Advertisement
ಬಹುತೇಕ ಜನರ ಜೇಬು ಖಾಲಿಯಾಗಿರುವ ಈ ಹೊತ್ತಲ್ಲೇ ಬಂದಿರುವ ಹಬ್ಬಕ್ಕೆ ಜನರ ಅಸಕ್ತಿ ಸ್ವಲ್ಪ ಕಡಿಮೆಯೇ ಇದ್ದಂತಿದೆ. ಹೀಗಿದ್ದರೂ, ಮಾರುಕಟ್ಟೆಯಲ್ಲಿ ಖರೀದಿ ಭರಾಟೆಯೂ ನಡೆಯುತ್ತಿದೆ. ಆದರೆ, ನಿತ್ಯವೂ ಸಂಜೆ ಸುರಿಯುತ್ತಿರುವ ಮಳೆ ವ್ಯಾಪಾರಕ್ಕೂ ಹೊಡೆತ ಕೊಟ್ಟಿದೆ. ನಗರದಲ್ಲಿ ಈಗಾಗಲೇ ಹಲವಡೆ ಗಣೇಶ ಮೂರ್ತಿಗಳ ಮಾರಾಟ ಮಳಿಗೆಗಳು ತಲೆ ಎತ್ತಿವೆ.
Related Articles
Advertisement
ಬುಧವಾರ ಮಾರುಕಟ್ಟೆಯಲ್ಲಿ ಹೂವು-ಹಣ್ಣಿನ ಬೆಲೆ ಏರಿಕೆ ಇದ್ದು, ಗಂಟೆಗೊಮ್ಮೆ ಹೂವಿನ ಬೆಲೆಯಲ್ಲಿ ಏರಿಳಿತವಾಗಲಿದೆ. ವರಲಕ್ಷ್ಮೀ ಹಬ್ಬದ ಹಿಂದಿನ ದಿನ ಕನಕಾಂಬರ ಕೆಜಿಗೆ 1200 ರೂ.ರಿಂದ 1500ರೂ.ಗಳಂತೆ ಮಾರಾಟವಾಗಿತ್ತು. ಮಲ್ಲಿಗೆ ಮತ್ತು ಮಲ್ಲೆ ಹೂವು ಕೆಜಿಗೆ 450ರಿಂದ 500ರೂ.ನಂತೆ ಮಾರಾಟವಾಗಿತ್ತು. ಈ ಬಾರಿ ಹೂವಿನ ದರದಲ್ಲೂ ಸಾಕಷ್ಟು ವ್ಯತ್ಯಾಸವಾಗುವ ಸಾಧ್ಯತೆ ಇದೆ ಎಂದು ಹೂವಿನ ಮರ್ಚೆಂಟ್ ದಿವಾಕರ್ ತಿಳಿಸಿದ್ದಾರೆ.
ಆ.24ರಂದು ಗೌರಿ ಹಬ್ಬ ಮತ್ತು 25ಕ್ಕೆ ಗಣೇಶ ಹಬ್ಬ ಇದ್ದು, ಗೌರಿ ಹಬ್ಬದ ಅಂಗವಾಗಿ ತವರು ಮನೆಯಿಂದ ಹೆಣ್ಣುಮಕ್ಕಳಿಗೆ ಬಾಗಿನ ಕೊಡುವ ಸಂಪ್ರದಾಯವಿದೆ. ಈ ಹಿನ್ನೆಲೆಯಲ್ಲಿ ಬಟ್ಟೆ ಅಂಗಡಿಗಳಲ್ಲಿ ಭಾರಿ ಎನಿಸದಿದ್ದರೂ, ಉತ್ತಮ ವಹಿವಾಟು ನಡೆದಿದೆ.
ಹಣ್ಣಿನ ವ್ಯಾಪಾರ ಹೀಗಿದೆ: ಹಣ್ಣು-ತರಕಾರಿ ಮಾರುಕಟ್ಟೆಯಲ್ಲಿ ಹಬ್ಬದ ಅಂಗವಾಗಿ ವಹಿವಾಟು ಇನ್ನಷ್ಟೇ ಆರಂಭಗೊಳ್ಳಬೇಕಿದೆ. ಪ್ರಸ್ತುತ ಬಾಳೆ ಹಣ್ಣಿನ ವಹಿವಾಟಿನಲ್ಲಿ ಏಕಾಏಕಿ 10ರಿಂದ 15 ರೂ.ಕುಸಿತವಾಗಿದ್ದು, ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 95ರಿಂದ 97 ರೂ.ಇದ್ದ ಏಲಕ್ಕಿ ಬಾಳೆ ಹಣ್ಣಿನ ಬೆಲೆ ಇದೀಗ 80ರೂ.ಗಳಿಂದ 85ಕ್ಕೆ ಇಳಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಏಲಕ್ಕಿ ಬಾಳೆ ಹಣ್ಣಿಗೆ 95ರಿಂದ 110 ರೂ.ಗಳ ವರೆಗೂ ಇದೆ.
