ಮಂಗಳೂರು/ಉಡುಪಿ: ಕರಾವಳಿಯಾದ್ಯಂತ ರವಿವಾರ ಮಳೆಯ ಪ್ರಮಾಣ ಕಡಿಮೆಯಾದರೂ ನೆರೆ ನೀರು ಪೂರ್ತಿಯಾಗಿ ಇಳಿಕೆಯಾಗದೆ ತಗ್ಗು ಪ್ರದೇಶಗಳಲ್ಲಿ ಆತಂಕದ ಸ್ಥಿತಿ ಮುಂದುವರಿದಿದೆ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಾದ್ಯಂತ ಹಾಗೂ ಉಡುಪಿ ಜಿಲ್ಲೆಯ ಉಡುಪಿ ಮತ್ತು ಕಾಪು ತಾಲೂಕು ವ್ಯಾಪ್ತಿಯಲ್ಲಿ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.
ಮಂಗಳೂರು ತಾಲೂಕಿನ ವಿವಿಧೆಡೆ ರವಿವಾರ ಬಿಟ್ಟು ಬಿಟ್ಟು ಮಳೆಯಾಗಿದೆ. ದ.ಕ. ಜಿಲ್ಲೆಯ ಗ್ರಾಮಾಂತರದಲ್ಲಿ ಮಳೆ ಸ್ವಲ್ಪ ಹೆಚ್ಚಿತ್ತು. ಮುಂಜಾಗ್ರತೆಯಾಗಿ ಎನ್‌ಡಿಆರ್‌ಎಫ್ ತಂಡ ಮಂಗಳೂರು, ಉಡುಪಿಗೆ ಆಗಮಿಸಿದೆ.
ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಸುಳ್ಯ ತಾಲೂಕಿನ ವಿವಿ ಧೆಡೆ ಉತ್ತಮ ಮಳೆಯಾಗಿದೆ. ಸುಬ್ರಹ್ಮಣ್ಯ ಸುತ್ತಮುತ್ತ ಭಾರೀ ಮಳೆಯಾಗಿದ್ದು, ಕುಮಾರಧಾರಾ ತುಂಬಿ ಹರಿಯುತ್ತಿದೆ.
ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಿದ್ದಾರೆ. ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ನಿಗದಿಯಂತೆ ನಡೆಯಲಿವೆ.
ಉಡುಪಿ ಜಿಲ್ಲೆಯ ಉಡುಪಿ ಮತ್ತು ಕಾಪು ತಾಲೂಕು ವ್ಯಾಪ್ತಿಯ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ರಜೆ ಘೋಷಿಸಿದ್ದಾರೆ. ಕೊಡಗು ಜಿಲ್ಲೆಯಲ್ಲೂ ಡಿಸಿ ಶ್ರೀ ವಿದ್ಯಾ ಅವರು ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.