Advertisement

ಮಹಾರಾಷ್ಟ್ರ ಮಳೆ; ವಿಜಯಪುರ ಜಿಲ್ಲೆಯ ಕೃಷ್ಣಾ-ಭೀಮಾ ನದಿಯಲ್ಲಿ ಪ್ರವಾಹ

03:43 PM Oct 23, 2022 | Team Udayavani |

ವಿಜಯಪುರ: ಮಹಾರಾಷ್ಟ್ರ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯ ಕಾರಣ ಅಲ್ಲಿನ ಜಲಾಶಯಗಳಿಂದ ಹೊರ ಹರಿವು ಹೆಚ್ಚಾಗಿ ಕರ್ನಾಟಕದ ವಿಜಯಪುರ ಜಿಲ್ಲೆಯ ಕೃಷ್ಣಾ-ಭೀಮಾ ನದಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

Advertisement

ನೆರೆಯ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಹೆಚ್ಚಿದ್ದು, ಅಲ್ಲಿನ ಉಜನಿ ಹಾಗೂ ವೀರ್ ಜಲಾಶಯಗಳು ಭರ್ತಿಯಾಗಿ ಹೊರ ಹರಿವು ಹೆಚ್ಚಾದ ಕಾರಣ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡುತ್ತಿದೆ.

ಮಹಾರಾಷ್ಟ್ರದ ಉಜನಿ ಹಾಗೂ ವೀರ್ ಜಲಾಶಯಗಳಿಂದ ಭೀಮಾನದಿಗೆ ನೀರು 2,16,600 ಕ್ಯೂಸೆಕ್ ನೀರು ಭೀಮಾ ನದಿಗೆ ಹರಿದು ಬರುತ್ತಿದ್ದು, ವಿಜಯಪುರ ಜಿಲ್ಲೆಯ ಭೀಮಾ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ.

ಮಹಾರಾಷ್ಟ್ರ ಹಾಗೂ ಕರ್ನಾಟಕದ ಸಮಾನಾಂತರ ಬಾಂದಾರ್ ಗಳು ಮುಳುಗಡೆಯಾಗಿವೆ. ನದಿ ತೀರದ ಜಮೀನುಗಳಿಗೂ‌ ನೀರು ನುಗ್ಗ ತೊಡಗಿದ್ದು, ಬೆಳೆಗಳು ಜಲಾವೃತ ಆಗುತ್ತಿವೆ.

ಭೀಮಾ ನದಿ ತೀರದಲ್ಲಿ ರೈತರು ಕೃಷಿಗೆ ನೀರು ಪಡೆಯಲು ಹಾಕಿರುವ ಸಾವಿರಾರು ಪಂಪ್ ಸೆಟ್ ಮುಳುಗಿ, ಪ್ರವಾಹದ ಸೆಳೆತಕ್ಕೆ ಕೊಚ್ಚಿ ಹೋಗಿವೆ. ಭೀಮಾ ನದಿಗೆ ಕರ್ನಾಟಕ, ಮಹಾರಾಷ್ಟ್ರ ಪರಿಸರದಲ್ಲಿ ನಿರ್ಮಿಸಿರುವ 8 ಬಾಂದಾರು (ಬ್ರಿಡ್ಜ್ ಕಂ ಬ್ಯಾರೇಜ್) ಗಳು ಮುಳುಗಡೆ ಆಗಿವೆ.

Advertisement

ಶಿರನಾಳ-ಔಜ್, ಗೋವಿಂದಪೂರ-ಬಂಡಾರಕವಟೆ, ಹಿಂಗಣಿ-ಆಳಗಿ, ಚಣೇಗಾಂವ-ಬರೂರು, ಉಮರಾಣಿ-ಲವಗಿ, ಪಡನೂರು-ಖಾನಾಪುರ, ಹಿಳ್ಳಿ-ಗುಬ್ಬೇವಾಡ ಬ್ಯಾರೇಜ್ ಗಳು ಜಲಾವೃತವಾಗಿ, ಮುಳುಗಿವೆ.

