Advertisement
ಪಕ್ಕದ ಉತ್ತರಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಜಿಲ್ಲೆಯಲ್ಲಿ ತುಂಗಭದ್ರಾ, ವರದಾ ನದಿ ಜತೆಗೆ ತುಂಗಾ ಮೇಲ್ದಂಡೆ ಕಾಲುವೆಯಲ್ಲಿಯೂ ನೀರು ಅಪಾಯಮಟ್ಟ ಸಮೀಪಿಸುತ್ತಿವೆ. ಮಳೆ ನೀರಿನ ಜತೆಗೆ ಭದ್ರಾ ಹಾಗೂ ತುಂಗಾ ಜಲಾಶಯಗಳ ನೀರು ಸಹ ಸೇರಿಕೊಳ್ಳುತ್ತಿರುವುದರಿಂದ ಜಿಲ್ಲೆಯಲ್ಲಿನ ನದಿಗಳಲ್ಲಿ ನೀರಿನಮಟ್ಟ ಹೆಚ್ಚಾಗಿದ್ದು, ನದಿ ಪಾತ್ರದ ಸಾವಿರಾರು ಗ್ರಾಮಸ್ಥರಿಗೆ ಪ್ರವಾಹದ ಭೀತಿ ಎದುರಾಗಿದೆ. ಇದೇ ರೀತಿ ಪಕ್ಕದ ಜಿಲ್ಲೆಗಳಲ್ಲಿ ಮಳೆ ಇನ್ನೆರಡು ದಿನ ಮುಂದುವರಿದರೆ ಜಿಲ್ಲೆಯಲ್ಲಿನ ನದಿಗಳಲ್ಲಿ ನೆರೆ ಉದ್ಭವಿಸಿ ಗ್ರಾಮಗಳಿಗೆ, ಕೃಷಿ ಭೂಮಿಗೆ ನೀರು ನುಗ್ಗುವ ಸಾಧ್ಯತೆ ಇದೆ.
Related Articles
Advertisement
ಕೃಷಿ ಭೂಮಿಗೆ ನುಗ್ಗಿದ ನೀರು: ಉತ್ತರಕನ್ನಡ ಜಿಲ್ಲೆಯ ಅಂಚಿನಲ್ಲಿರುವ ಹಾನಗಲ್ಲ ತಾಲೂಕಿನ ವಿವಿಧೆಡೆ ಈಗಾಗಲೇ ವರದಾ, ಧರ್ಮಾ ನದಿಗಳು ತುಂಬಿ ನೂರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿದೆ. ಇದೇ ರೀತಿ ಹಲವೆಡೆ ನದಿಗುಂಟ ಇರುವ ಕೃಷಿ ಭೂಮಿಗೂ ನೀರು ನುಗ್ಗಿದ್ದು ಅಪಾರ ಹಾನಿಯಾಗಿದೆ. ಗ್ರಾಮಾಂತರ ಭಾಗದ ಕೆಲವು ಕಡೆಗಳಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಗ್ರಾಮಸ್ಥರು ಅನಿವಾರ್ಯವಾಗಿ ಇದೇ ರಸ್ತೆಯಲ್ಲಿಯೇ ಜೀವ ಬಿಗಿ ಹಿಡಿದು ಸಂಚರಿಸುತ್ತಿದ್ದಾರೆ. ಕೆಲ ಗ್ರಾಮಗಳಲ್ಲಿ ರಸ್ತೆ ಸಂಪರ್ಕವೂ ಕಡಿತಗೊಂಡಿವೆ.
ಮನೆಯೊಳಗೆ ನೀರು ನುಗ್ಗಿ ಅವಾಂತರ ಸೃಷ್ಟಿ:
ಪಟ್ಟಣದಲ್ಲಿ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಖನೋಜಗಲ್ಲಿಯ ಕಲಖಂಡಿ ಪ್ಲಾಟ್‌ನ ಕೆಲವು ಮನೆಗಳು ಜಲಾವೃತಗೊಂಡು ಅಪಾರ ಹಾನಿ ಸಂಭವಿಸಿದ್ದು, ಇನ್ನು ಕೆಲ ಮನೆಗಳ ಗೋಡೆ, ಕಾಂಪೌಂಡಗಳು ಕುಸಿದಿವೆ.
