ಕಟಪಾಡಿ: ಭತ್ತದ ಬೆಳೆಯು ಕಟಾವಿಗೆ ಸಿದ್ಧಗೊಂಡು ನಿಂತಂತಹ ಸಂದರ್ಭದಲ್ಲಿ ಈ ಬಾರಿ ಪ್ರಾಕೃತಿಕ ವಿಕೋಪದಿಂದಾದ ಸುರಿದ ಭಾರೀ ಮಳೆಯ ಕಾರಣದಿಂದ ಭತ್ತದ ಇಳುವರಿಯೂ ಕುಂಠಿತಗೊಂಡಿದ್ದು ಬೇಸಾಯದಲ್ಲಿ ಕೈ ಸುಟ್ಟುಕೊಳ್ಳುವಂತಾಗಿದೆ ಎಂದು ರೈತರು ಪರಿತಪಿಸುತ್ತಿದ್ದಾರೆ.
ಕೆಲವೆಡೆ ಬೆಳೆದು ನಿಂತ ಭತ್ತವು ಗದ್ದೆಗೆ ಉದುರಿದ್ದು, ಭತ್ತದ ಫಸಲು ಕಡಿಮೆಯಾಗಿ ರೈತರು ಕಂಗಾಲಾಗಿರುತ್ತಾರೆ.ಕಟಾವು ಪೂರೈಸಿದ ಬಳಿಕ ತಮ್ಮ ಜಾನುವಾರಗಳ ಮೇವಿಗೆ ಬೇಕಾದ ಬೈಹುಲ್ಲು ಕೂಡಾ ಗದ್ದೆಯಲ್ಲಿಯೇ ಕೊಳೆಯುವಂತಾಗಿದ್ದು, ಚಿಂತಾಕ್ರಾಂತರಾಗಿರುವ ರೈತರು ತಮ್ಮ ಕುಟುಂಬದ ಪೋಷಣೆಗೂ ಆಲೋಚಿಸಬೇಕಾದ ದುಸ್ಥಿತಿಯಲ್ಲಿದ್ದೇವೆ ಎಂದು ರೈತ ಮಣಿಪುರ ರಾಮೇರ್ ತೋಟದ ಹರೀಶ್ ಪರಿತಪಿಸುತ್ತಿದ್ದಾರೆ.
7 ಎಕರೆ ಪ್ರದೇಶದಲ್ಲಿ ಕೃಷಿ ಮಾಡಲಾಗುತ್ತಿದೆ. ಈ ಬಾರಿ 2 ಲಕ್ಷ ರೂ.ಗೂ ಅಕ ನಷ್ಟವಾಗಿದೆ. ಟ್ರ್ಯಾಕ್ಟರ್ ಸಾಲ ಕಟ್ಟಲೂ ಸಾಧ್ಯವಾಗುತ್ತಿಲ್ಲ. ಅಕಾಲಿಕ ಮಳೆಯಿಂದಾಗಿ ರೈತರ ಸಂಕಷ್ಟ ಹೇಳದಂತಾಗಿದೆ. ಪರಿಸ್ಥಿತಿ ಹಾಳಾಗಿದೆ ಎನ್ನುವ ಮಣಿಪುರದ ರೈತ ದಯಾನಂದ ಬಿ. ಸುವರ್ಣರು ಕಂಗಾಲಾಗಿದ್ದಾರೆ.
ಉಡುಪಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಕೆಂಪೇ ಗೌಡ ಪ್ರತಿಕ್ರಿಯಿಸಿದ್ದು, ಅವರು ಅಕಾಲಿಕ ಮಳೆಯಿಂದಾಗಿ ಕೃಷಿ ಬಾತವಾಗಿದ್ದು, ಸರಕಾರದ ಗಮನಕ್ಕೂ ಇದೆ. ಪ್ರತ್ಯೇಕವಾಗಿ ಸರಕಾರದ ಗಮನಕ್ಕೆ ವರದಿ ಸಲ್ಲಿಸುವ ಪ್ರಮೇಯ ಇಲ್ಲ. ಎನ್ ಡಿ ಆರ್ ಎಫ್ ಮಾನದಂಡದಂತೆ ಅರ್ಜಿ ಸಲ್ಲಿಸಿದ ರೈತರಿಗೆ ಸಹಾಯಧನವನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ
ಸರಕಾರ ಎಚ್ಚೆತ್ತು ದೇಶದ ಬೆನ್ನೆಲುಬಾದ ಈ ರೈತರಿಗೆ ಬೆನ್ನೆಲುಬಾಗಿ ನಿಂತು ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ಮುಂದಾಗುವಂತೆ ರೈತರು ಆಗ್ರಹಿಸುತ್ತಿದ್ದಾರೆ.