Advertisement

ಅಲಿಕಲ್ಲು ಮಳೆ: ದ್ರಾಕ್ಷಿ ಬೆಳೆ ಹಾನಿ

02:38 PM May 01, 2022 | Shwetha M |

ವಿಜಯಪುರ: ಜಿಲ್ಲೆಯಲ್ಲಿ ಕಳೆದ ಗುರುವಾರ ಬಿರುಗಾಳಿ ಸಹಿತ ಸುರಿದ ಅಕಾಲಿಕ ಆಲಿಕಲ್ಲು ಮಳೆ ತೋಟಗಾರಿಕೆ ಬೆಳೆಯಲ್ಲಿ ತೊಡಗಿಸಿಕೊಂಡಿರುವ ಅನ್ನದಾತರನ್ನು ಕಂಗಾಲಾಗಿಸಿದೆ. ಅದರಲ್ಲೂ ದ್ರಾಕ್ಷಿ ಬೆಳೆಗಾರರನ್ನು ಹೈರಾಣಿಸಿದ್ದು, ಭವಿಷ್ಯದ ಚಿಂತೆ ಕಾಡುವಂತೆ ಮಾಡಿದೆ.

Advertisement

ಜಿಲ್ಲೆಯಲ್ಲಿ ಅತಿ ಹೆಚ್ಚು ಹಾಗೂ ವಿಶ್ವ ದರ್ಜೆಯ ರಫ್ತು ಗುಣಮಟ್ಟದ ದ್ರಾಕ್ಷಿ ಬೆಳೆಯುವ ತಿಕೋಟಾ ತಾಲೂಕಿನ ಘೋಣಸಗಿ, ಕಳ್ಳಕವಟಗಿ, ಸೋಮದೇವರಹಟ್ಟಿ ಸೇರಿದಂತೆ ಈ ಭಾಗದಲ್ಲಿ ಸುರಿದ ಮಳೆಗೆ ದ್ರಾಕ್ಷಿ ಬೆಳೆ ಹಾಳಾಗಿದೆ.

ಚಾಟ್ನಿ ಮಾಡಿದ್ದ ದ್ರಾಕ್ಷಿ ಬೆಳೆ ಬಿಸಿಲಿಗೆ ಚಿಗುರುವ ಹಂತದಲ್ಲಿತ್ತು. ಕುಡಿಯೊಡೆದಿದ್ದ ದ್ರಾಕ್ಷಿ ಬಳ್ಳಿಯ ಕಡ್ಡಿಗಳು ಬಿರುಸಾಗುವ ಹಂತದಲ್ಲೇ ಅಕಾಲಿಕ ಆಲಿಕಲ್ಲು ಮಳೆ ಸುರಿದಿರುವ ಕಾರಣ ಎಳೆಯ ಬಳ್ಳಿ ಕಡ್ಡಿಗಳು ಕತ್ತರಿಸಿ ನೆಲಕ್ಕೆ ಬಿದ್ದಿವೆ. ಬಳ್ಳಿಯಲ್ಲೇ ಉಳಿದಿರುವ ಕಡ್ಡಿಗಳು ಘಾಸಿಗೊಂಡಿದ್ದು, ಬೆಳವಣಿಗೆಗೆ ಬಾಧೆ ಎದುರಿಸುವ ಭೀತಿ ಎದುರಾಗಿದೆ.

ಪರಿಣಾಮ ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲಕುವ ಭೀತಿ ಎದುರಿಸುತ್ತಿದ್ದಾರೆ. ಕುಡಿ ಚಿಗುರುವ ಹಂತದಲ್ಲಿ ದ್ರಾಕ್ಷಿ ಕಡ್ಡಿಗೆ ಬಿರುಸಾದ ಆಲಿಕಲ್ಲು ಮಳೆ ಸುರಿದು ಬಳ್ಳಿಗಳ ಕುಡಿಗಳು ಹಾನಿಯಾಗಿವೆ. ಪರಿಣಾಮ ಬಳ್ಳಿಯಲ್ಲೇ ಇದ್ದರೂ ಗುಣಮಟ್ಟದ ನೈಸರ್ಗಿಕವಾದ ಲವಣಾಂಶ ಸೃಷ್ಟಿಯಾಗದೇ ಸಮಸ್ಯೆ ಎದುರಾಗಲಿದೆ.

ಮತ್ತೊಂದೆಡೆ ಹೊಸ ಕಡ್ಡಿಗೆ ಶಕ್ತಿಹೀನವಾಗುತ್ತವೆ. ಇದರಿಂದ ಹೂ ಕಟ್ಟುವುದಕ್ಕೆ ಬೇಕಾದ ಸಾಮರ್ಥ್ಯ ಕುಸಿತವಾಗಲಿದೆ. ಇದರಿಂದ ಪ್ರಸಕ್ತ ವರ್ಷದ ದ್ರಾಕ್ಷಿ ಇಳುವರಿಯಲೂ ಭಾರಿ ಪ್ರಮಾಣಧ ಕುಸಿತವಾಗುವ ಆತಂಕ ಎದುರಾಗಿದೆ ಎಂಬುದು ರೈತರ ಅಳಲು.

