ಕಲಬುರಗಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜು.10ರಂದು ಆಗಮಿಸುತ್ತಿದ್ದು, ಅವರ ಸ್ವಾಗತಕ್ಕೆ ಕಲಬುರಗಿ ನಗರ ಸಜ್ಜುಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲೆಡೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಭಾರಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಒಂಭತ್ತು ತಿಂಗಳ ನಂತರ ಜಿಲ್ಲೆಗೆ ಬರುತ್ತಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ ಉಂಟಾದ ಪ್ರವಾಹ ಸಂದರ್ಭದಲ್ಲಿ ಜಿಲ್ಲೆಗೆ ಭೇಟಿ ಕೊಟ್ಟಿದ್ದರು. ಆಗ ವಿಮಾನ ನಿಲ್ದಾಣದಲ್ಲೇ ಅಧಿಕಾರಿಗಳ ಸಭೆ ನಡೆಸಿದ್ದರು. ಈಗ ಅವರು ಆಗಮಿಸುವ ಮುನ್ನ ದಿನವಾದ ಶುಕ್ರವಾರ ಸಂಜೆ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದಿದ್ದು, ವರ್ಷಾಧಾರೆ ಸ್ವಾಗತ ಕೋರಿದಂತೆ ಆಗಿದೆ. ನೂತನ ತರಕಾರಿ ಮಾರುಕಟ್ಟೆಗೆ ಅಡಿಗಲ್ಲು ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯನ್ನು ಸಿಎಂ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಭದ್ರತೆ ಸೇರಿದಂತೆ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕೈಗೊಂಡಿದೆ.
ಗುರುವಾರದಿಂದಲೇ ಆಯಾಕಟ್ಟಿನ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿ ನಿಗಾ ವಹಿಸುವ ಕೆಲಸ ಮಾಡಿದರು. ಸಿಎಂ ಬಂದಿಳಿಯುವ ವಿಮಾನ ನಿಲ್ದಾಣ, ಅವರು ಭಾಗವಹಿಸುವ ಕಾರ್ಯಕ್ರಮಗಳ ಸ್ಥಳಗಳಲ್ಲಿ ಅಧಿಕ ನಿಗಾ ವಹಿಸಿದ್ದಾರೆ. ಸಿಎಂ ಅವರನ್ನು ಸ್ವಾಗತ ಕೋರುವ ಮುಖ್ಯ ರಸ್ತೆಗಳಲ್ಲಿ ಕಾಮಾನುಗಳನ್ನು ಸ್ಥಾಪನೆ ಮಾಡಲಾಗಿದೆ. ವಿಮಾನ ನಿಲ್ದಾಣ ಮುಂಭಾಗ, ವಿಶ್ವವಿದ್ಯಾಲಯದ ಮುಂದಿನ ಮುಖ್ಯ ರಸ್ತೆ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ, ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತ ಹೀಗೆ ಸಿಎಂ ಸಂಚರಿಸುವ ಮಾರ್ಗದಲ್ಲಿ ಸ್ವಾಗತ ಕಾಮಾನುಗಳು ರಾರಾಜಿಸುತ್ತವೆ. ಇತ್ತ, ರಸ್ತೆ ವಿಭಜಕಗಳ ಮಧ್ಯೆ ಸ್ವತ್ಛತೆ ಮತ್ತು ರಸ್ತೆಯಲ್ಲಿನ ತಗ್ಗು-ಗುಂಡಿಗಳನ್ನು ಮುಚ್ಚುವ ಕೆಲಸವನ್ನೂ ಮಹಾನಗರ ಪಾಲಿಕೆ ಮಾಡಿದೆ. ಈ ನಡುವೆ ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸಾ ° ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಆಯಾ ಇಲಾಖೆ ಅ ಧಿಕಾರಿಗಳು ಶಿಷ್ಠಾಚಾರದಂತೆ ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚಿಸಿದರು.
ಜಿಲ್ಲೆಯ ಎಲ್ಲ ಇಲಾಖೆಯ ಅ ಧಿಕಾರಿಗಳು ಸಮನ್ವಯತೆ ಕಾಪಾಡಿಕೊಂಡು ಮುಖ್ಯಮಂತ್ರಿಗಳ ಪ್ರವಾಸ ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರಮಿಸಬೇಕು. ಕೊರೊನಾ ಭೀತಿ ಕಾರಣ ಮುಖ್ಯಮಂತ್ರಿಗಳು ಭಾಗವಹಿಸುವ ಕಾರ್ಯಕ್ರಮದಲ್ಲಿ ಹೆಚ್ಚಿನ ಜನಸಂದಣಿ ಆಗದಂತೆ ಮತ್ತು ಅವರು ಸಂಚರಿಸುವ ಮಾರ್ಗ ಮಧ್ಯೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಡಾ| ಸಿಮಿ ಮರಿಯಂ ಜಾರ್ಜ್, ಜಿಲ್ಲಾ ಪಂಚಾಯಿತಿ ಸಿಇಒ ಡಾ|ದಿಲೀಷ್ ಸಸಿ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಶ್ರೀಕಾಂತ ಬಿ.ಕಟ್ಟಿಮನಿ, ಹೆಚ್ಚುವರಿ ಜಿಲ್ಲಾ ಧಿಕಾರಿ ಡಾ| ಶಂಕರ ವಣಿಕ್ಯಾಳ, ನಗರಾಭಿವೃದ್ಧಿ ಪ್ರಾ ಧಿಕಾರದ ಆಯುಕ್ತ ರಾಚಪ್ಪ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ ಮಲ್ಲಿಕಾರ್ಜುನ ಜೇರಟಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಶರಣಬಸಪ್ಪ ಗಣಜಲಖೇಡ, ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಚಿದಾನಂದ ನಿಂಬಾಳ ಹಾಗೂ ಜಿಲ್ಲಾ ಮಟ್ಟದ ಅ ಧಿಕಾರಿಗಳು ಪಾಲ್ಗೊಂಡಿದ್ದರು.