ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಸೋಮವಾರದಿಂದ ಮಳೆ ಸುರಿದಿದೆ. ಶುಕ್ರವಾರವೂ ಮೋಡ ಕವಿದ ವಾತಾವರಣವಿದ್ದು, ಜಿಟಿಜಿಟಿ ಮಳೆ ಕರಾವಳಿಯಲ್ಲಿ ಸುರಿದಿದೆ. ಘಟ್ಟದ ಮೇಲೆ ಒಂದೆರಡು ಸಲ ಮಳೆ ಬಿದ್ದಿದೆ. ಸಮುದ್ರ ಅಬ್ಬರಿಸುತ್ತಿರುವ ಕಾರಣ ದೋಣಿಗಳು ಕಡಲಲ್ಲಿ ಹಾಗೂ ಬಂದರಿನಲ್ಲಿ ಲಂಗುರ ಹಾಕಿವೆ. ಮೀನುಗಾರಿಕೆ ಅಸ್ತವ್ಯಸ್ತವಾಗಿದೆ.
ಕೃಷಿಯಲ್ಲಿ ಕೊಯ್ಲಿಗೆ ಬಂದ ಭತ್ತವನ್ನು ರಕ್ಷಿಸಿಕೊಳ್ಳಲಾಗದೆ ರೈತರು ಸಂಕಷ್ಟ ಪಡುತ್ತಿದ್ದಾರೆ. ಗದ್ದೆಯಲ್ಲಿ ಕೊಯ್ದ ಭತ್ತ ಮಳೆ ನೀರಿನ ಪಾಲಾಗಿದೆ. ಮೋಡ ಕವಿದ ವಾತಾವರಣ ಕಾರಣ ಜನರಲ್ಲಿ ನಿರುತ್ಸಾಹ ಕಾಣುತ್ತಿದೆ. ಜನರು ಮನೆಯಿಂದ ಅಷ್ಟಾಗಿ ಹೊರಗೆ ಬೀಳದ ಕಾರಣ ಪೇಟೆಯಲ್ಲಿ ಜನ ಸಂಚಾರ ವಿರಳವಾಗಿತ್ತು. ಇನ್ನು ಮೂರು ದಿನ ಮಳೆಯ ಕಾರಣ ಜನರು ಇನ್ನು ಮಳೆಗಾಲ ಮುಗಿಯಲಿಲ್ಲ. ನವೆಂಬರ್ ಮುಗಿಯುತ್ತಾ ಬಂದರೂ ಮಳೆ ನಿಲ್ಲುವುದಿಲ್ಲ ಎಂದು ಬೇಸರ
ವ್ಯಕ್ತಪಡಿಸುವುದು ಕೇಳಿ ಬರುತ್ತಿತ್ತು. ಶುಕ್ರವಾರದ ಬೆಳಗಿನ 8 ಗಂಟೆಯತನಕ ಕಳೆದ 24 ತಾಸಿನಲ್ಲಿ ಅಂಕೋಲಾದಲ್ಲಿ 2.5. ಮಿಮೀ ಮಳೆಯಾಗಿದೆ.
ಹಳಿಯಾಳದಲ್ಲಿ 1.2, ಹೊನ್ನಾವರದಲ್ಲಿ 0.3, ಕಾರವಾರದಲ್ಲಿ 1.4, ಕುಮಟಾದಲ್ಲಿ 3.6, ಮುಂಡಗೋಡದಲ್ಲಿ 1.2, ಸಿದ್ದಾಪುರದಲ್ಲಿ 2.4, ಶಿರಸಿಯಲ್ಲಿ 14.5, ಯಲ್ಲಾಪುರದಲ್ಲಿ 4.6 ಮಿಮೀ ಮಳೆ ಸುರಿದಿದೆ. 31.7 ಮಿಮೀ ಮಳೆ ಬಿದ್ದಿದೆ. ಮೋಡಕವಿದ ವಾತಾವರಣ ಮುಂದುವರಿದಿದೆ. ನ.18 ರಂದು 76.2, ನ.17 ರಂದು 384.4, ನ.16 ರಂದು 170.8, ನ.15 ರಂದು 100.6 ಮಿಮೀ ಮಳೆ ಜಿಲ್ಲೆಯಲ್ಲಿ ಸುರಿದಿದೆ. 900 ಹೆಕ್ಟೇರ್ ಭತ್ತದ ಬೆಳೆಗೆ ಹಾನಿಯಾಗಿದೆ. ಅಡಕೆ ಮತ್ತು ಜೋಳದ ಬೆಳೆಗೂ ನಷ್ಟ ಉಂಟಾಗಿದೆ ಎಂದು ಕೃಷಿ ಇಲಾಖೆ ಹೇಳಿದೆ.
ಇನ್ನು ಮೂರು ದಿನ ಮೋಡಕವಿದ ವಾತಾವರಣ ಮುಂದುವರಿಯಲಿದ್ದು, ಯಾವುದೇ ಕ್ಷಣ ಮಳೆ ಸುರಿಯಬಹುದಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ. ಅಧಿಕ ಮಳೆಯ ಪಟ್ಟಿಯಲ್ಲಿ ಉತ್ತರ ಕನ್ನಡ ಸಹ ಇದ್ದು, ತಾಲೂಕು ಆಡಳಿತಗಳು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.