ಕಲಬುರಗಿ: ಮುಂಗಾರು ಮೃಗಶಿರ (ಜೂನ್ 7) ಆರಂಭದ ಮುಂಚೆ ಸುರಿದಿದ್ದ ಮಳೆ, ತದನಂತರ ಭರವಸೆ ಮೂಡಿಸದೇ ಮರೆಯಾಗಿದ್ದ ಮುಂಗಾರು ಹಂಗಾಮಿನ ಎರಡನೇ ಮಳೆ ಆರಿದ್ರ ಶುರುವಾಗಿದ್ದು, ರವಿವಾರ ಜೂನ್ 27ರಂದು ಜಿಲ್ಲೆಯಾದ್ಯಂತ ಉತ್ತಮವಾಗಿ ಸುರಿದಿದೆ. ಹೀಗಾಗಿ ರೈತನ ಮೊಗದಲ್ಲಿ ಭರವಸೆ ಮೂಡಿದೆ.
ಶನಿವಾರ ರಾತ್ರಿ ಜಿಲ್ಲೆಯಾದ್ಯಂತ 14.8 ಮಿ.ಮೀ ಮಳೆ ಸುರಿದಿದೆ. ಅತಿ ಹೆಚ್ಚಿನ ಮಳೆ ಅಫಜಲಪುರ ತಾಲೂಕಿನಲ್ಲಿ 34.2 ಮಿ.ಮೀ, ಜೇವರ್ಗಿ ತಾಲೂಕಿನಲ್ಲಿ 22 ಮಿ.ಮೀ, ಚಿಂಚೋಳಿಯಲ್ಲಿ ಅತಿ ಕಡಿಮೆ 3.4 ಮಿ.ಮೀ ಮಳೆಯಾಗಿದೆ. ರವಿವಾರ ಜಿಲ್ಲೆಯಾದ್ಯಂತ ಸಣ್ಣ ಪ್ರಮಾಣದಲ್ಲಿ ಮಳೆ ಸುರಿದಿದೆ. ಶನಿವಾರ ರಾತ್ರಿ ಹಾಗೂ ರವಿವಾರ ಜಿಲ್ಲೆಯಾದ್ಯಂತ ಸುರಿದ ಮಳೆ ಕಲ್ಯಾಣ ಕರ್ನಾಟಕದ ವಾಣಿಜ್ಯ ಬೆಳೆ ತೊಗರಿ ಬಿತ್ತನೆಗೆ ಹಸಿರು ನಿಶಾನೆ ತೋರಿದೆ. ಈಗಾಗಲೇ ಬಿತ್ತನೆ ಮಾಡಿರುವ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು, ಸೊಯಾಬಿನ್, ಎಳ್ಳು ಬೆಳೆಗಳಿಗೆ ಜೀವ ತುಂಬಿದಂತಾಗಿದೆ.
ಮೃಗಶಿರ ಆರಂಭದ ನಂತರ ಹೊಲ ಪೂರ್ತಿ ಹಸಿಯಾಗುವ ಹಾಗೆ ಹಾಗೂ ಹಳ್ಳ ಕೊಳ್ಳ ಹರಿಯುವ ಹಾಗೆ ಮಳೆ ಬಂದಿರಲಿಲ್ಲ. ಆದರೆ ಶನಿವಾರ, ರವಿವಾರ ಸುರಿದ ಮಳೆ ಹೊಲ ಸಂಪೂರ್ಣ ಹಸಿಯಾಗುವ ಜತೆಗೆ ಹಳ್ಳ-ಕೊಳ್ಳಗಳಲ್ಲೂ ಸ್ವಲ್ಪ ನೀರು ಹರಿ ಯುವ ಹಾಗೆ ಮಾಡಿದೆ. ಒಟ್ಟಾರೆ ಮಳೆ ಗಾಲದ ವಾತಾವರಣ ನಿರ್ಮಾಣವಾಗಿದೆ. ತೊಗರಿ ಬಿತ್ತನೆಗೆ ಇನ್ನಷ್ಟು ಸಮಯ ಇರುವ ಹಿನ್ನೆಲೆಯಲ್ಲಿ ರೈತ ಗಡಿಬಿಡಿ ಮಾಡಿ ಭೂಮಿಗೆ ಬೀಜ ಹಾಕಿಲ್ಲ.
