Advertisement

ಕಾರ್ಕಳ ತಾಲೂಕಿನ ವಿವಿಧೆಡೆ ಉತ್ತಮ ಮಳೆ, ಹಾನಿ

11:54 PM Apr 10, 2023 | Team Udayavani |

ಕಾರ್ಕಳ: ಕಾರ್ಕಳ ತಾಲೂಕಿನ ವಿವಿಧ ಭಾಗಗಳಲ್ಲಿ ಸೋಮವಾರ ಸಂಜೆ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಿದೆ. ಗ್ರಾಮೀಣ ಭಾಗವಾದ ಹೊಸ್ಮಾರು, ಮಾಳ, ಬಜಗೋಳಿ, ಈದು ಪ್ರದೇಶದಲ್ಲಿ ಬಲವಾದ ಗಾಳಿ ಬೀಸಿದೆ. ಸಿಡಿಲು ಮಿಂಚಿನ ಆರ್ಭಟ ಕೂಡ ಹೆಚ್ಚಾಗಿತ್ತು. ನಗರದಲ್ಲಿ ಸಾಮಾನ್ಯ ಮಳೆಯಾಗಿದೆ.

Advertisement

ಮಾಳ, ಬಜಗೋಳಿ, ಹೊಸ್ಮಾರು ಭಾಗದಲ್ಲಿ ಅಡಿಕೆ ಮರಗಳು ನೆಲಕಚ್ಚಿವೆ. ಪಾಜೆಗುಡ್ಡೆ ತಿರುವಿನಲ್ಲಿ ಭಾರೀ ಸುಳಿ ಗಾಳಿ ಬೀಸಿದ್ದು ಹೆದ್ದಾರಿಯಲ್ಲಿ ಸಂಚರಿಸುವವರು ಆತಂಕಕ್ಕೆ ಈಡಾಗಿದ್ದರು. ಸುಮಾರು ಅರ್ಧ ತಾಸು ಈ ಭಾಗದಲ್ಲಿ ಮಳೆ ಸುರಿದಿದೆ.

ಗಾಳಿಯ ಅಟಾಟೋಪದಿಂದ ಜನತೆ ಭೀತಿಗೆ ಒಳಗಾದರು. ವಿದ್ಯುತ್‌ ತಂತಿಗಳ ಮೇಲೆ ಮರದ ಗೆಲ್ಲುಗಳು ಬಿದ್ದು ವಿದ್ಯುತ್‌ ವಿತರಣೆಯಲ್ಲಿ ವ್ಯತ್ಯಯವಾಯಿತು. ವಿದ್ಯುತ್‌ ತಂತಿಗಳಲ್ಲಿ ನೇತಾಡುತ್ತಿದ್ದ ಮರದ ಕೊಂಬೆಗಳನ್ನು ಮೆಸ್ಕಾಂ ಸಿಬಂದಿ ತೆರವುಗೊಳಿಸಿದರು. ಇನ್ನುಳಿದಂತೆ ಮಿಯ್ನಾರು, ಕುಂಟಿಬೈಲು, ಜೋಡುಕಟ್ಟೆ, ಕೆರ್ವಾಶೆ, ಶಿರ್ಲಾಲು, ಅಜೆಕಾರು,

ಮುಟ್ಲುಪ್ಪಾಡಿ, ಹೆರ್ಮುಂಡೆ, ಜಾರ್ಕಳ, ಮುಂಡ್ಲಿ, ದುರ್ಗ, ಮಲೆಬೆಟ್ಟು, ಕಡಂಬಳ, ಮುಡಾರು, ಬೈಲೂರು, ಗುಡ್ಡೆಯಂಗಡಿ, ನೀರೆ, ಕಣಜಾರು, ಕುಕ್ಕುಂದೂರು, ನಕ್ರೆ, ಪರಪ್ಪು, ಜೋಗುಲಬೆಟ್ಟು ಮುಂತಾದೆಡೆ ಮಿಂಚು – ಗುಡುಗು ಸಹಿತ ಮಳೆಯಾಗಿದೆ.

