ಬೆಂಗಳೂರು: ವನಿತೆಯರ ಅಂಡರ್-18 ಫಿಬಾ ಏಷ್ಯಾ ಬಾಸ್ಕೆಟ್‌ಬಾಲ್ ಕೂಟಕ್ಕೆ ಮೊದಲ ದಿನವಾದ ಸೋಮವಾರ ಮಳೆಯಿಂದ ಭಾರೀ ತೊಂದರೆ ಎದುರಾಗಿದೆ.
ಬೆಂಗಳೂರಿನ ಕಂಠೀರವ ಒಳ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಅಷ್ಟೂ ಪಂದ್ಯಗಳು ರದ್ದಾಗಿವೆ. ಇದರಲ್ಲಿ ಭಾರತ-ಆಸ್ಟ್ರೇಲಿಯ ನಡುವಿನ ಪಂದ್ಯವೂ ಒಂದು. ಈ ಪಂದ್ಯ ಮಂಗಳವಾರಕ್ಕೆ ಮುಂದೂಡಲ್ಪಟ್ಟಿದೆ ಎಂದು ಮೂಲಗಳು ತಿಳಿಸಿವೆ.
ರವಿವಾರ ರಾತ್ರಿ ಸುರಿದ ಭಾರೀ ಮಳೆಯ ಪರಿಣಾಮ, ನೀರು ಕಂಠೀರವ ಒಳಾಂಗಣಕ್ಕೆ ಹಾಗೂ ಇಲ್ಲಿನ ಕೊಠಡಿಗಳಿಗೂ ನುಗ್ಗಿದೆ. ಒಳಾಂಗಣದಲ್ಲಿ ಪ್ರೇಕ್ಷಕರು ಕೂರುವ ಜಾಗ, ಆಡುವ ಜಾಗವೆಲ್ಲ ಕೆರೆಯಂತಾಗಿತ್ತು. ಹೀಗಾಗಿ ಪಂದ್ಯದ ಯಾವುದೇ ಸಾಧ್ಯತೆ ಇರಲಿಲ್ಲ. ಇದೇ ರೀತಿ ಮಳೆ ಸುರಿದರೆ ಕಂಠೀರವದ ಪಂದ್ಯಗಳನ್ನು ಬಹುಶಃ ಕೋರಮಂಗಲಕ್ಕೆ ವರ್ಗಾಯಿಸಬೇಕಾಗುತ್ತದೆ.
ಮೂಲಗಳ ಪ್ರಕಾರ, ಮಳೆ ಹಾನಿಯನ್ನು ತಪ್ಪಿಸಲು ಸಂಘಟಕರು ಅಗತ್ಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಹೀಗಾಗಿ ಕಂಠೀರವದಲ್ಲಿ ಪಂದ್ಯಗಳು ಸುಸೂತ್ರವಾಗಿ ನಡೆಯುತ್ತವೆ ಎಂಬ ಆಶಾವಾದ ಸಂಘಟಕರದ್ದು. ಇದಕ್ಕೆ ಮಳೆ ಎಷ್ಟರ ಮಟ್ಟಿಗೆ ಅವಕಾಶ ಮಾಡಿಕೊಡುತ್ತದೆ ಎನ್ನುವುದನ್ನು ನೋಡಬೇಕು.
ಕೋರಮಂಗಲ ಪಂದ್ಯಗಳ ಫಲಿತಾಂಶ
ಸೋಮವಾರ ಕೋರಮಂಗಲದಲ್ಲಿ ಕೆಲವು ಪಂದ್ಯಗಳು ನಡೆದವು. ಅಲ್ಲಿನ ಫಲಿತಾಂಶ ಹೀಗಿದೆ: ಮಂಗೋಲಿಯ ತಂಡ 68-37 ಅಂಕಗಳಿಂದ ಹಾಂಕಾಂಗನ್ನು, ಫಿಲಿಪ್ಪೀನ್ಸ್ 65-50 ಅಂತರದಿಂದ ಥಾಯ್ಲೆಂಡನ್ನು ಸೋಲಿಸಿದೆ.