Advertisement

ರಾಜ್ಯದ ಮಟ್ಟಿಗೆ ಹೆಚ್ಚು ದ್ರಾಕ್ಷಿ ಬೆಳೆಯುವ ಕಾರಣಕ್ಕೆ ವಿಜಯಪುರ ಜಿಲ್ಲೆ ದ್ರಾಕ್ಷಿಯ ಕಣಜ ಎನಿಸಿಕೊಂಡಿದ್ದು, ಕಳೆದ ಹಲವು ವರ್ಷಗಳಿಂದ ಪ್ರಕೃತಿ ವೈಪರಿತ್ಯದಿಂದ ದ್ರಾಕ್ಷಿ ನಾಡಿನ ಅನ್ನದಾತ ಸಮಸ್ಯೆಗಳ ಸರಮಾಲೆ ಎದುರಿಸುತ್ತಲೇ ಬಂದಿದ್ದಾನೆ.

ಅಕ್ಟೋಬರ್‌ ಸಮಯದಲ್ಲಿ ಅಕಾಲಿಕವಾಗಿ ಹಾಳಾದ ದ್ರಾಕ್ಷಿ ಬೆಳೆಯುವ ನೆರೆಯ ಬಾಗಲಕೋಟೆ, ಬೆಳಗಾವಿ ರೈತರಿಗೆ ಪರಿಹಾರ ನೀಡಿತ್ತು. ಆದರೆ ಅತಿ ಹೆಚ್ಚು ದ್ರಾಕ್ಷಿ ಬೆಳೆಯು ವಿಜಯಪುರ ಜಿಲ್ಲೆಯ ದ್ರಾಕ್ಷಿ ಬೆಳೆಗಾರರನ್ನು ಪರಿಹಾರ ನೀಡುವ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಲಾಗಿದೆ ಎಂಬ ಅರೋಪವೂ ಇದೆ. ಇಂಥ ಸಂದರ್ಭದಲ್ಲೇ ಕಳೆದ ಹಂಗಾಮಿನ ಕಟಾವು ಹಂತದಲ್ಲಿ ತುಂತುರು ಮಳೆ, ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ದ್ರಾಕ್ಷಿ ಬೆಳೆ ಹಾನಿಯಾಗಿತ್ತು. ಇದರ ಬೆನ್ನಲ್ಲೇ ರೈತರು ಮತ್ತೆ ಎದೆಗುಂದದೇ ಭವಿಷ್ಯದ ಬೆಳೆಯ ಮೇಲೆ ಭರವಸೆ ಇರಿಸಿಕೊಂಡು ಚಾಟ್ನಿ ಮಾಡಿದ್ದರು. ಇದೀಗ ಕುಡಿಯೊಡೆಯುವ ಹಂತದಲ್ಲಿ ಅಕಾಲಿಕ ಸುರಿದ ಆಲಿಕಲ್ಲು ಮಳೆ ದ್ರಾಕ್ಷಿ ಬೆಳಗಾರರನ್ನು ಆರ್ಥಿಕ ಸಂಕಷ್ಟ ಎದುರಿಸುವಂತೆ ಮಾಡಿದೆ.

2021ರಿಂದ ಸತತ ಎರಡು ವರ್ಷ ವಿಜಯಪುರ ಜಿಲ್ಲೆಯ ದ್ರಾಕ್ಷಿ ಬೆಳೆಗಾರರಿಗೆ ಅಕಾಲಿಕ ಮಳೆ ಭಾರಿ ಪ್ರಮಾಣದ ಹಾನಿ ಮಾಡಿದೆ. ಒಂದೆಡೆ ಸಮೀಕ್ಷೆ ನಡೆಸುವಲ್ಲಿ ನಿರ್ಲಕ್ಷ ಮಾಡಲಾಗುತ್ತದೆ, ಮತ್ತೊಂದೆಡೆ ಹಾಗೂ ಹೀಗೂ ಮಾಡಿದ ಬೆಳೆ ಹಾನಿಗೆ ಪರಿಹಾರ ನೀಡುವಲ್ಲಿ ಸರ್ಕಾರ ದ್ರಾಕ್ಷಿ ಬೆಳೆಗಾರರಲ್ಲೇ ತಾರತಮ್ಯ ಮಾಡುತ್ತದೆ ಎಂಬ ಆಕ್ರೋಶವೂ ಇದೆ. ಮತ್ತೊಂದೆಡೆ ಬೆಳೆ ವಿಮಾ ತುಂಬಿದ ಪ್ರತಿ ರೈತರಿಗೆ ವಿಮಾ ಕಂಪನಿಯಿಂದ ಬಾಂಡ್‌ ನೀಡದಿರುವುದು ಬೆಳೆ ಹಾನಿ ಸಂದರ್ಭದಲ್ಲಿ ಪರಿಹಾರ ಪಡೆಯಲು ಸಮಸ್ಯೆ ಆಗುತ್ತಿದೆ. ಕಾರಣ ದ್ರಾಕ್ಷಿ ಬೆಳೆಗೆ ವಿಮೆ ತುಂಬಿದ್ದಕ್ಕೆ ವಿಮಾ ಕಂಪನಿಗಳು ರೈತರಿಗೆ ಬಾಂಡ್‌ ನೀಡಬೇಕು ಎಂದು ಬೇಡಿಕೆಯೂ ಇದೆ.