ಆದರೆ ಮುಂಗಾರು ಮುಂಚೆಯೇ ಮಳೆ ಬಂದ ಹಿನ್ನೆಲೆಯಲ್ಲಿ ರೈತ ಅಲ್ಪಾವಧಿ ಬೆಳೆಗಳಿಗೆ ಹೆಚ್ಚಿನ ಆಸಕ್ತಿ ಹೊಂದಿದ್ದ. ಆದರೆ ಸಕಾಲಕ್ಕೆ ಬೀಜ ದೊರೆಯದ ಹಿನ್ನೆಲೆಯಲ್ಲಿ ಸ್ವಲ್ಪ ಹಿನ್ನಡೆಯಾಯಿತು ಎನ್ನಬಹುದು. ತೊಗರಿ ಬೀಜ ಬಿತ್ತನೆಗೆ ರೈತರು ಕೃಷಿ ಇಲಾಖೆ ಹಾಗೂ ಕೃಷಿ ಸಂಶೋಧನಾ ಕೇಂದ್ರವನ್ನೇ ಸಂಪೂರ್ಣ ನಂಬಿರೋದಿಲ್ಲ. ತನ್ನಲ್ಲೇ ಬೆಳೆದ ಉತ್ತಮ ತೊಗರಿಯನ್ನೇ ಬೀಜಕ್ಕಾಗಿ ಕಾಯ್ದಿಟ್ಟಿ ರುತ್ತಾರೆ. ಹೊಸ ತಳಿ ಬಂದಾಗಲೊಮ್ಮೆ ಸ್ವಲ್ಪ ಪ್ರಮಾಣದಲ್ಲಿ ಬೀಜ ಖರೀದಿಸುತ್ತಾರೆ. ಆದರೆ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು, ಎಳ್ಳು ಬೀಜ ಸಂರಕ್ಷಿಸುವುದು ಸ್ವಲ್ಪ ಕಷ್ಟ.
ಹೀಗಾಗಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನೇ ನೆಚ್ಚಿಕೊಂಡಿರುತ್ತಾರೆ. ಆದರೆ ಈ ವರ್ಷ ಬೇಕು ಎಂದಾಗ ಬೀಜ ಹಾಗೂ ಗೊಬ್ಬರ ಸಿಗಲಿಲ್ಲ. ಕೃಷಿ ಅಧಿಕಾರಿಗಳು ಲೆಕ್ಕದಲ್ಲಿ ಮಾತ್ರ ಇಷ್ಟು ಬೀಜ ಬಂದಿದೆ ಎನ್ನುತ್ತಾರೆ. ವಾಸ್ತವಿಕವಾಗಿ ರೈತರಿಗೆ ಅಷ್ಟೊಂದು ಪ್ರಮಾಣದಲ್ಲಿ ಬೀಜ ದೊರಕಿಲ್ಲ. ಅಲ್ಪಾವಧಿ ಬೀಜಗಳು ದೊರಕದ ಕಾರಣ ಪರ್ಯಾಯ ಬೆಳೆ ಬೆಳೆಯುವಂತೆ ಸರ್ಕಾರ ಹಾಗೂ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಹೇಳಿದ್ದನ್ನು ನೋಡಿದರೆ ಬೀಜ ಹಾಗೂ ಗೊಬ್ಬರ ರೈತರ ಬೇಡಿಕೆಗೆ ಅನುಗುಣವಾಗಿ ಪೂರೈಕೆಯಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.