Advertisement
ಆಫೀಸಿನಲ್ಲಿ ಕೆಲಸ ಮಾಡುವಾಗ ಇದ್ದಕ್ಕಿದ್ದಂತೆ ಪಕ್ಕದ ಗಾಜುಗಳ ಮೂಲಕ ಬರುತ್ತಿದ್ದ ಬೆಳಕು ಮಂದವಾಯಿತು. ಎ.ಸಿ. ಕೋಟೆಯನ್ನು ದಾಟಿ ಮಣ್ಣಿನ ನರುಗೆಂಪು ಮೂಗನ್ನು ದಾಟಿ ಎದೆಯ ಬಾಗಿಲು ತಟ್ಟಿತು. ಲ್ಯಾಪ್‌ಟಾಪ್ ಪರದೆ ಮುಚ್ಚಿಟ್ಟು ಹೊರಗೆದ್ದು ಬಂದು ಕಣ್ಣು ಹಾಯಿಸಿದೆ. ಎದುರು ದಿಕ್ಕಿನಲ್ಲಿ ಮೋಡಗಳು ದಟ್ಟೈಸಿದ ಹಾಗೆ ಕಂಡಿತು. ವಾತಾವರಣ ತಂಪು ತಂಪು. “ಓಹ್, ಇಂದು ಮಳೆ ಆಗಿಯೇ ಬಿಡಬಹುದೆ..?’ - ಮನಸ್ಸಿನಲ್ಲಿ ಕಾತರ. ಮತ್ತೆ ಒಳಗೆ ಬಂದು ಕುಳಿತು ಕೆಲಸ ಮುಂದುವರಿಸುವಾಗಲೂ ಒಂದು ಕಣ್ಣು ಆಕಾಶವನ್ನು ಆಗಾಗ ನೋಡುತ್ತಲೇ ಇತ್ತು. ಆದರೆ, ನಿಧಾನವಾಗಿ ಮೋಡವನ್ನು ದಾಟಿ ಸೂರ್ಯ ಹೊರಗೆ ಬಂದೇ ಬಿಟ್ಟ. ಮೋಡ ಈಗ ಮನಸ್ಸಿಗೆ ಕವಿಯಿತು.
Related Articles
Advertisement
ಮಳೆಗೂ ಮನಸ್ಸಿಗೂ ಮೊದಲ ನಂಟು ಎಲ್ಲಿ ಶುರುವಾಗುತ್ತದೋ ಬಲ್ಲವರಾರು? ಮಳೆಯಲ್ಲಿ ಗುಂಡಾಗಿ ತಿರುಗುತ್ತಾ “ಹುಯ್ಯೋಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ’ ಎಂದು ಅಪ್ಪಾಲೆ ತಿಪ್ಪಾಲೆ ಆಡಿದ ನೆನಪಿದೆ, ಕಾಗದದ ದೋಣಿ ಮಾಡಿ ತೇಲಿಬಿಟ್ಟು “ತೇಲಲಪ್ಪಾ ದೇವರೆ’ ಎಂದು ಮನಸ್ಸಿನಲ್ಲೇ ಮುಡಿಪು ಕಟ್ಟಿಟ್ಟ ನೆನಪಿದೆ, ಮೂರು ಕಿಲೋಮೀಟರ್ ದೂರ ಇದ್ದ ರೈಲ್ವೇ ನಿಲ್ದಾಣದಿಂದ ಸುರಿಮಳೆಯಲ್ಲಿ ಒದ್ದೆ ಮುದ್ದೆಯಾಗಿ ನೆನೆಯುತ್ತಲೇ ನಡೆದು ಬಂದು, ವರ್ಷದ ನೋಟ್ಸ್ ಪೂರಾ ಹಾಳಾಗಿದ್ದಕ್ಕೆ ಬೈಸಿಕೊಂಡ ನೆನಪಿದೆ. ಕಿಟಗಿಗೊರಗಿ ಕುಳಿತು, ಹೊರಗೆ ಕೈಚಾಚಿ ಅಂಗೈ ಮೇಲಿನ ಗಿಣಿಯಂತೆ ಮುದ್ದಾಗಿ ಕುಳಿತಿದ್ದ ಮಳೆಯೊಂದಿಗೆ ಮಾತನಾಡುತ್ತಲೇ ಒಂದಿರುಳು ಮಾಡಿದ ಪ್ರಯಾಣದ ನೆನಪಿದೆ. ಅಜ್ಜಿಯ ಊರಿಗೆ ಹೋಗಿದ್ದಾಗ ಮಳೆಬಿದ್ದ ಮರುದಿನವೇ ಹೊಲಕ್ಕೆ ಓಡಿಹೋಗುತ್ತಿದ್ದದ್ದು ನೆನಪಿದೆ. ಮಳೆ ಬಂದ ಮರುದಿನ ಮಣ್ಣಿನ ಒಡಲಲ್ಲಿರುವ ತಂಪು ಮತ್ತು ಬಿಸುಪನ್ನು ಮಾತುಗಳಲ್ಲಿ ವಿವರಿಸುವುದು ಸಾಧ್ಯವೇ ಇಲ್ಲ. ಮಳೆಬಿದ್ದ ಮರುದಿನವೇ ಹೀಗೆಯೇ ಹನಿಹನಿ ಸಿಡಿದ ಕಿಟಯ ಗಾಜಿನ ಮೇಲೆ ಬರೆದ ಒಂದು ಅಕ್ಷರದ್ದೂ ನೆನಪಿದೆ… ಮತ್ತೆಷ್ಟು ಮಳೆ ಬೀಳಬೇಕಾಯ್ತು ಆ ಒಂದು ಅಕ್ಷರವನ್ನು ಅಳಿಸಲು! ಮಳೆ ಬೇಕು, ಹೊಸತು ಚಿಗುರಬೇಕಾದರೂ, ಮುಗಿದದ್ದನ್ನು ಅಳಿಸಬೇಕಾದರೂ. ಯಾವುದೋ ಒಂದು ಗಜಲ್ ಸಾಲು ನೆನಪಾಯಿತು, “ಕೆನ್ನೆ ಮೇಲೆ ಕರೆಗಟ್ಟಿದ ಕಣ್ಣೀರ ಕಲೆಯನ್ನು ಅಳಿಸಲು, ಮತ್ತೂಮ್ಮೆ ಕಣ್ಣೀರೇ ಸುರಿಯಬೇಕು…’
ಮಳೆಗೆ ಆಳದಲ್ಲಿ ಹುದುಗಿದ್ದ ಬಿತ್ತಿಯನ್ನು ಮೊಳಕೆಯೊಡಿಸಿ, ತನ್ನ ಸುತ್ತಲೂ ಕಟ್ಟಿದ ಕೋಟೆಯೊಡನೆ ಸೆಣಸಿ, ಚಿಗುರನ್ನು ಮೇಲೆ ತಂದು ನಿಲ್ಲಿಸುವ ಗುಣವಿದೆ. ಅದು ಒಮ್ಮೊಮ್ಮೆ ಸಂತಸದ ನೆನಪು ತಂದರೆ ಒಮ್ಮೊಮ್ಮೆ ನೋವಿನ ನೆನಪು ತರುತ್ತದೆ. ಮಳೆ ಸುರಿಯುವಾಗ ಒಬ್ಬಂಟಿ ದನಿಯೊಂದು “ಮೇಘಾ ಛಾಯೆ ಆಧೀ ರಾತ್ ಬೈರನ್ ಬನ್ ಗಯೆ ನಿಂದಿಯಾ….’- ಅರ್ಧರಾತ್ರಿಯಲ್ಲಿ ಕವಿದ ಈ ಮೋಡ, ನಿ¨ªೆಯನ್ನು ಶತ್ರುವಾಗಿಸಿದೆ ಎಂದು ಹಾಡುತ್ತಲೇ, “ಸಬ್ ಕೆ ಆಂಗನ್ ದಿಯಾ ಜಲೆರೆ ಮೋರೆ ಆಂಗನ್ ಜಿಯಾ…’- ಎಲ್ಲರ ಮನೆಯಂಗಳದಲ್ಲೂ ಹಣತೆ ಬೆಳಗುತ್ತಿದ್ದರೆ ನನ್ನ ಮನೆಯಂಗಳದಲ್ಲಿ ಹೃದಯವೇ ಉರಿಯುತ್ತಿದೆ ಎಂದು ಮೊರೆಯಿಡುವಂತೆ ಮಾಡುತ್ತದೆ. “ಬಾನಿನಲ್ಲಿ ಒಂಟಿ ತಾರೆ, ಸೋನೆ ಸುರಿವ ಇರುಳಾ ಮೋರೆ, ಕತ್ತಲಲ್ಲಿ ಕುಳಿತು ಒಳಗೇ ಬಿಕ್ಕುತಿಹಳು ಯಾರೋ ನೀರೆ…’ ಆದರೆ, ಸಂಗಾತಿ ಜೊತೆಯಲ್ಲಿರುವಾಗ ಅದೇ ಮಳೆಗೆ ಏನು ಸೊಬಗು, ಇಡುವ ಹೆಜ್ಜೆ ಹೆಜ್ಜೆಗೂ ನವಿಲಿನ ಸಂಭ್ರಮ. ಸಾಧಾರಣವಾಗಿ ನೋವಿಗೇ ನೆನಪಾಗುವ ಮುಖೇಶ ಮಳೆಯ ಈ ಒಂದು ಹಾಡಿಗಾಗಿ ಪ್ರೀತಿಯ ಮೋಹಕತೆಗೆ ನೆನಪಾಗುತ್ತಾನೆ. “ಬರ್ ಸಾ ರಾಣಿ, ಜರಾ ಜಮ್ ಕೆ ಭರಸೋ… ಏ ಅಭೀ ಅಭೀ ಆಯೇ ಹೈ, ಕೆಹತೆ ಹೈ ಅಬ್ ಜಾಯೇಂಗೆ, ತೂ ಭರಸ್, ಭರಸೋ ಭರಸ್’ ಎಂದು, “ಭರಸೋ ಭರಸ್’ಗೆ ಎದೆಯಲ್ಲಿನ ಮೋಹವನ್ನೆಲ್ಲಾ ತುಂಬಿ ಹಾಡುತ್ತಿದ್ದರೆ, ಧೋ ಧೋ ಮಳೆಯಲ್ಲಿ ಸುರಿವಾಗ ಭೂಮಿಯಾಗಿ ಅರಳಿದ ನೆನಪಾಗುತ್ತದೆ. ಹಾಗೆ ನೆನಪಾಗುವ ಇನ್ನೊಂದು ಹಾಡು ಚಾಂದಿನಿ ಚಿತ್ರದ್ದು, “ಲಗೀ ಆಜ್ ಸಾವನ್ ಕಿ ಫಿರ್ ಓ ಝಡಿ ಹೈ, ವಹೀ ಆಗ್ ಸೀನೆ ಮೆ ಫಿರ್ ಜಲ್ ರಹೀ ಹೈ’ – ಶ್ರಾವಣದ ಜಡಿ ಮತ್ತೆ ಶುರುವಾಗಿದೆ, ಎದೆಯಲ್ಲಿ ಮತ್ತೆ ಅದೇ ಬೆಂಕಿ ಜ್ವಲಿಸುತ್ತಿದೆ. ಸಂತೋಷಕ್ಕೂ, ಸಂತಾಪಕ್ಕೂ ಒಂದೇ ಬಗೆಯಲ್ಲಿ ಒದಗಿ ಬರುವ ಹಾಡು ಇದು. “ಭೀನಿ ಭೀನಿ ಭೋರ್, ಭೋರ್ ಆಯೆ, ರೂಪ್ ರೂಪ್ ಪರ್ ಚಿಡೆ ಸೋನ’, ಮಳೆಯ ಬೆಡಗೆಂದರೆ ಅದೇ, ಮುಟ್ಟಿದ್ದೆಲ್ಲವನ್ನೂ ಅದು ಹೊಳೆಯುವಂತೆ ಮಾಡುತ್ತದೆ.
ಕೆಲವು ವರ್ಷಗಳ ಹಿಂದೆ “ವರ್ಷಂ’ ಎಂದು ಒಂದು ತೆಲುಗು ಚಿತ್ರ ಬಂದಿತ್ತು. ಅದರಲ್ಲಿ ಹುಡುಗನಿಗೆ ಹುಡುಗಿ ಮೊದಲ ಸಲ ಸಿಗುವಾಗ ಮಳೆ ಬರುತ್ತಿರುತ್ತದೆ. ಮಳೆ ಎಂದರೆ ಹಾಡಿ ಕುಣಿಯುವ ಹುಡುಗಿಯನ್ನು “ಮತ್ತೆ ಯಾವಾಗ ಸಿಗುವೆ?’ ಎಂದು ಎದೆಯನ್ನು ಅಂಗೈಲಿಟ್ಟುಕೊಂಡು ಕೇಳುವ ಹುಡುಗನಿಗೆ ಹುಡುಗಿ ಹೇಳುವುದು ಅದೇ ಮಾತು, “ಮತ್ತೆ ಮಳೆ ಬಂದಾಗ…’. ಮಳೆ ಎಂದರೆ ಕೇವಲ ಮಳೆ ಅಲ್ಲ, ಅದು ಅನೇಕ ತುತ್ತುಗಳ ಬಸಿರು, ಅನೇಕ ಕನಸುಗಳ ಧ್ಯಾನ, ನೆನಪು ಕನಸುಗಳ ಸಮ್ಮಿಲನ. ಮಳೆಯೊಂದು ಸುರಿದು ಬಿಡಲಿ ಒಮ್ಮೆ, ಮಳೆಗಾಲ ಬಂದು ಬಿಡಲಿ ಮತ್ತೂಮ್ಮೆ.
– ಸಂಧ್ಯಾ ರಾಣಿ