ಭೀಮಾ ನದಿ ತೀರದ ಹಳ್ಳಿಗಳಲ್ಲಿ ಇದೀಗ ಪ್ರವಾಹದ ಮುನ್ಸೂಚನೆ ಎಚ್ಚರಿಕೆ ಸಂದೇಶ ನೀಡುತ್ತಿದ್ದು, ನದಿ ತೀರಕ್ಕೆ ಜನ-ಜಾನುವಾರು ತೆರಳದಂತೆ ಸಾರ್ವಜನಿಕರಲ್ಲಿ ಜಿಲ್ಲಾಡಳಿತ ಮನವಿ ಮಾಡಿದೆ.

ಇದನ್ನೂ ಓದಿ:ಕಾನೂನು ಕಾಲೇಜು ಹಾಸ್ಟೆಲ್‌ ವಾರ್ಡನ್‌ ಮುಂದುವರಿಕೆಗೆ ಆಗ್ರಹ

ಮತ್ತೊಂದೆಡೆ ಮಹಾರಾಷ್ಟ್ರದ ಮಳೆಯ ಅಬ್ಬರಕ್ಕೆ ಕೃಷ್ಣಾ ನದಿಯೂ ಉಕ್ಕಿ ಹರಿಯುತ್ತಿದ್ದು, ಕೊಯ್ನಾ ಸೇರಿದಂತೆ ವಿವಿಧ ಜಲಾಶಯ -ಬಾಂದಾರುಗಳು ಮೂಲಕ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಯಶಯಕ್ಕೆ ಒಳ ಹರಿವು ಹೆಚ್ಚಿದೆ.

ಕೃಷ್ಣಾ ನದಿ ಪಾತ್ರದ ಮೂಲಕ ಯಾದಗಿರಿ-ರಾಯಚೂರು ಜಿಲ್ಲೆಗಳ ಗಡಿಯಲ್ಲಿ ನಿರ್ಮಿಸಿರುವ ಬಸವ ಸಾಗರ ಜಲಾಶಯಕ್ಕೆ ಒಳ ಹರಿವು ಹೆಚ್ಚಿದೆ. ಆಲಮಟ್ಟಿ ಶಾಸ್ತ್ರೀ ಜಲಾಶಯಕ್ಕೆ 70 ಸಾವಿರ ಕ್ಯೂಸೆಕ್ ಒಳ ಹರಿವು ಇದ್ದು, 26 ಕ್ರಸ್ಟ್ ಗೇಟ್ ಮೂಲಕ ಕೃಷ್ಣಾ ನದಿಗೆ 1.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡುತ್ತಿದೆ.

519.60 ಮೀಟರ್ ಎತ್ತರದ ಶಾಸ್ತ್ರೀ ಜಲಾಶಯದಲ್ಲಿ 519.54 ಮೀಟರ್ ನೀರು ಸಂಗ್ರಹ ಆಗಿದ್ದು, ಇನ್ನೂ ಒಳ ಹರಿವು ಹಾಗೂ ಹೊರ ಹರಿವು ಹೆಚ್ಚಳ ಆಗುವ ಸಾದ್ಯತೆ ಇದೆ. ಹೀಗಾಗಿ ಕೃಷ್ಣಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರುವ ನಿರೀಕ್ಷೆ ಇದೆ.

ಪರಿಣಾಮ ಕೃಷ್ಣಾ ಭಾಗ್ಯ ಜಲ ನಿಗಮದ ಆಧಿಕಾರಿಗಳು ಕೃಷ್ಣಾ ನದಿ ತೀರದ ಜನವಸತಿ ಪ್ರದೇಶದ ಸಾರ್ವಜನಿಕರು, ಜಾನುವಾರು ನದಿ ತೀರಕ್ಕೆ ತೆರಳದಂತೆ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next