ಪಾಂಡವಪುರ: ತಾಲೂಕಿನ ಮಳೆಯಾಶ್ರಿತ ಪ್ರದೇಶದಲ್ಲಿ 2018-19ನೇ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರುವಿನಲ್ಲಿ ನಿರೀಕ್ಷೆಯಷ್ಟು ಮಳೆಯಾಗದ ಹಿನ್ನೆಲೆಯಲ್ಲಿ ರಾಗಿ ಮತ್ತು ಹುರುಳಿ ಬೆಳೆಗಳು ನೆಲ ಕಚ್ಚಿದ್ದು ರೈತರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ.
ಮುಂಗಾರು ಮಳೆಯಿಂದಾಗಿ ಸುಮಾರು 2250 ಹೆಕ್ಟೇರ್‌ನಲ್ಲಿ ರಾಗಿ ಬೆಳೆ ಒಣಗಿ ನಷ್ಟವಾದರೆ, ಹಿಂಗಾರು ಬೆಳೆಯಿಂದಾಗಿ ಸುಮಾರು 1945 ಹೆಕ್ಟೆರ್‌ನಲ್ಲಿ ಹುರುಳಿ ಬೆಳೆಗಳು ನಷ್ಟವಾಗಿವೆ.
ಸಾಲದ ಸುಳಿಗೆ: ತಾಲೂಕಿನ ಜಕ್ಕನಹಳ್ಳಿ ಹಾಗೂ ಚಿನಕುರಳಿ ಹೋಬಳಿಯ ಗ್ರಾಮಗಳು ಸಂಪೂರ್ಣ ವಾಗಿ ಮಳೆಯಾಶ್ರಿತ ಪ್ರದೇಶವಾಗಿದ್ದು ಈ ಭಾಗದ ರೈತರು ಮಳೆಯಾಶ್ರಿತ ಬೆಳೆಗಳಾದ ರಾಗಿ, ಹುರುಳಿ ಬೆಳೆ ಬಿತ್ತನೆ ಮಾಡಿ ಜೀವನ ನಡೆಸುತ್ತಾರೆ. ಆದರೆ, ಸೆಪ್ಟಂಬರ್‌ನಲ್ಲಿ ಅಲ್ಪ-ಸ್ವಲ್ಪ ಮಳೆಯಾದ ಹಿನ್ನೆಲೆಯಲ್ಲಿ ರಾಗಿ ಮತ್ತು ಹುರುಳಿ ಬೆಳೆಗಳನ್ನು ಬೆಳೆಯಲಾಗಿತ್ತು. ಆದರೆ, ಹಿಂಗಾರಿನಲ್ಲಿ ಮಳೆಯಾಗದೆ ಹುರುಳಿ ರಾಗಿ ಬೆಳೆಗಳು ನಷ್ಟವಾಗಿವೆ. ಇದರಿಂದ ಈ ಭಾಗದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು ಮತ್ತೆ ಸಾಲದ ಸುಳಿಗೆ ಸಿಲುಕಿದ್ದಾರೆ.
ಪ್ರಸ್ತಾವನೆ ಕಳುಹಿಸಲಾಗಿದೆ: ರಾಗಿ-ಹುರುಳಿ ಬೆಳೆ ಪರಿಹಾರಕ್ಕಾಗಿ ತಾಲೂಕಿನ ಕೃಷಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಅಂತಿಮವಾಗಿ ಸರ್ವೆ ನಡೆಸಿ ಸುಮಾರು 2.85 ಕೋಟಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಪಟ್ಟಿ ಸಲ್ಲಿಸಲಾಗಿದೆ ಎಂದು ಕೃಷಿ ಅಧಿಕಾರಿ ಎಚ್.ವಿ.ಜಗದೀಶ್ ತಿಳಿಸಿದ್ದಾರೆ.
ಮಳೆ ಕೊರತೆ: ಹಿಂಗಾರಿನಲ್ಲಿ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ವಾಡಿಕೆಯಂತೆ 215.40 ಮಿ.ಮೀಟರ್ ಮಳೆ ಆಗಬೇಕಿತ್ತು . ಆದರೆ, 185.72 ಮೀ.ಮಿ. ಮಳೆ ಯಾಗಿದೆ. 29.68 ಮಿ.ಮೀಟರ್ ನಷ್ಟು ಮಳೆ ಕಡಿಮೆ ಯಾಗಿದ್ದು ಶೇ.13.77 ಮಳೆ ಕೊರತೆ ಯುಂಟಾಗಿದೆ. ಮುಂಗಾರಿನಲ್ಲೂ ಮಳೆ ಕೊರತೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಗಿ ಬೆಳೆಯಲ್ಲಿ ನಷ್ಟ ಉಂಟಾ ಗಿದ್ದು, ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಮಳೆಯಾಶ್ರಿತ ಪ್ರದೇಶದ ವ್ಯಾಪ್ತಿ ಹಳ್ಳಿಗಳಲ್ಲಿನ ಕೆರೆ-ಕಟ್ಟೆಗಳೂ ಭರ್ತಿಯಾಗಿಲ್ಲ. ಹೇಮಾವತಿ ನಾಲೆಯಿಂದ ನೀರು ಹರಿಸಿ ಅಲ್ಪ ಪ್ರಮಾಣದಲ್ಲಿ ಕೆರೆಗಳನ್ನು ಭರ್ತಿ ಮಾಡಲಾಗಿದೆಯೇ ಹೊರತು ಪೂರ್ಣ ಪ್ರಮಾಣದಲ್ಲಿ ಕೆರೆ-ಕಟ್ಟೆಗಳು ಭರ್ತಿಯಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಕುಡಿಯುವ ನೀರಿಗೆ ಅಣೆಕಟ್ಟೆಗಳ ನೀರನ್ನು ಮೀಸಲಿರಿಸಿಕೊಳ್ಳಲಾಗಿದ್ದು ಮುಂದಿನ ದಿನಗಳ ಲ್ಲಾದರೂ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ತಹಶೀಲ್ದಾರ್ ಖಾತೆಯಲ್ಲಿ ಹಣ
ಮುಂಗಾರು ಮಳೆಯಾಶ್ರಿತ ಪ್ರದೇಶದ ಒಟ್ಟು 9238 ರೈತರು ತಾವು ಬೆಳೆದ ಬೆಳೆಗಳಲ್ಲಿ ನಷ್ಟ ಅನುಭವಿಸಿರುವ ಬಗ್ಗೆ ಸರ್ವೆ ಕಾರ್ಯ ನಡೆಸಿ ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ. ಬೆಳೆ ನಷ್ಟದ ಹಣ ಸುಮಾರು 1.53ಕೋಟಿ ರೂ.ಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಸರ್ಕಾರ ಈಗಾಗಲೇ ಅದರ ಹಣ ಬಿಡುಗಡೆ ಮಾಡಿ ತಹಶೀಲ್ದಾರ್ ಖಾತೆಯಲ್ಲಿ ಜಮೆ ಮಾಡಿದೆ. ಸದ್ಯದಲ್ಲಿಯೇ ಪರಿಹಾರದ ಹಣವನ್ನು ಅರ್ಹ ಫಲಾನುಭವಿ ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದು ಕೃಷಿ ಅಧಿಕಾರಿ ಎಚ್.ವಿ.ಜಗದೀಶ್ ತಿಳಿಸಿದ್ದಾರೆ.