Advertisement

ಪಂದ್ಯಕ್ಕೆ ಮಳೆ ಕಾಟ, ಭಾರತಕ್ಕೆ ಲಕ್ಮಲ್‌ ಕಾಟ!

06:10 AM Nov 17, 2017 | Team Udayavani |

ಕೋಲ್ಕತಾ: ಭಾರತ-ಶ್ರೀಲಂಕಾ ನಡುವಿನ ಕೋಲ್ಕತಾ ಟೆಸ್ಟ್‌ ಪಂದ್ಯದ ಮೊದಲ ದಿನದಾಟ ಮಳೆಯಲ್ಲಿ ತೊಯ್ದಿದೆ. ಕೇವಲ 11.5 ಓವರ್‌ಗಳ ಆಟವಷ್ಟೇ ಸಾಧ್ಯವಾಗಿದ್ದು, ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ತೀವ್ರ ಕುಸಿತವೊಂದನ್ನು ಕಂಡು ಕೇವಲ 17 ರನ್ನಿಗೆ 3 ವಿಕೆಟ್‌ ಉದುರಿಸಿಕೊಂಡಿದೆ. ಟೀಮ್‌ ಇಂಡಿಯಾ ಇನ್ನಿಂಗ್ಸಿಗೆ ಸುರಂಗ ಕೊರೆದ ಬಲಗೈ ಮಧ್ಯಮ ವೇಗಿ ಸುರಂಗ ಲಕ್ಮಲ್‌ ಒಂದೂ ರನ್‌ ನೀಡದೆ ಈ ಮೂರೂ ವಿಕೆಟ್‌ಗಳನ್ನು ಕಬಳಿಸಿದ್ದಾರೆ!

Advertisement

ಸತತ ಮಳೆಯಿಂದಾಗಿ ಮೊದಲ ಅವಧಿಯ ಆಟ ಸಂಪೂರ್ಣ ನಷ್ಟವಾಯಿತು. ಆಟ ಆರಂಭವಾಗುವಾಗ ಅಪರಾಹ್ನ 1.42 ಆಗಿತ್ತು. ಟಾಸ್‌ ಗೆದ್ದ ಶ್ರೀಲಂಕಾ ನಿರೀಕ್ಷೆಯಂತೆ ಬೌಲಿಂಗ್‌ ಆರಿಸಿಕೊಳ್ಳಲು ವಿಳಂಬಿಸಲಿಲ್ಲ. ಆದರೆ ದ್ವಿತೀಯ ಅವಧಿಯಲ್ಲಿ ಸಾಧ್ಯವಾದದ್ದು 43 ನಿಮಿಷಗಳ ಆಟ ಮಾತ್ರ. ಅಲ್ಲಿಗೆ ಟೀ ವಿರಾಮ ತೆಗೆದು ಕೊಳ್ಳಲಾಯಿತು. ಟೀ ಬಳಿಕ ಬೆಳಕಿನ ಅಭಾವ ಎದುರಾಯಿತು. ಹೀಗಾಗಿ ಕೊನೆಯ ಅವಧಿಯಲ್ಲಿ 3.3 ಓವರ್‌ಗಳ ಆಟ ಮಾತ್ರ ನಡೆಯಿತು. ಅಲ್ಲಿಗೆ ಮೊದಲ ದಿನದ ಕ್ರಿಕೆಟಿಗೆ ತೆರೆ ಬಿತ್ತು. 

ಬಹಳಷ್ಟು ಬೀಟನ್‌ ಆಗಿ ಬಚಾವಾಗಿರುವ ಚೇತೇಶ್ವರ್‌ ಪೂಜಾರ 43 ಎಸೆತಗಳಿಂದ 8 ರನ್‌ ಮಾಡಿ ಆಡುತ್ತಿದ್ದಾರೆ. ಅವರ ಈ ರನ್ನುಗಳು 2 ಬೌಂಡರಿ ಮೂಲಕ ಬಂದಿವೆ. ಪೂಜಾರ ಜತೆ ಖಾತೆ ತೆರೆಯದ ಅಜಿಂಕ್ಯ ರಹಾನೆ ಇದ್ದಾರೆ.

ಲಂಕೆಗೆ ಲಕ್ಮಲ್‌ ಲಕ್‌
ಗುರುವಾರದ ಸೀಮಿತ ಅವಧಿಯ ಆಟದಲ್ಲಿ ಶ್ರೀಲಂಕಾಕ್ಕೆ “ಲಕ್‌’ ತೆರೆದಿರಿಸಿದವರು ಮಧ್ಯಮ ವೇಗಿ ಸುರಂಗ ಲಕ್ಮಲ್‌. ಪಂದ್ಯದ ಮೊದಲ ಎಸೆತದಿಂದಲೇ ವಿಕೆಟ್‌ ಬೇಟೆಯಲ್ಲಿ ತೊಡಗಿದ ಅವರು ಈಗಾಗಲೇ ಕೆ.ಎಲ್‌. ರಾಹುಲ್‌ (0), ಶಿಖರ್‌ ಧವನ್‌ (8) ಮತ್ತು ನಾಯಕ ವಿರಾಟ್‌ ಕೊಹ್ಲಿ (0) ಅವರನ್ನು ಪೆವಿಲಿಯನಿಗೆ ಅಟ್ಟಿದ್ದಾರೆ. 

