Advertisement

ಮಳೆ ಹಬ್ಬಗಳು

06:00 AM Oct 12, 2018 | |

ಮಳೆ ಎಂದರೆ ಪ್ರಕೃತಿಗೆ ಹಬ್ಬ. ಈ ಹಬ್ಬದಲ್ಲಿ ಉತ್ಸಾಹಪೂರ್ಣತೆಯಿಂದ, ಉತ್ಸವ ಆಚರಿಸುವ ಉತ್ಸುಕತೆ ವಿಶ್ವದ ಹಲವೆಡೆ ಇದೆ, ಭಾರತದ ಪರಂಪರೆಯಂತೆ. ಬಂಗಾ ದ್ಯಾ ಜಾತ್ರಾ ಮಳೆ ದೇವತೆಯ ಹಬ್ಬ ಎಂದು ಕರೆಯಲಾಗುವ ಈ ಜಾತ್ರೆಗೆ ನೇಪಾಳದಲ್ಲಿ ಬಹಳ ಮಹತ್ವವಿದೆ. ಮಚ್ಛೇಂದ್ರನಾಥ-ನೇಪಾಳಿಗರ ಮಳೆದೇವತೆ. ಕಠ್ಮಂಡುವಿನ ಸಮೀಪದಲ್ಲೇ ಇರುವ ಬಂಗಾಮತಿಯಲ್ಲಿ ಮಚ್ಛೇಂದ್ರನಾಥನ ರಥಯಾತ್ರೆ ನಡೆದು, ಮಳೆ ದೇವರಿಗೆ ಗೌರವ ಸಮರ್ಪಿಸುವ ಸಂಪ್ರದಾಯ ಅನೂಚಾನವಾಗಿ ನಡೆದುಬಂದಿದೆ.

Advertisement

ಲಾಂಗ್ಟ್ ಚೊ ಹಬ್ಬ
“ಡ್ರ್ಯಾಗನ್‌’ ಚೈನಾದೇಶದ ಮಳೆಗೆ ಮತ್ತು ಜೀವರಾಶಿಯ ದೊರೆ ಹಾಗೂ ದೇವತೆ. ಚೀನೀಯರ ಜಾನಪದೀಯ ನಂಬಿಕೆಯಂತೆ ಡ್ರ್ಯಾಗನ್‌ ದೊರೆಗೆ ಜನರು ಪ್ರಾರ್ಥಿಸುವುದರಿಂದ ಕಾಲಕಾಲಕ್ಕೆ ಮಳೆಯಾಗುತ್ತದೆ. ಅಂತೆಯೇ ಈ ಹಬ್ಬ ಚೀನಾದಲ್ಲಿ ಬಲು ಮಹತ್ವ ಪಡೆದಿರುವ ಮಳೆಹಬ್ಬವಾಗಿದೆ.

ರಾಕೆಟ್‌ ಮಳೆಹಬ್ಬ
ಥಾಯ್‌ಲೆಂಡ್‌ನ‌ಲ್ಲಿ ಮಳೆಗಾಲದಲ್ಲಿ ಆಚರಿಸುವ ಈ “ರಾಕೆಟ್‌ ಫೆಸ್ಟಿವಲ್‌’ ಅಲ್ಲಿಯ ಮಳೆಗಾಲ (ಮೇಯಲ್ಲಿ) ಆಚರಿಸಲ್ಪಡುವ ವಿಶೇಷ ಹಬ್ಬವಾಗಿದೆ. ಮನೆಯಲ್ಲಿಯೇ ತಯಾರಿಸಿದ ರಾಕೆಟ್‌, ಸುಡುಮದ್ದುಗಳನ್ನು ಸಿಡಿಸಿ ಆನಂದಿಸುವ ಈ ಹಬ್ಬದ ದಿನ, ಮಹಿಳೆಯರ ಪಾರಂಪರಿಕ ನೃತ್ಯ, ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ.

ಮಕಾಹಿರೆ ಹಬ್ಬ ಅಥವಾ ಮಕಾಹಿರೆ ಕಾರ್ನಿವಲ್‌
ಈ ಹಬ್ಬ ಹವಾಯಿ ಪ್ರದೇಶದ ಮುಖ್ಯ ಹಬ್ಬ. ಅಕ್ಟೋಬರ್‌ನಿಂದ ಫೆಬ್ರವರಿಯವರೆಗೆ ಮಳೆರಾಯನಿಗೆ ಗೌರವ ಸೂಚಿಸಲು, ಸಂತಸದಿಂದ ಈ ಹಬ್ಬವನ್ನು ಹವಾಯಿಯನ್ನರು ಆಚರಿಸುತ್ತಾರೆ. ಅವರು ಈ ಸಮಯದಲ್ಲಿ ಮಳೆಗಾಲದ ವಿಶ್ರಾಂತಿಯ ಸಮಯವನ್ನು ಮಳೆ ದೇವತೆ ಲೋನೋ (Lono) ತಮಗೆ ನೀಡಿರುವ  ಉತ್ತಮ ಮಳೆ, ಬೆಳೆಯನ್ನು ಪ್ರಶಂಸಿಸುತ್ತಾ ವಿವಿಧ ಕ್ರೀಡೆ, ಉತ್ಸವ, ನೃತ್ಯ ಹಾಗೂ ವಿಶೇಷ ಭೋಜನ ಕೂಟಗಳನ್ನು ನಡೆಸಿ, ಆಚರಿಸುತ್ತಾರೆ.