ಪಚ್ಚಬಾಳೆ ಕೆಜಿಗೆ 22ರಿಂದ 23 ರೂ.ಇದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ 35ರಿಂದ 40 ರೂ. ಹಾಗೂ ಪೂಜೆ ಬಾಳೆಗೆ ಹೋಲ್‌ಸೇಲ್‌ನಲ್ಲಿ ಕೆಜಿಗೆ 30 ರೂ.ಹಾಗೂ ಚಿಲ್ಲರೆ ಮಾರಾಟದಲ್ಲಿ 40ರಿಂದ 50 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಶನಿವಾರದ ವರೆಗೂ ಈ ಬೆಲೆಯಲ್ಲಿ ಸ್ವಲ್ಪ ಏರಿಳಿತವಾಗಲಿದ್ದು, ಹೆಚ್ಚಿನ ಬದಲಾವಣೆ ಆಗಲಾರದು ಎಂದು ಬಾಳೆಹಣ್ಣು ಮಂಡಿ ಮಾಲೀಕ ಚಕ್ರಪಾಣಿ ಮಾಹಿತಿ ನೀಡಿದ್ದಾರೆ.
ಹಣ್ಣುಗಳ ಮಾರುಕಟ್ಟೆಯ ಹೋಲ್‌ಸೇಲ್ ಮಾರಾಟದಲ್ಲಿ ಪ್ರಸ್ತುತ ಸೇಬು ಹಣ್ಣು ಪ್ರತಿ ಕೆಜಿಗೆ 80ರಿಂದ 120ರವರೆಗೂ ಇದೆ. ಅದರಲ್ಲೂ ಇಂರ್ಪೋಟೆಡ್ ಸೇಬಿನ ಬೆಲೆ 140ರಿಂದ 150 ಇದೆ. ಹಾಗೆಯೇ ಮೂಸಂಬಿ ಹಣ್ಣಿನ ಗಾತ್ರಕ್ಕೆ ತಕ್ಕಂತೆ ಪ್ರತಿ ಕೆಜಿಗೆ 15ರಿಂದ 35 ರೂ.ಗಳವರೆಗೆ ಗಾತ್ರಕ್ಕೆ ತಕ್ಕಂತೆ ವಿವಿಧ ಬೆಲೆ ನಿಗದಿಪಡಿಸಿ ಮಾರಾಟ ಮಾಡಲಾಗುತ್ತಿದೆ.
ಅನಾನಸ್ ಪ್ರತಿ ಕೆಜಿಗೆ 25 ರೂ.ಇದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ 30ರಿಂದ 35ರೂ.ನಂತೆ ಮಾರಲಾಗುತ್ತಿದೆ. ಕಲ್ಲಂಗಡಿ(ಕಿರಣ್) ಕೆಜಿಗೆ 20ರಿಂದ 22 ರೂ. ಹಾಗೂ ಪಪ್ಪಾಯ 15ರಿಂದ 16ರೂ.ಗಳಿವೆ. ದಾಳಿಂಬೆ ಗಾತ್ರಕ್ಕೆ ತಕ್ಕಂತೆ ನಾಲ್ಕು ವಿಧದಲ್ಲಿ 30ರೂ.ಗಳಿಂದ 60 ರೂ.ಗಳವರೆಗೆ ಮಾರಲಾಗುತ್ತಿದೆ.
ಬೆಂಗಳೂರಿನಿಂದ ತಮಿಳುನಾಡು, ಸೇಲಂ, ಕೇರಳಕ್ಕೆ ಹೆಚ್ಚು ಹಣ್ಣುಗಳು ರಫ್ತಾಗುತ್ತವೆ. ಜತೆಗೆ ರಾಜ್ಯದ ವಿವಿಧ ಕಡೆಗಳಿಗೆ 100ರಿಂದ 130ಕ್ಕೂ ಹೆಚ್ಚು ಲಾರಿಗಳಲ್ಲಿ ಹಣ್ಣುಗಳು ಹೋಗುತ್ತವೆ. ಎರಡು ದಿನ ಹಬ್ಬ ಇರುವುದರಿಂದ ಹಣ್ಣುಗಳ ವ್ಯವಹಾರ ಹೆಚ್ಚುವ ನಿರೀಕ್ಷೆ ಇದೆ. -ವಿ.ಸಿದ್ದಾರೆಡ್ಡಿ, ಕಾರ್ಯದರ್ಶಿ, ಎಪಿಎಂಸಿ, ಸಿಂಗೇನಅಗ್ರಹಾರ ಮಾರುಕಟ್ಟೆ. ಒಂದು ವಾರದಿಂದ ನಿರಂತವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ಹೂಗಳನ್ನು ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಮಳೆಯಿಂದಾಗಿ ಗ್ರಾಹಕರೂ ಅಷ್ಟಾಗಿ ಮಾರುಕಟ್ಟೆಗಳತ್ತ ಬರುತ್ತಿಲ್ಲ. ಆದರೂ, ವ್ಯಾಪಾರ ಇರುವುದು ಹಬ್ಬದ ಹಿಂದಿನ ಎರಡ ದಿನಗಳಲ್ಲಿ. ಹೀಗಾಗಿ ಆತಂಕವೇನೂ ಇಲ್ಲ.
-ಗೋಪಾಲಪ್ಪ, ಹೊಸಕೋಟೆಯ ಹೂ ಬೆಳೆಗಾರ