ಮುರಳಿ ವಿಜಯ್‌ ಅವರನ್ನು ಮೀರಿಸಿ ಇನ್ನಿಂಗ್ಸ್‌ ಆರಂಭಿಸಲು ಬಂದ ಕೆ.ಎಲ್‌. ರಾಹುಲ್‌ ಅವರನ್ನು ಮೊದಲ ಎಸೆತದಲ್ಲೇ ಅದ್ಭುತ “ರಿಪ್ಪರ್‌’ ಎಸೆತವೊಂದರ ಮೂಲಕ ಉರುಳಿಸಿದ ಲಕ್ಮಲ್‌, ಭಾರತಕ್ಕೆ ಕಂಟಕವಾಗತೊಡಗಿದರು. ಪಂದ್ಯದ 7ನೇ ಓವರಿನ 2ನೇ ಎಸೆತ ಧವನ್‌ ಅವರನ್ನು ವಂಚಿಸಿತು. ಇನ್‌ಸೈಡ್‌ ಎಜ್‌ ಆದ ಚೆಂಡು ನೇರವಾಗಿ ಸ್ಟಂಪಿಗೆ ಹೋಗಿ ಅಪ್ಪಳಿಸಿತು. ಚಹಾ ವಿರಾಮದ ವೇಳೆ ಭಾರತದ ಸ್ಕೋರ್‌ 2ಕ್ಕೆ 17 ರನ್‌.

Advertisement

ಅಂತಿಮ ಅವಧಿಯ 3.3 ಓವರ್‌ಗಳ ಆಟದಲ್ಲಿ ಭಾರತಕ್ಕೆ ಒಂದೂ ರನ್‌ ಗಳಿಸಲಾಗಲಿಲ್ಲ. ಆದರೆ ಸುರಂಗ ಲಕ್ಮಲ್‌ ಅವರ ವಿಕೆಟ್‌ ಬೇಟೆ ನಿಲ್ಲಲಿಲ್ಲ. ಕೊಹ್ಲಿ ಅವರ ಬಹುಮೂಲ್ಯ ವಿಕೆಟ್‌ ಉರುಳಿಸಿ ಲಂಕಾ ಪಾಳೆಯದಲ್ಲಿ ಸಂಭ್ರಮ ಉಕ್ಕೇರಿಸಿದರು. ಕಪ್ತಾನ ಕೊಹ್ಲಿ ಲೆಗ್‌ ಬಿಫೋರ್‌ ಬಲೆಗೆ ಬಿದ್ದರು. ಆದರೆ ಲಕ್ಮಲ್‌ ಜತೆ ಬೌಲಿಂಗ್‌ ಆರಂಭಿಸಿದ ಲಹಿರು ಗಾಮಗೆ ಯಾವುದೇ ಪರಿಣಾಮ ಬೀರಿಲ್ಲ. ಅವರು 5.5 ಓವರ್‌ಗಳಿಂದ 16 ರನ್‌ ನೀಡಿದ್ದಾರೆ.

ಶುಕ್ರವಾರದ ಬ್ಯಾಟಿಂಗ್‌ ಭಾರತದ ಪಾಲಿಗೆ ನಿರ್ಣಾಯಕ. ಮಳೆ ಸಹಕರಿಸಿದರೂ ಪಿಚ್‌ ಹೇಗೆ ವರ್ತಿಸೀತು ಎಂಬುದರ ಮೇಲೆ ಪಂದ್ಯದ ಗತಿ ನಿರ್ಧಾರಗೊಳ್ಳಲಿದೆ.

ಇಶಾಂತ್‌ ಶರ್ಮ ರಣಜಿಗೆ
ಕೋಲ್ಕತಾ, ನ. 16: ಕೋಲ್ಕತಾ ಟೆಸ್ಟ್‌ ಪಂದ್ಯದ ಆಡುವ ಬಳಗದಲ್ಲಿ ಸ್ಥಾನ ಸಂಪಾದಿಸುವಲ್ಲಿ ವಿಫ‌ಲರಾದ ವೇಗಿ ಇಶಾಂತ್‌ ಶರ್ಮ ಅವರನ್ನು ರಣಜಿ ಪಂದ್ಯಕ್ಕಾಗಿ ಬಿಡುಗಡೆಗೊಳಿಸಲಾಗಿದೆ. ಇಶಾಂತ್‌ ಬದಲು ಭುವನೇಶ್ವರ್‌ ಕುಮಾರ್‌ ಟೆಸ್ಟ್‌ ತಂಡದಲ್ಲಿ ಅವಕಾಶ ಪಡೆದರು.

ಇಶಾಂತ್‌ ಗುರುವಾರ ಸಂಜೆಯೇ ಹೊಸದಿಲ್ಲಿ ತಲುಪಿ ದ್ದಾರೆ. ಶುಕ್ರವಾರದಿಂದ ಕೋಟ್ಲಾದಲ್ಲಿ ಆರಂಭವಾಗ ಲಿರುವ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಇಶಾಂತ್‌ ಆಡಲಿದ್ದು, ತಂಡದ ನೇತೃತ್ವವನ್ನೂ ವಹಿಸಲಿದ್ದಾರೆ. ರಿಷಬ್‌ ಪಂತ್‌ ಉಪನಾಯಕರಾಗಿರುತ್ತಾರೆ ಎಂದು ತಂಡದ ಮ್ಯಾನೇಜರ್‌ ಶಂಕರ್‌ ಸೈನಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next