ಫೆಸ್ಟಾ ಜುನಿನಾ
ಬ್ರೆಜಿಲ್‌ನಲ್ಲಿ ಈ ಮಳೆಹಬ್ಬವನ್ನು ಸಂತ ಜಾನ್‌ ದ ಬ್ಯಾಪ್ಟಿಸ್ಟ್‌ ಅವರಿಗೆ ಗೌರವ ಸೂಚಿಸುವ ಸಲುವಾಗಿ, ಮಳೆಯಿಂದಾದ ಇಳೆಯ, ಬೆಳೆಯ ಸಮೃದ್ಧಿಯನ್ನು ಆನಂದಿಸುವ ಸಲುವಾಗಿ ಆಚರಿಸುತ್ತಾರೆ. ಬ್ರೆಜಿಲ್‌ನ ಮಳೆಗಾಲದ ಸಮಯದಲ್ಲಿ (ಜೂನ್‌-ಜುಲೈನಲ್ಲಿ) ಆಚರಿಸಲ್ಪಡುವ ಈ ಹಬ್ಬದಲ್ಲಿ ಬ್ರೆಜಿಲ್‌ನ ಗ್ರಾಮೀಣ ಬದುಕಿನ ಸೊಗಡು ಅನಾವರಣಗೊಳ್ಳುವುದಲ್ಲದೆ, ಜೊತೆ ಜೊತೆಗೆ ಅಲ್ಲಿನ ಪ್ರಾಂತೀಯ ಪಾಕ ವೈವಿಧ್ಯ, ಉಡುಗೆ-ತೊಡುಗೆ, ಸಂಗೀತ ನೃತ್ಯಗಳು ಪ್ರಚುರಗೊಳ್ಳುತ್ತವೆ.

Advertisement

ಹೆಮಿಸ್‌ ಹಬ್ಬ
ಜಮ್ಮು , ಕಾಶ್ಮೀರದಲ್ಲಿನ ಲಡಾಖ್‌ನಲ್ಲಿ ಹೆಮಿಸ್‌ ಹಬ್ಬವು ಬೌದ್ಧ ಸ್ತೂಪದಲ್ಲಿ ನಡೆಯುತ್ತದೆ. ಈ ಮಳೆಹಬ್ಬದಲ್ಲಿ ಹಿಮಾಲಯದ ಅಂದಚಂದವನ್ನು ವೀಕ್ಷಿಸುವುದರ ಜೊತೆಗೆ, ಅಲ್ಲಿನ ಜನತೆಯ ನೃತ್ಯ, ಸಂಗೀತ, ಸಂಸ್ಕೃತಿಯನ್ನು ನೋಡಿ ಆನಂದಿಸಬಹುದು.

ಹರೇಲಿ ಹಬ್ಬ
ಛತ್ತೀಸ್‌ಗಡ್‌ ಹಾಗೂ ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿನ ಬುಡಕಟ್ಟು ಜನಾಂಗದ ಈ ಹಬ್ಬ ಶ್ರಾವಣ (ಸಾವನ್‌) ಮಾಸದಲ್ಲಿ ವಿಶಿಷ್ಟವಾಗಿ ನಡೆಯುತ್ತದೆ. ರೈತಾಪಿ ಬಂಧುಗಳು ಹಸು, ಎತ್ತು ಮೊದಲಾದವುಗಳನ್ನು ಗದ್ದೆಯಲ್ಲಿ ಬಳಸುವ ಸಾಧನಗಳನ್ನು ಪೂಜಿಸುತ್ತಾರೆ. ಇದೀ ರೀತಿಯಲ್ಲಿ ಒರಿಸ್ಸಾದಲ್ಲಿ “ರಾಜಪರ್ವ’ ಎಂದು ಮಹಿಳೆಯರೇ ಮುಖ್ಯವಾಗಿ ಹಬ್ಬವನ್ನು ಮಳೆಗಾಲದಲ್ಲಿ ಆಚರಿಸುತ್ತಾರೆ.

ವಿಶ್ವದ ಎಲ್ಲ ಬಗೆಯ ಸಂಸ್ಕೃತಿಯಲ್ಲೂ , ಅದೂ ವಿಶೇಷವಾಗಿ ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯಲ್ಲಿ ಭುವಿ, ಜಲ, ಅಗ್ನಿ , ವಾಯು, ಆಗಸ ಮೊದಲಾದ ಪಂಚಭೌತಿಕ ತಣ್ತೀಗಳನ್ನು ಪೂಜಿಸುವುದು, ಪ್ರಕೃತಿಯ ಆರಾಧನೆ ಬಹು ಪ್ರಾಮುಖ್ಯತೆ ಪಡೆದಿದೆ.

ಜೀವ ಸಂಕುಲಕ್ಕೆ, ಜನಜೀವನಕ್ಕೆ ಸಕಲ  ಚರಾಚರಗಳಿಗೂ ಜೀವನೀಯ ಮಳೆ! ಆದ್ದರಿಂದಲೇ “ಪರ್ಜನ್ಯ’ವೆಂದು ವೇದಕಾಲದಲ್ಲಿ ಮಳೆಯನ್ನು ಪೂಜಿಸಿದರು. ಮಳೆ ದೇವರಿಗೆ ವಿಶೇಷ ಸ್ಥಾನಮಾನ ಪೂಜೆ-ಪುನಸ್ಕಾರಗಳನ್ನು ಕಲ್ಪಿಸಿದರು. ಮಳೆ ಅಮೃತದ ಉಪಾಧಿಯಲ್ಲಿ, ಅಮೃತೋಪವಾಗಿ ಹರಿದು ಧಾರೆಯಾಗಿ, ಅಮೃತವರ್ಷಿಣಿಯಾಗಿ ಜಗವನ್ನು ಪೊರೆಯಲಿ.

ಡಾ. ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next