ಅಂತೂ ಬೇಸಗೆ ಮುಗಿದು ಮಳೆಗಾಲ ಆರಂಭವಾಗುತ್ತಿದೆ. ಎಲ್ಲೆಲ್ಲೂ ಮಳೆಯದ್ದೇ ಅಬ್ಬರ. ವರುಣನ ಆಗಮನಕ್ಕೆ ಕಾದು ಕುಳಿ ತಿ ರುವ ರೈತನ ಮೊಗದಲ್ಲಿ ಖುಷಿಯ ಸಿಂಚನ ಮೂಡುವ ಸಮಯ ಈ ಮಳೆಗಾಲ. ಸಾಮಾನ್ಯವಾಗಿ ಮಳೆ ಎಂದ ತತ್‌ಕ್ಷಣ ನಮ್ಮ ಬಾಲ್ಯದ ದಿನಗಳು ನೆನಪಿಗೆ ಬರುತ್ತವೆ. ಆ ದಿನಗಳಲ್ಲಿ ಮಳೆ ಎಂದರೆ ಏನೋ ಒಂಥರಾ ಖುಷಿ. ಅದರಲ್ಲಿ ನೆನೆಯುವುದೆಂದರೆ ಎಲ್ಲಿಲ್ಲದ ಸಂತೋಷ. ಮೋಡದಿಂದ ಹನಿ ಬಿತ್ತೆಂದರೆ ಅದೇ ಮಳೆ ಎಂದುಕೊಳ್ಳುತ್ತಿದ್ದೆವು. ಆದರೆ ದಿನಗಳು ಕಳೆದಂತೆ ಮಳೆ ಹೇಗೆ ಉಂಟಾಗುತ್ತದೆ, ಅದರಿಂದಾಗುವ ಅತಿವೃಷ್ಟಿ ಮತ್ತು ಅನಾವೃಷ್ಟಿ ಏನು ಎನ್ನುವುದನ್ನು ಕಲಿತಿದ್ದೇ ಅನಂತರದ ದಿನಗಳಲ್ಲಿ.
ಈಗಲೂ ಕೂಡ ಮಳೆಯ ಜತೆಗಿನ ಸಂಬಂಧ ಹಾಗೇ ಇದೆ. ಅದು ಒಂದು ರೀತಿಯ ಬಿಡಿಸಲಾಗದ ಅನುಬಂಧ. ಎಷ್ಟೇ ಸವಿದರೂ ಅನುಭವಿಸಿದರೂ ಇನ್ನೂ ಬೇಕು ಎನ್ನುವಷ್ಟು ಹಂಬಲ. ಮಳೆಯಲ್ಲಿ ನೆನೆಯುತ್ತಿದ್ದರೆ ನಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎನ್ನುವುದು ಕೂಡ ಬೇಕಾಗಿರುವು ದಿಲ್ಲ. ಮಳೆಯಲಿ, ಜತೆಯಲಿ ಕೈಗಳೆರಡು ಭೂಮಿಯಗಲಕ್ಕೆ ಚಾಚಿ, ಮುಖವನ್ನು ಬಾನೆತ್ತರಕ್ಕೆ ನೋಡುತ್ತ, ಕಣ್ಣು ಮುಚ್ಚಿ ವರ್ಷಧಾರೆಯನ್ನು ಅನುಭವಿಸುವುದರಲ್ಲಿ ಇರುವ ಸುಖ ಒಂದು ಕ್ಷಣ ವಾವ್Ø ಎನ್ನಿಸುತ್ತೆ. ಮೈ ಪುಳಕಿಸುವ ಮಳೆಗೆ ನಮ್ಮ ನೋವು, ಸಂತೋಷ ಎಲ್ಲವನ್ನೂ ಮರೆಮಾಚುವ ಶಕ್ತಿಯಿದೆ.
ಮಳೆ ಅಂದರೆ ಕೇವಲ ಅನುಭವಿಸುವುದಷ್ಟೇ ಅಲ್ಲ, ಇದು ರೈತನಿಗೆ ಜೀವ ಕೊಡುವ ಜೀವಾಮೃತ. ತಾನು ಬೆಳೆದ ಬೆಳೆಗೆ ಫಸಲು ಬರಬೇಕಾದರೆ ಮಳೆ ಅಗತ್ಯ. ಈ ದಿನಗಳಲ್ಲಿ ಬಿತ್ತನೆ ಪ್ರಾರಂಭವಾಗುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಮಳೆಯು ರೈತನ ಪಾಲಿಗೆ ಹಿಗ್ಗು ಆಗಬೇಕೇ ಹೊರತು ಆತನ ಕೊರಳಿಗೆ ಹಗ್ಗವಾಗಬಾರದು. ಏಕೆಂದರೆ ಮಳೆಗಾಗಿಯೇ ರೈತ ತನ್ನ ಎಷ್ಟೋ ಕಷ್ಟಗಳನ್ನು ಬದಿಗಿಟ್ಟು ಅದಕ್ಕೆಂದೇ ಕಾದು ಕೂರುತ್ತಾನೆ. ಹಾಗಾಗಿ ಮಳೆ ನಮ್ಮೆಲ್ಲರ ಹಿಗ್ಗು ಅಷ್ಟೇ ಅಲ್ಲದೆ ರೈತನ ಮುಖದ ಮೇಲಿನ ನಗೆಯಾಗಲಿ.
- ಪೂರ್ಣಿಮಾ, ಅಕ್ಕಮಹಾದೇವಿ ವಿವಿ, ವಿಜಯಪುರ