Advertisement

Rain: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಧಾರಣ ಮಳೆ

01:17 AM Aug 05, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದೆ. ಜಿಲ್ಲಾದ್ಯಂತ ರವಿವಾರ ಸಾಧಾರಣ ಮಳೆಯಾಗಿದೆ. ಉಳಿದಂತೆ ಮೋಡ ದಿಂದ ಕೂಡಿದ ವಾತಾವರಣ ಇತ್ತು.

Advertisement

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಆ.5ರ ಬೆಳಗ್ಗೆ 8.30ರ ವರೆಗೆ ಎಲ್ಲೋ ಅಲರ್ಟ್‌ ಇದ್ದು, ಉಳಿದಂತೆ ಯಾವುದೇ ಅಲರ್ಟ್‌ ಘೋಷಣೆ ಮಾಡಲಾಗಿಲ್ಲ. ಇದರಿಂದಾಗಿ ಮಳೆಯ ಪ್ರಮಾಣ ಮತ್ತಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಮಂಗಳೂರಿನಲ್ಲಿ ರವಿವಾರ 28.3 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.4 ಡಿ.ಸೆ. ಕಡಿಮೆ ಮತ್ತು 23.1 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.2 ಡಿ.ಸೆ. ಕಡಿಮೆ ಇತ್ತು.

36.6 ಮಿ.ಮೀ. ಮಳೆ
ರವಿವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 36.6 ಮಿ.ಮೀ. ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ 39.4 ಮಿ.ಮೀ., ಬಂಟ್ವಾಳ 32.6, ಮಂಗಳೂರು 28.6, ಪುತ್ತೂರು 28.9, ಸುಳ್ಯ 36.6, ಮೂಡುಬಿದಿರೆ 55.7, ಕಡಬ 36.8, ಮೂಲ್ಕಿ 48.5 ಮತ್ತು ಉಳ್ಳಾಲದಲ್ಲಿ 36.6 ಮಿ.ಮೀ. ಮಳೆಯಾಗಿದೆ.

ಮಳೆ ಹಾನಿ
ಮಳೆಯಿಂದಾಗಿ ಬಂಟ್ವಾಳ ತಾಲೂಕಿನ 1 ಪೂರ್ಣ ಮತ್ತು 3 ಮನೆಗಳು ಭಾಗಶಃ ಹಾನಿಯಾಗಿದೆ. ಕಡಬ ತಾಲೂಕಿನಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, 31 ಮಂದಿ ಇದ್ದಾರೆ. ಮೆಸ್ಕಾಂ ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ 28 ವಿದ್ಯುತ್‌ ಕಂಬಗಳು, 1.40 ಕಿ.ಮೀ. ವಿದ್ಯುತ್‌ ತಂತಿಗಳು ಹಾನಿಯಾಗಿದೆ.

ಉಡುಪಿ ಜಿಲ್ಲಾದ್ಯಂತ ಉತ್ತಮ ಮಳೆ
ಉಡುಪಿ: ಜಿಲ್ಲೆಯಲ್ಲಿ ರವಿವಾರ ಹಲವೆಡೆ ಉತ್ತಮ ಮಳೆಯಾಗಿದ್ದು, ಕುಂದಾಪುರ, ಉಡುಪಿ, ಕಾರ್ಕಳ, ಹೆಬ್ರಿ ಸುತ್ತಮುತ್ತ ಬಿಟ್ಟುಬಿಟ್ಟು ಮಳೆಯಾಗಿದೆ.

Advertisement

ಶನಿವಾರ ತಡರಾತ್ರಿ ಕೆಲವು ಕಡೆಗಳಲ್ಲಿ ಗಾಳಿ ಸಹಿತ ಹೆಚ್ಚು ಮಳೆಯಾಗಿದ್ದು, ರವಿವಾರ ಮುಂಜಾನೆ ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತ ಸಣ್ಣದಾಗಿ ಮಳೆಯಾಗಿತ್ತು. ಮಧ್ಯಾಹ್ನದ ಬಳಿಕ ಸ್ವಲ್ಪ ಹೊತ್ತು ನಿರಂತರ ಮಳೆಯಾಗಿದೆ. ಕುಂದಾಪುರ ತಾಲೂಕಿನ ಗಂಗೊಳ್ಳಿ ಮೋಹನ್‌ ಖಾರ್ವಿ, ಅಂಗಳ್ಳಿಯ ಸೆರ್ವೆನ್‌ ಡಿ’ಸೋಜಾ, ಚಿತ್ತೂರು ಸಾದಮ್ಮ ಶೆಟ್ಟಿ, ಉಡುಪಿ ತಾಲೂಕಿನ ಮೂಡುನಿಡಂಬೂರಿನ ಗುಲಾಬಿ ಶೆಟ್ಟಿ, ಶಿವಳ್ಳಿಯ ವೆಂಕಟೇಶ್‌ ಸುವರ್ಣ ಅವರ ಮನೆಗಳಿಗೆ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ರವಿವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಗಳ ಕಾಲ 54.8 ಮಿ. ಮೀ. ಮಳೆಯಾಗಿದೆ.

ಮಡ್ಯಂಗಳ: ಹೆದ್ದಾರಿ ಬದಿಯ ಅಪಾಯಕಾರಿ ಮರ ತೆರವು

ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಡ್ಯಂಗಳ ಎಂಬಲ್ಲಿ ಅಪಾಯಕಾರಿ ಮರಗಳು ಹಾಗೂ ವಿದ್ಯುತ್‌ ಕಂಬಗಳನ್ನು ರವಿವಾರ ತೆರವು ಮಾಡಲಾಯಿತು. ಕಳೆದ ಮಂಗಳವಾರ ಭಾರೀ ಮಳೆಗೆ ಶೇಖಮಲೆ, ಮಡ್ಯಂಗಳ ಭಾಗದಲ್ಲಿ ಗುಡ್ಡ ಜರಿದು ಸಂಚಾರ ಸ್ಥಗಿತಗೊಂಡಿತ್ತು.

ಈ ಸಂದರ್ಭದಲ್ಲಿ ಸ್ಥಳೀಯರು ಅಪಾಯಕಾರಿ ಮರ ಹಾಗೂ ವಿದ್ಯುತ್‌ ಕಂಬಗಳನ್ನು ತೆರವು ಮಾಡುವಂತೆ ಆಗ್ರಹಿಸಿದ್ದರು. ಅದರಂತೆ ರಸ್ತೆ ಬದಿಗಳಲ್ಲಿರುವ ಅಪಾಯಕಾರಿ ಮರಗಳನ್ನು ಅರಣ್ಯ ಇಲಾಖೆ ಹಾಗೂ ವಿದ್ಯುತ್‌‍ ಕಂಬಗಳನ್ನು ಮೆಸ್ಕಾಂ ವತಿಯಿಂದ ತೆರವು ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next