Advertisement
ಕೃಷ್ಣಾ, ಭೀಮಾ, ದೂಧಗಂಗಾ, ವೇದಗಂಗಾ, ಘಟಪ್ರಭಾ, ಮಲಪ್ರಭಾ, ತುಂಗಭದ್ರಾ, ಕಾಳಿ, ಅಘನಾಶಿನಿ ಸೇರಿದಂತೆ ಎಲ್ಲ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. 52 ಸೇತುವೆಗಳು ಮುಳುಗಡೆಯಾಗಿವೆ. 9420 ಜನರನ್ನು ಸ್ಥಳಾಂತರಿಸಲಾಗಿದೆ. ಪುಣೆ-ಬೆಂಗಳೂರು, ವಿಜಯಪುರ-ಧಾರವಾಡ ರಸ್ತೆ ಸಂಚಾರ, ಕರ್ನಾಟಕ-ಗೋವಾ ರೈಲು ಸಂಚಾರ ಬಂದ್ ಆಗಿದೆ. ಮತ್ತೆ ನಾಲ್ವರು ಮೃತಪಟ್ಟಿದ್ದಾರೆ.
Related Articles
Advertisement
3 ಹೆದ್ದಾರಿ ಸಹಿತ 12 ಸೇತುವೆ ಬಂದ್: ಕೃಷ್ಣಾ, ಘಟಪ್ರಭಾ ಉಕ್ಕಿ ಹರಿಯುತ್ತಿರುವುದರಿಂದ ಬಾಗಲಕೋಟೆ ಜಿಲ್ಲೆಯಲ್ಲಿ ನೆರೆ ಹಾವಳಿ ಮಿತಿ ಮೀರಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಘಟಪ್ರಭಾ ನದಿಗೆ 1.28 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ ಹೀಗಾಗಿ ಮುಧೋಳದ ಕಾಂಬಳೆ ಗಲ್ಲಿ ಮತ್ತು ಕುಂಬಾರ ಗಲ್ಲಿಗಳು ಜಲಾವೃತಗೊಂಡಿದ್ದು, ಇಲ್ಲಿನ 35 ಕುಟುಂಬಗಳ 105 ಜನರನ್ನು ಸ್ಥಳಾಂತರಿಸಲಾಗಿದೆ. ಇನ್ನೂ 150 ಕುಟುಂಬಗಳ ಸುಮಾರು 350ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲು ಸಿದ್ಧತೆ ನಡೆದಿದೆ. ಧಾರವಾಡ-ವಿಜಯಪುರ, ಜಮಖಂಡಿ-ಜತ್ತ, ಜಮಖಂಡಿ- ಸಾವಳಗಿ ಹೆದ್ದಾರಿ ಸೇರಿದಂತೆ ಮುಧೋಳ, ಜಮಖಂಡಿ ಹಾಗೂ ರಬಕವಿ-ಬನಹಟ್ಟಿ ತಾಲೂಕಿನ ಒಟ್ಟು 12 ಸೇತುವೆಗಳು ಜಲಾವೃತಗೊಂಡಿವೆ. ಹೀಗಾಗಿ ಈ ಮಾರ್ಗಗಳ ಸಂಚಾರ ಬಂದ್ ಆಗಿವೆ. ಕೃಷ್ಣಾ ನದಿಗೆ 4.22 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಮಖಂಡಿ ತಾಲೂಕಿನ 27 ಹಳ್ಳಿಗಳು ಬಾಧಿತಗೊಂಡಿವೆ. ನಾಲ್ಕು ಗ್ರಾಮಗಳು ಜಲಾವೃತಗೊಂಡಿದ್ದು, ಈವರೆಗೆ 225 ಕುಟುಂಬಗಳ 825 ಜನ ಹಾಗೂ 1,415 ಜಾನುವಾರು ಸ್ಥಳಾಂತರಿಸಲಾಗಿದೆ. ಜಮಖಂಡಿ ತಾಲೂಕಿನಲ್ಲಿ 11 ಹಾಗೂ ಮುಧೋಳ ನಗರದಲ್ಲಿ 2 ಸೇರಿ ಒಟ್ಟು 13 ಗಂಜಿ ಕೇಂದ್ರ ತೆರೆಯಲಾಗಿದೆ.