ಕಾರ್ಕಳ ತಾಲೂಕಿನಲ್ಲಿ 3 ದಿನಗಳ ಅಂತರದಲ್ಲಿ ಸುರಿದ 2ನೇ ಮಳೆ ಇದಾಗಿದ್ದು, ವಾತಾವರಣ ಸ್ವಲ್ಪ ತಂಪಾಗಿದೆ. ನೀರಿನ ಕೊರತೆಯಿಂದ
ಅಡಿಕೆ ತೋಟಗಳಿಗೆ ನೀರು ಹಾಯಿಸುವಲ್ಲಿ ಇದ್ದ ಸಮಸ್ಯೆ ಕೊಂಚ ದೂರವಾಗಿ ಕೃಷಿಕರು ಸಮಾಧಾನ ಪಟ್ಟು ಕೊಳ್ಳುವಂತಾಯಿತು.

Advertisement

ಬೆಳ್ತಂಗಡಿಯಲ್ಲಿ ಹನಿ ಮಳೆ
ಕಳೆದ ಎರಡು ದಿನಗಳ ಹಿಂದೆ ಆಲಿಕಲ್ಲು ಮಳೆಯಾದ ಬಳಿಕ ಸೋಮವಾರ ಬೆಳ್ತಂಗಡಿ ತಾಲೂಕಿನ ಸುತ್ತಮುತ್ತ ಮೋಡಕವಿದ ವಾತಾವರಣದೊಂದಿಗೆ ನಾರಾವಿ, ಮುಂಡಾಜೆ ಸಹಿತ ಕೆಲವೆಡೆ ಹನಿ ಮಳೆಯಾಗಿದೆ.
ತಾಲೂಕಿನಲ್ಲಿ ಸಂಜೆ ಮೋಡ ಕವಿದ ವಾತಾವರಣವಿತ್ತು.

ಹೆರ್ಮುಂಡೆ: ಮನೆಗೆ ಹಾನಿ
ಕಾರ್ಕಳ: ಹೆರ್ಮುಂಡೆ ಗ್ರಾಮದ ಕರ್ಜಿಬೈಲು ಶಂಕರ ಪೂಜಾರಿ ಅವರ ಮನೆ ಹಾಗೂ ದನದ ಕೊಟ್ಟಿಗೆಗೆ ಗಾಳಿ-ಮಳೆಯಿಂದ ಭಾಗಶಃ ಹಾನಿಯಾಗಿದೆ. ಸಿಮೆಂಟ್‌ ಶೀಟಿನ ಛಾವಣಿ ಸಂಪೂರ್ಣ ಹಾನಿಗೀಡಾಗಿದೆ.ಸುಮಾರು 20 ಸಾವಿರ ರೂಪಾಯಿ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.

ಹೆದ್ದಾರಿ ಬದಿಯ ಮರ ಧರಾಶಾಯಿ
ಬೆಳ್ತಂಗಡಿ: ಹಳೆಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿದ್ದ ಬೃಹತ್‌ ಮರವೊಂದು ಏಕಾಏಕಿ ಉರುಳಿ ಬಿದ್ದಿದೆ. ಆಗ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಅಪಾಯ ಸಂಭವಿಸಿಲ್ಲ. ತತ್‌ಕ್ಷಣ ಅರಣ್ಯ ಇಲಾಖೆಯ ಸಿಬಂದಿ ಹಾಗೂ ಸ್ಥಳೀಯರು ಮರವನ್ನು ತೆರವುಗೊಳಿಸಿದರು.

ತೆಂಗಿನ ಮರ ಬಿದ್ದು ಮನೆಗೆ ಹಾನಿ
ಮೂಡುಬಿದಿರೆ: ನೆಲ್ಲಿಕಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸೋಮವಾರ ಭಾರೀ ಗಾಳಿ ಸಹಿತ ಮಳೆ ಸುರಿದಿದ್ದು ನೆಲ್ಲಿಕಾರಿನ ಅಮರೇಂದ್ರ ಜೈನ್‌ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆ ಜಖಂಗೊಂಡಿದೆ. ಸುಮಾರು 2 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next