Advertisement

ಹಲವೆಡೆ ಮಳೆ: ಸಿಡಿಲಿಗೆ ಇಬ್ಬರು ಬಲಿ

03:50 AM Mar 07, 2017 | Team Udayavani |

ಬೆಂಗಳೂರು: ರಾಜಧಾನಿ ಸೇರಿದಂತೆ ರಾಜ್ಯದ ವಿವಿಧೆಡೆ ಸೋಮವಾರ ಗುಡುಗು ಸಹಿತ ಅಕಾಲಿಕ ಮಳೆಯಾಗಿದ್ದು ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿ, 9 ಕುರಿಗಳು ಮೃತಪಟ್ಟ ಬಗ್ಗೆ ವರದಿಯಾಗಿದೆ.

Advertisement

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮಲ್ಲಪ್ಪನಹಳ್ಳಿ ನಾಲ್ವರಿಗೆ ಸಿಡಿಲು ಬಡಿದು, ಇಬ್ಬರು ಮೃತಪಟ್ಟು ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಮಂಜುಳ (40) ಭಾರತಿ (13) ಮೃತ ದುರ್ದೈವಿಗಳು. ಶಿಲ್ಪ , ಸಂತೋಷ ಎಂಬುವವರ ಸ್ಥಿತಿ ಗಂಭೀರವಾಗಿದ್ದು ಗುಬ್ಬಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೂಲಿ ಕೆಲಸಕ್ಕೆ ಹೋಗಿ ಮನೆಗೆ ಹಿಂದಿರುಗುವಾಗ ಬಿರುಗಾಳಿ ಸಹಿತ ಭಾರೀ ಮಳೆ ಸುರಿದ ಪರಿಣಾಮ ಪೆಮ್ಮನಹಳ್ಳಿ ಗೇಟ್‌ ಬಳಿಯ ಆಲದಮರದ ಕೆಳಗೆ ನಿಂತಿದ್ದು ಸಿಡಿಲು ಬಡಿದು ಮರದ ಕೆಳಗೆ ನಿಂತಿದ್ದ ಮಂಜುಳಾ ಮತ್ತು ಆಕೆಯ ಮಗಳು ಭಾರತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚೇಳೂರು ಹೋಬಳಿಯ ಅನುಸೂನ್‌ ಕುಂಟೆ ಗ್ರಾಮದ ಗಿರಿಯಮ್ಮ ಎಂಬುವವರಿಗೆ ಸೇರಿದ 9 ಕುರಿಗಳೂ ಸೋಮವಾರ ಸಂಜೆ ಸಿಡಿಲು ಬಡಿದು ಸಾವನ್ನಪ್ಪಿವೆ. ಜಿಲ್ಲೆಯ ಶಿರಾ, ಪಾವಗಡ ಮತ್ತಿತರ ಕಡೆ ತುಂತುರು ಮಳೆಯಾಗಿದ್ದು ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ ತಾಲೂಕಿನ ಭಾಗದಲ್ಲಿ ಮೋಡ ಮುಸುಕಿದ ವಾತಾವರಣವಾಗಿದ್ದು ಅಲ್ಲಲ್ಲಿ ಮಳೆಯಾಗಿದೆ.

ಮಂಡ್ಯ ನಗರದಲ್ಲಿ ಮಧ್ಯಾಹ್ನ 12.30 ರಿಂದ ಆರಂಭವಾದ ಮಳೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಾದ್ಯಂತ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾದ ಬಗ್ಗೆ ವರದಿಯಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಯಳಂದೂರು, ಸಂತೆಮರಹಳ್ಳಿಯ ಕೆಲ ಭಾಗಗಳಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿದು ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ, ಗೌರಿಬಿದನೂರು ತಾಲೂಕುಗಳಲ್ಲಿ ಗುಡುಗು, ಮಿಂಚು ಸಮೇತ ತುಂತರು ಮಳೆಯಾಗಿದ್ದು ಯಾವುದೇ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

Advertisement

ಇನ್ನೂ ಮೂರ್‍ನಾಲ್ಕು ದಿನ ಮಳೆ ಸಾಧ್ಯತೆ
ಬೆಂಗಳೂರು:
ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಬೆಂಗಳೂರು ನಗರ ಸೇರಿದಂತೆ
ರಾಜ್ಯದ ದಕ್ಷಿಣ ಒಳನಾಡು ಪ್ರದೇಶಗಳ ಕೆಲವೆಡೆ ಸೋಮವಾರ ಮಳೆ ಸುರಿದಿದೆ. ಇನ್ನೂ ಮೂರ್‍ನಾಲ್ಕು ದಿನ ಕೆಲವೆಡೆ ಮಳೆಯಾಗುವ ಮುನ್ಸೂಚನೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸಾಮಾನ್ಯವಾಗಿ ಮಾರ್ಚ್‌-ಏಪ್ರಿಲ್‌ ತಿಂಗಳಲ್ಲಿ ರಾಜ್ಯದಲ್ಲಿ ಬೇಸಿಗೆ ಮಳೆಯಾಗುವುದು ವಾಡಿಕೆ. ಆ ಪ್ರಕಾರ, ಲಕ್ಷದ್ವೀಪ
ಪ್ರದೇಶದಿಂದ ತೆಲಂಗಾಣ, ತಮಿಳುನಾಡು ಮೂಲಕವಾಗಿ ಉತ್ತರ ಕರ್ನಾಟಕದ ಭಾಗ ದವರಿಗೆ ವಾಯುಭಾರ ಕುಸಿತ ವಾತಾವರಣ ಸೃಷ್ಟಿಯಾಗಿದೆ. ಜತೆಗೆ ಮೇಲ್ಮೆ„ ಸುಳಿಗಾಳಿ ಕೂಡ ಬೀಸುತ್ತಿರುವುದರ ಪರಿಣಾಮ, ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು, ತುಮಕೂರು, ಕೋಲಾರ, ಮೈಸೂರು, ಮಂಡ್ಯ, ಕೊಡಗು ಮತ್ತಿತರ ಕಡೆಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ.

ಈ ವಾಯುಭಾರ ಕುಸಿತದಿಂದ ಸೋಮವಾರ ಕೂಡ ತುಮಕೂರಿನಲ್ಲಿ 3 ಸೆಂ.ಮೀ. ಹಾಗೂ ಮೈಸೂರು ಜಿಲ್ಲೆಯಲ್ಲಿ
ಒಂದು ಸೆಂ.ಮೀ. ಮತ್ತು ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿ ತುಂತುರು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಎಸ್‌.ಎಂ. ಮೇಟ್ರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next