ಸುಮಾರು 15 ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಲಿದ್ದು, ಜನಜೀವನ ಅಸ್ತವ್ಯಸ್ತಗೊಂಡು ಸಾರ್ವಜನಿಕರು ಮನೆಯಿಂದ ಹೊರಗೆ ಬರದಂತಾಗಿದೆ. ಜಿಲ್ಲಾಧಿಕಾರಿ ಭಾಜಪೇಯಿ ಆದೇಶದ ಮೇರೆಗೆ ಪಟ್ಟಣದ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿಸಲಾಗಿದೆ. ಮಳೆಯ ಅರ್ಭಟ ಹೀಗೆ ಮುಂದುವರೆದರೆ ಶಾಲಾ ಕಾಲೇಜುಗಳಿಗೆ ಬುಧವಾರವೂ ರಜೆ ಮುಂದುವರಿಯುವ ಸಾಧ್ಯತೆಗಳಿವೆ. ಪಟ್ಟಣದ ಖನೋಜಗಲ್ಲಿಯ ಕಲಕಂಡಿ ಪ್ಲಾಟ್‌ನ ಮಖಬೂಲಸಾಬ್, ಪುಟ್ಟವ್ವ ತಳವಾರ, ಲಕ್ಷಿ ್ಮೕಬಾಯಿ ಕೊಲ್ಲಾಪುರ, ಅದ್ದು ಆಲದಕಟ್ಟಿ, ಇಮಾಮ್‌ಸಾಬ್ ಠಪಾಲ ಅವರ ಮನೆಗಳಲ್ಲಿ ನೀರು ಹೊಕ್ಕು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಇನ್ನು ಚಾಮುಂಡೇಶ್ವರಿ ನಗರದ ಬಂಕಾಪುರ ಎಂಬುವವರ ಮನೆಯಲ್ಲಿಯೂ ಕೂಡಾ ನೀರು ಹೊಕ್ಕು ಹಾನಿ ಸಂಭವಿಸಿದೆ.
ವಿವಿಧೆಡೆ ಮನೆಯ ಗೋಡೆ, ಕಂಪೌಂಡ್, ಮೇಲ್ಛಾವಣಿಗಳು ಧರೆಗುರುಳಿವೆ. ಬಾಡ ಗ್ರಾಮದ 12 ಮನೆಗಳಿಗೆ ಹಾನಿಸಂಭವಿಸಿದೆ. ಬಸರಿಕಟ್ಟಿಯಲ್ಲಿ ಮನೆಯ ಗೋಡೆ ಕುಸಿದು ವ್ಯಕ್ತಿಯೊಬ್ಬನಿಗೆ ಗಾಯವಾದ ಬಗ್ಗೆ ವರದಿಯಾಗಿದೆ. ಹೋತನಹಳ್ಳಿ, ತೋರೂರ ಗ್ರಾಮದ ಕೆಲವು ಹೊಲ ಹಾಗೂ ಮನೆಗಳಿಗೆ ನೀರು ಹೊಕ್ಕು ಹಾನಿ ಸಂಭವಿಸಿದೆ. ಹುಲಿಕಟ್ಟಿಯ ಡೊಂಕನಕೆರೆ ಶಿಂಗಾಪುರದ ಕೆರೆಗಳು ತುಂಬಿ ಕೋಡಿಬಿದ್ದು ಕೆಲವು ಹೊಲಗಳು ಜಲಾವೃತಗೊಂಡಿವೆ. ಬಂಕಾಪುರ ಹಳೆಬಂಕಾಪುರ, ಬಾಡ, ನಾರಾಯಣಪುರ, ಸದಾಶಿವಪೇಟೆ, ಬಿಸನಳ್ಳಿ ಗ್ರಾಮಗಳ ಹೊಲಗಳಲ್ಲಿಯೂ ನೀರು ನಿಂತು ಬೆಳೆ ಹಾನಿಯಾಗಿದೆ.
