಯು ಈಗಾಗಲೇ ನೀಡಿದ ಮಾಹಿತಿ ಪ್ರಕಾರ ಈ ಬಾರಿಯ ಮುಂಗಾರು ಅವಧಿಯಲ್ಲಿ ನಿರೀಕ್ಷಿತ ವಾಡಿಕೆಯಷ್ಟು ಅಥವಾ ವಾಡಿಕೆಗಿಂತ ಅಧಿಕ ಮಳೆ ಸುರಿಯುವ ಸಾಧ್ಯತೆ ಇದೆ.