Advertisement
ಮಾರ್ಚ್ ಅಂತ್ಯಕ್ಕೇ ಪಯಸ್ವಿನಿಯಲ್ಲಿ ನೀರಿನ ಹರಿವು ಕಡಿಮೆಗೊಂಡಿದ್ದರಿಂದ ಸುಳ್ಯ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಭೀತಿ ಎದುರಾಗಿತ್ತು. ಎಪ್ರಿಲ್ 10ರ ವೇಳೆ ಪಯಸ್ವಿನಿ ತನ್ನ ಹರಿವನ್ನು ನಿಲ್ಲಿಸಿ ನೀರಿನ ಸಮಸ್ಯೆಯ ಬಗ್ಗೆ ಎಚ್ಚರಿಕೆಯ ಸಂದೇಶ ಸಾರಿತ್ತು. ಬಳಿಕ ಪಯಸ್ವಿನಿ ನದಿಯಿಂದ ನಗರಕ್ಕೆ ನೀರು ಸರಬರಾಜಾಗುವ ಸಂಗ್ರಹಣ ಗುಂಡಿಯಲ್ಲೂ ನೀರು ಇಳಿಕೆಗೊಂಡಿತ್ತು. ಎಪ್ರಿಲ್ ಅಂತ್ಯಕ್ಕೆ ನೀರಿನ ಸಮಸ್ಯೆ ಎದುರಾಗುವ ಭೀತಿಯಿಂದ ಸುಳ್ಯ ನಗರದಿಂದ ಸಂಪಾಜೆ ವರೆಗಿನ ಕೃಷಿಕರು ನದಿಯಿಂದ ಪಂಪ್ ಮೂಲಕ ಎರಡು ದಿನಕ್ಕೊಮ್ಮೆ ನೀರು ಎತ್ತುವಂತೆ ಸೂಚಿಸಲಾಗಿತ್ತು.
ಹೆಚ್ಚಿನ ವರ್ಷಗಳಲ್ಲಿ ಮಾರ್ಚ್ ಕೊನೆಗೆ ಎಪ್ರಿಲ್ ಆರಂಭದಲ್ಲಿ ಮಳೆಯಾಗಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿತ್ತು. ಆದರೆ ಈ ವರ್ಷ ಎಪ್ರಿಲ್ ಕೊನೆಯವರೆಗೆ ಮಳೆಯಾಗದೇ ಇದ್ದುದರಿಂದ ಪಯಸ್ವಿನಿ ತನ್ನ ಹರಿವು ನಿಲ್ಲಿಸಿತ್ತು. ಎಪ್ರಿಲ್ ಅಂತ್ಯದಲ್ಲಿ ಎರಡು ಮೂರು ದಿನ ಸುಳ್ಯ ಹಾಗೂ ಮಡಿಕೇರಿ ಭಾಗದಲ್ಲೂ ಮಳೆಯಾದ ಹಿನ್ನೆಲೆಯಲ್ಲಿ ಪಯಸ್ವಿನಿಯಲ್ಲಿ ನೀರಿನ ಮಟ್ಟ ಹೆಚ್ಚಳಗೊಂಡಿತು. ನೀರು ಸಂಗ್ರಹಗಾರದಿಂದಲೂ ನೀರನ್ನು ಹೊರ ಬಿಡಲಾಯಿತು. ಕಲ್ಲಮುಟ್ಲು ಭಾಗದಲ್ಲಿ
ನೀರಿನ ಹರಿವು ಆರಂಭವಾಗಿದೆ. ಹೊಂಡ-ಗುಂಡಿಗಳಲ್ಲಿ ನೀರು ಭರ್ತಿಯಾಗಿದೆ. ಮಳೆಗಾಗಿ ವಿವಿಧ ದೇವಸ್ಥಾನಗಳಲ್ಲಿ ಪ್ರಾರ್ಥನೆಯನ್ನೂ ಸಲ್ಲಿಸಲಾಗಿತ್ತು. ವರುಣ ಕೃಪೆ ತೋರಿದ್ದರಿಂದ ಜನತೆ ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.
Related Articles
ಈಗಿನ ಸ್ಥಿತಿಯಲ್ಲಿ ಮುಂದಿನ 20-25 ದಿನಗಳವರೆಗೆ ನೀರಿನ ಸಮಸ್ಯೆಯ ಭೀತಿ ದೂರವಾಗುವ ನಿರೀಕ್ಷೆ ಇದೆ. ವಾರದ ಬಳಿಕ ಮತ್ತೆ ಮಳೆಯಾದಲ್ಲಿ ನೀರಿನ ಸಮಸ್ಯೆ ದೂರವಾಗಲಿದೆ. ಆದರೂ ನ.ಪಂ. ವತಿಯಿಂದ ನೀರಿನ ಮಿತ ಬಳಕೆ, ಜಾಗೃತಿ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಲಾಗುತ್ತಿದೆ. ಅನಗತ್ಯ ಪೋಲು ಮಾಡದಂತೆ ತಿಳಿ ಹೇಳಲಾಗುತ್ತಿದೆ.
Advertisement
*ದಯಾನಂದ ಕಲಾರ್