ಇದೀಗ ಅಕಾಲಿಕ ಆಲಿಕಲ್ಲು ಮಳೆಗೆ ಹಾನಿಯಾಗಿರುವ ದ್ರಾಕ್ಷಿ ಬೆಳೆಯ ಸಮೀಕ್ಷೆ ತ್ವರಿತವಾಗಿ ನಡೆಸಬೇಕು. ವಿಮಾ ಕಂಪನಿಗಳು ಹಾಗೂ ಸರ್ಕಾರಗಳು ತ್ವರಿತವಾಗಿ ಪರಿಹಾರ ನೀಡುವ ಮೂಲಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅನ್ನದಾತರ ನೆರವಿಗೆ ಬರಬೇಕು ಎಂಬ ಆಗ್ರಹ ಕೇಳಿ ಬಂದಿದೆ,

ಸರ್ಕಾರ ಕೂಡಲೇ ಜಿಲ್ಲೆಯಲ್ಲಿ ಅಕಾಲಿಕ ಮಳೆಗೆ ಹಾನಿಯಾದ ತೋಟಗಾರಿಕೆ ಎಲ್ಲ ಬೆಳೆಗಳಿಗೆ ಪರಿಹಾರ ನೀಡಲು ತ್ವರಿತವಾಗಿ ಸಮೀಕ್ಷೆ ನಡೆಸಬೇಕು. ಅದರಲ್ಲೂ ನನ್ನ ಕ್ಷೇತ್ರದಲ್ಲಿ ಹಾನಿಯಾಗಿರುವ ದ್ರಾಕ್ಷಿ ಬೆಳೆಗೆ ತುರ್ತಾಗಿ ಪರಿಹಾರ ನೀಡುವ ಮೂಲಕ ರೈತರ ನೆರವಿಗೆ ಧಾವಿಸಬೇಕು. -ಎಂ.ಬಿ. ಪಾಟೀಲ ಶಾಸಕರು, ಬಬಲೇಶ್ವರ ಕ್ಷೇತ್ರ

ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲೆಗಳ ರೈತರಿಗೆ 2021ರಲ್ಲಿ ಹೆಕ್ಟೆರ್‌ಗೆ 18 ಸಾವಿರ, 2022ರಲ್ಲಿ 28 ಸಾವಿರ ರೂ.ನಂತೆ ಎರಡು ಬಾರಿ ಪರಿಹಾರ ನೀಡಿದೆ. ಆದರೆ ವಿಜಯಪುರ ಜಿಲ್ಲೆಯ ರೈತರಿಗೆ ಬೆಳೆ ನಷ್ಟದ ಪರಿಹಾರ ದೊರೆತಿಲ್ಲ. ಈ ತಾರತಮ್ಯ ಸರಿಪಡಿಸಲು ಆಗ್ರಹಿಸಿ. -ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ

ನೇತೃತ್ವದಲ್ಲಿ ನಿಯೋಗದಲ್ಲಿ ತೆರಳಿ ದ್ರಾಕ್ಷಿ ಬೆಳೆಗಾರರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೇವೆ. ಅಭಯಕುಮಾರ ನಾಂದ್ರೇಕರ. ಅಧ್ಯಕ್ಷರು, ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘ ಈಚಿನ ವರ್ಷಗಳಲ್ಲಿ ಪ್ರಕೃತಿ ವೈಪರಿತ್ಯದಿಂದ ವಿಜಯಪುರ ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಕಂಗಲಾಗಿದ್ದಾರೆ. ಬೇಸಿಗೆಯಲ್ಲಿ ನೀರಿನ ಕೊರತೆ, ಛಳಿಗಾಲದಲ್ಲಿ ಸುರಿವ ಮಳೆಗೆ ಬೆಳೆ ಹಾನಿ. ಹಲವು ವರ್ಷ ಭೀಕರ ಬರಗಾಲ. ಹೀಗೆ ಸಾಲು ಸಾಲು ಪ್ರಕೃತಿ ವಿಕೋಪ ನಮ್ಮನ್ನು ಹೈರಾಣಾಗಿಸಿದೆ. ಸರ್ಕಾರ ಮಾತ್ರ ನಮ್ಮ ನೆರವಿಗೆ ಬಂದಿಲ್ಲ ಎಂಬುದು ದುರ್ದೈವದ ಸಂಗತಿ. -ಸುನೀಲ ಗದ್ಯಾಳ ದ್ರಾಕ್ಷಿ ಬೆಳೆ ಹಾನಿಯಾದ ರೈತ ಕಳ್ಳಕವಟಗಿ

-ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next