ಜಲಾವೃತಗೊಂಡ ಹುಲಿಕಟ್ಟಿ, ಹೋತನಹಳ್ಳಿ ಹಾಗೂ ಶಿಂಗಾಪುರ ಗ್ರಾಮಗಳಿಗೆ ಎ.ಸಿ. ಹರ್ಷಲ್ ನಾರಾಯಣ, ಶಿಗ್ಗಾವಿ ತಹಶೀಲ್ದಾರ ಚಂದ್ರಶೇಖರ ಗಾಳಿ, ಕಂದಾಯ ನಿರೀಕ್ಷಕ ಆರ್.ಎಂ.ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾಲುವೆಯಲ್ಲಿ ಕೊಚ್ಚಿ ಹೋದ ರೈತ:ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ಧರ್ಮಾ ಜಲಾಶಯದ ಕಾಲುವೆಯಲ್ಲಿ ರೈತನೊಬ್ಬ ಕೊಚ್ಚಿಹೋದ ಘಟನೆ ಹಾನಗಲ್ಲ ತಾಲೂಕಿನ ಶ್ರೀಂಗೇರಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.
ಅದೇ ಗ್ರಾಮದ ಶಿವಪ್ಪ ಸೊಟ್ಟಕ್ಕನವರ(50) ಕೊಚ್ಚಿ ಹೋದ ರೈತ. ಬೆಳಗ್ಗೆ ಗದ್ದೆ ಕೆಲಸಕ್ಕಾಗಿ ಹೋಗಿದ್ದ ಶಿವಪ್ಪ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ನೀರಿನ ಮೋಟಾರ್ ತೆಗೆಯಲು ಹೋದಾಗ ಕಾಲು ಜಾರಿ ಕಾಲುವೆಗೆ ಬಿದ್ದಿದ್ದಾನೆ. ಕೊಚ್ಚಿ ಹೋಗುತ್ತಿದ್ದ ಈತನನ್ನು ರಕ್ಷಿಸಲು ಅಲ್ಲಿದ್ದವರು ನಡೆಸಿದ ಪ್ರಯತ್ನ ವಿಫಲವಾಗಿದೆ.
ಸುದ್ದಿ ತಿಳಿದು ಸವಣೂರು ಉಪವಿಭಾಗಾಧಿಕಾರಿ ಹರ್ಷ ಲಬೋಯಾರ್ ನಾರಾಯಣರಾವ ಹಾಗೂ ತಹಶೀಲ್ದಾಲ್ ಎಂ.ಗಂಗಪ್ಪ ಸ್ಥಳಕ್ಕೆ ಆಗಮಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ನೂರಿತ ಮುಳುಗು ತಜ್ಞರು ಶೋಧ ಕಾರ್ಯ ನಡೆಸಿದ್ದಾರೆ.
92 ಮಿಮೀ ದಾಖಲೆ ಮಳೆ: ಬ್ಯಾಡಗಿ: ಕಳೆದ ಮೂರ್‍ನಾಲ್ಕು ದಿನಗಳಿಂದ ತಾಲೂಕಿನಾದ್ಯಂತ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯ ರುದ್ರ ನರ್ತನಕ್ಕೆ ಮನೆಗಳು ಕುಸಿದು ನೆಲಕಚ್ಚಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು. ಮಲೆನಾಡ ಭಾಗದಲ್ಲಿನ ಕಾಗಿನೆಲೆ ಮಳೆ ಮಾಪನ ಕೇಂದ್ರದಲ್ಲಿ ಒಟ್ಟು 92 ಮಿಮೀ ಮಳೆ ದಾಖಲಾದರೇ, ಹೆಡ್ಡಿಗೊಂಡ ಗ್ರಾಮದಲ್ಲಿನ ಮಳೆ ಮಾಪನದಲ್ಲಿ ಒಟ್ಟು 90 ಮಿಮೀ ಹಾಗೂ ಬ್ಯಾಡಗಿಯಲ್ಲಿ ಒಟ್ಟು 62 ಮಿಮೀ ಮಳೆಯಾಗಿದೆ.
•ಎಚ್.ಕೆ. ನಟರಾಜ