ಹೆದ್ದಾರಿಗಳ ಸಂಪರ್ಕವೇ ಕಡಿತ
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು ಖಾನಾಪುರ-ಗೋವಾ, ಖಾನಾಪುರ-ಬೆಳಗಾವಿ, ಖಾನಾಪುರ-ಪಾರಿಶ್ವಾಡ, ಖಾನಾಪುರ -ಪಣಜಿ ರಾಜ್ಯ ಹೆದ್ದಾರಿ ಮೇಲೆ ನೀರು ಬಂದಿರುವುದರಿಂದ ಸಂಚಾರ ಸ್ಥಗಿತಗೊಂಡಿದೆ. ಚೋರ್ಲಾ ಬಳಿ ಭೂ ಕುಸಿತ ಉಂಟಾಗಿದ್ದರಿಂದ ಬೆಳಗಾವಿ-ಗೋವಾ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ. ಲೋಂಡಾದಲ್ಲಿ 25 ಮನೆಗಳು ಜಲಾವೃತವಾಗಿದ್ದು ಲೋಂಡಾ ರೈಲ್ವೆ ನಿಲ್ದಾಣದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಖಾನಾಪುರ ಹೊರವಲಯದ ಜಮೀನಿನಲ್ಲಿರುವ ಶಾಸಕಿ ಅಂಜಲಿ ನಿಂಬಾಳಕರ ಮನೆ ಸಹ ಸಂಪೂರ್ಣ ಜಲಾವೃತಗೊಂಡಿದೆ. ನಂದಗಡ-ಬೀಡಿ ರಸ್ತೆ ಪಕ್ಕದಲ್ಲಿರುವ ಹೊನ್ನಮ್ಮ ದೇವಸ್ಥಾನದ ಎರಡೂ ಬದಿಗಳಿಂದ ಕೆರೆ ತುಂಬಿ ಉಕ್ಕಿ ಹರಿಯುತ್ತಿದೆ. ಬೀಡಿ-ಹಳಿಯಾಳ, ಬೀಡಿ-ಕಿತ್ತೂರ ಮಧ್ಯದಲ್ಲಿರುವ ತಟ್ಟಿ ಹಳ್ಳದ ಸೇತುವೆಗಳ ಮೇಲೆಯೇ ನೀರು ಹರಿಯುತ್ತಿದ್ದು ಸಂಚಾರಕ್ಕೆ ಬಂದ್ ಆಗಿದೆ.
ಮಳೆಗೆ ಮತ್ತೆ ನಾಲ್ವರು ಬಲಿ
ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಶ್ರೀಂಗೇರಿ ಗ್ರಾಮದ ಶಿವಪ್ಪ ಸೊಟ್ಟಕ್ಕನವರ(50) ಧರ್ಮಾ ಜಲಾಶಯದ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾನೆ. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಚಿಕ್ಕನಕೋಟೆ ಬಳಿ ಬೈಕ್ ಮೇಲೆ ತೆರಳುತ್ತಿದ್ದ ವಿಠuಲ್ ಗಣಪತಿ ಶೆಟ್ಟಿ ಮರ ಬಿದ್ದು ಮೃತಪಟ್ಟಿದ್ದಾರೆ. ಕಾರವಾರ ತಾಲೂಕಿನ ಮಾಜಾಳಿಯ ಬೈರೆ ಬಳಿ ಮಗನ ಮನೆಗೆ ಬಂದಿದ್ದ ಶಿವ ಎಂಬವರು ಹಳ್ಳದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಮಳೆ ಹಿನ್ನೆಲೆಯಲ್ಲಿ ಚನ್ನಮ್ಮನ ಕಿತ್ತೂರು ಬಳಿ ಹೆದ್ದಾರಿ ಬಳಿ ಸಂಚಾರ ನಿಯಂತ್ರಣ ಮಾಡುತ್ತಿದ್ದ ಚನ್ನಮ್ಮನ ಕಿತ್ತೂರು ಠಾಣೆ ಪಿಎಸ್‌ಐ ವೀರಪ್ಪ ಲಕ್ಕಿ(46) ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.