ಬಳಗಾನೂರು: ಪಟ್ಟಣ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ನಿವಾರ್ ಚಂಡಮಾರುತದ ಪರಿಣಾಮ ಸುರಿಯುತ್ತಿರುವ ಮಳೆ ಹಾಗೂ ಗಾಳಿಗೆ ಕಟಾವು ಹಂತದಲ್ಲಿರುವ ಭತ್ತ ಸೇರಿ ಇತರೆ ಬೆಳೆಗಳು ನೆಲಕ್ಕುರುಳಿದ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ ಐದಾರು ದಿನಗಳ ಹಿಂದೆಯೇ ಕಟಾವು ಮಾಡಿದ ಭತ್ತ ಮಳೆ ಸುರಿದ ಹಿನ್ನೆಲೆಯಲ್ಲಿ ತೊಯ್ದು ಇದ್ದ ಸ್ಥಳದಲ್ಲಿಯೇ ಮೊಳಕೆಯೊಡೆದು ಹಾಳಾಗಿದೆ. ಭತ್ತ ಒಣಗಿಸಲು ರೈತ ಹರಸಹಾಸಪಡುವಂತಾಗಿದ್ದು, ಆಳುಗಳ ಮೂಲಕ ಕಾಳಿಗಾಗಿ ಪರದಾಡುವಂತಾಗಿದೆ.
ಜಿಟಿ-ಜಿಟಿ ಮಳೆ ಹಾಗೂ ಶೀತ ಗಾಳಿ ಬೀಸಿದ ಪರಿಣಾಮವಾಗಿ ರೈತರು ನಾಟಿ ಮಾಡಿದ ಭತ್ತದ ಬೆಳೆ ಜೋಳ, ಕಡಲೆ ಸೇರಿ ಇತರೆ ಬೆಳೆಗಳು ನೆಲಕ್ಕುರುಳಿ ನಾಶವಾಗಿದೆ. ಇದರಿಂದಾಗಿ ರೈತ ಭತ್ತ ನಾಟಿ ಮಾಡಲು ಎಕರೆಯೊಂದಕ್ಕೆ ಸುಮಾರು 30ರಿಂದ 35 ಸಾವಿರ ರೂ. ಖರ್ಚು ಮಾಡಿದ್ದಾರೆ. ಮಾರುಕಟ್ಟೆಯಲ್ಲಿರೈತರ ಭತ್ತಕ್ಕೆ ಬೆಲೆ ತೀವ್ರ ಕುಸಿತಗೊಂಡಿದ್ದು ಒಂದೆಡೆಯಾದರೆ, ಅಕಾಲಿಕ ಮಳೆಯಿಂದಾಗಿ ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿ ಹಾಳಾಗಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಪರಿಹಾರ ಕಲ್ಪಿಸಲು ಒತ್ತಾಯ: ಕಂದಾಯ ಇಲಾಖೆ ಅಧಿಕಾರಿಗಳು ಹಾಳಾಗಿರುವ ಭತ್ತ ವೀಕ್ಷಣೆ ಮಾಡಿ, ರೈತರಿಗೆ ಆದ ಹಾನಿ ಕುರಿತು ಮಾಹಿತಿ ಸಂಗ್ರಹಿಸಿ ಪರಿಹಾರ ಕಲ್ಪಿಸಲು ಮುಂದಾಗಬೇಕು. ಈ ಕುರಿತು ತಾಲೂಕಾಡಳಿತ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಕೊರತೆ: ಮಳೆ ಭೀತಿ ಹಿನ್ನೆಲೆಯಲ್ಲಿ ಈ ಭಾಗಲ್ಲಿ ಭತ್ತ ಕಟಾವಿಗಾಗಿ ರೈತರಿಗೆ ಸೂಕ್ತ ಸಮಯದಲ್ಲಿ ಯಂತ್ರ ಸಿಗುತ್ತಿಲ್ಲ ಮತ್ತು ಭತ್ತ ಕಟಾವಿಗಾಗಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತೂ ಹೆಚ್ಚು ಹಣ ನೀಡುತ್ತಿದ್ದರೂ ಯಂತ್ರಗಳು ರೈತರಿಗೆ ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಭತ್ತ ನೆಲಕ್ಕುರುಳಿರುವ ಹಿನ್ನೆಲೆಯಲ್ಲಿ ಯಂತ್ರ ಕಟಾವಿಗಾಗಿ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದು ರೈತನಿಗೆ ಇನ್ನಷ್ಟು ಭಾರವಾಗಿ ಪರಿಣಮಿಸಿದೆ.
ಅಪಾರ ನಷ್ಟ : ಕಟಾವಿಗೆ ಬಂದಿದ್ದ ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿದ ಹಿನ್ನೆಲೆ ಇಳುವರಿ ತೀವ್ರ ಕಡಿಮೆಯಾಗಿ ಅಪಾರ ನಷ್ಟವಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಪರಿಹಾರ ಕಲ್ಪಿಸಲು ಮಾಹಿತಿ ಸಂಗ್ರಹಿಸಬೇಕು. ಸರ್ಕಾರ ಪರಿಹಾರ ನೀಡಲು ಮುಂದಾಗಬೇಕು ಎಂದು ರೈತ ಶಿವಣ್ಣ ಗಬ್ಬೂರು ಆಗ್ರಹಿಸಿದ್ದಾರೆ.
ಪರಿಹಾರ ಕಲ್ಪಿಸಿ : ಜೀವನೋಪಾಯಕ್ಕೆ ಇದ್ದ ಆರು ಎಕರೆ ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿದೆ. ಎಲ್ಲ ರೈತರ ಮುಂದಿನ ಬದುಕು ಭತ್ತದ ಬೆಳೆಯನ್ನೇ ಅವಲಂಬಿಸಿದೆ. ರೈತರಿಗಾದ ನಷ್ಟಕ್ಕೆ ಶೀಘ್ರ ಪರಿಹಾರ ರೂಪದಲ್ಲಿ ದೊರೆಯಬೇಕು ಎಂದು ರೈತ ಭೂಕೈಲಾಸಪ್ಪ ದೇವರಮನಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.