ಬೆಳಗಾವಿ: ರಾಜ್ಯದ ಕೆಲವು ಕಡೆ ಸುರಿದ ಅಕಾಲಿಕ ಮಳೆ ಬೆಳೆ ಹಾನಿಯ ಜತೆಗೆ ಸಂಕಷ್ಟದಲ್ಲಿರುವ ರೈತರಿಗೆ ಮತ್ತಷ್ಟು ಹಾನಿಯ ಬರೆ ನೀಡಿದೆ. ಸರ್ಕಾರದ ಪರಿಹಾರ ಮರೀಚಿಕೆಯಾಗಿದೆ. ಪರಿಹಾರ ಸಿಕ್ಕರೂ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಳೆ ಎಂದರೆ ಹೆದರಿಕೆ ತಪ್ಪಿದ್ದಲ್ಲ. ಕಳೆದ ಒಂದೆರಡು ವರ್ಷಗಳಿಂದ ಮಳೆಯಿಂದ ಉಂಟಾದ ಹಾನಿ ಇನ್ನೂ ರೈತರ ಮನಸ್ಸಿನಲ್ಲಿ ಹಸಿರಾಗಿಯೇ ಇದೆ. ವಿಪರೀತ ಮಳೆ ನಂತರ ನದಿಗಳ ಪ್ರವಾಹದಿಂದ ರೈತರು ನಷ್ಟದ ಮೇಲೆ ನಷ್ಟ ಅನುಭವಿಸಿದ್ದಾರೆ. ಹೀಗಾಗಿ ಮಳೆಗಾಲ ಎಂದರೆ ಸಾಕು ರೈತರಲ್ಲಿ ಆತಂಕ ಮೂಡುತ್ತದೆ. ಆದರೆ ಇದುವರೆಗೆ ಅಕಾಲಿಕ ಮಳೆಯಿಂದ ಯಾವುದೇ ಆತಂಕ ಅಥವಾ ಬೆಳೆ ಹಾನಿಯಾಗಿಲ್ಲ. ಇದು ರೈತರಿಗೆ ಸ್ವಲ್ಪ ನೆಮ್ಮದಿ ಉಂಟು ಮಾಡುವ ಸಂಗತಿ.
ಕಳೆದ ಅಕ್ಟೋಬರ್‌ದಲ್ಲಿ ಅಕಾಲಿಕ ಮಳೆಬಿದ್ದರೂ ಅದರಿಂದ ಹಾಹಾಕಾರ ಪಡುವಷ್ಟು ಬೆಳೆ ಹಾನಿಯಾಗಿಲ್ಲ. ಅದು ಒಂದೆರಡು ತಾಲೂಕುಗಳಿಗೆ ಮಾತ್ರ ಸೀಮಿತವಾಗಿತ್ತು. ಕೃಷಿ ಬೆಳೆಗಳ ಮೇಲೆ ಇದರಿಂದ ಯಾವುದೇ ಪರಿಣಾಮ ಉಂಟಾಗಿರಲಿಲ್ಲ. ಆದರೆ ತೋಟಗಾರಿಕೆ ಬೆಳೆಗಾರರು ಇದರಿಂದ ಸ್ವಲ್ಪ ನಷ್ಟ ಅನುಭವಿಸಿದ್ದರು. ಅಕ್ಟೋಬರ್‌ನಲ್ಲಿ ಜಿಲ್ಲೆಯಲ್ಲಿ ಬಿದ್ದ ಅಕಾಲಿಕ ಮಳೆಯಿಂದ ಆಗ ಒಟ್ಟಾರೆ 194 ರೈತರ 107 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ತೋಟಗಾರಿಕೆ ಬೆಳೆ ಹಾನಿಯಾಗಿತ್ತು. ಅದರಲ್ಲಿ ಬಹುಪಾಲು ಬೆಳೆ ಹಾನಿಯಾಗಿದ್ದು ಸವದತ್ತಿ ತಾಲೂಕಿನಲ್ಲಿ ಎಂಬುದು ಗಮನಾರ್ಹ. ಜಿಲ್ಲೆಯ ಒಟ್ಟು 107 ಹೆಕ್ಟೇರ್ ಪ್ರದೇಶದ ಪೈಕಿ ಸವದತ್ತಿ ತಾಲೂಕು ಒಂದರಲ್ಲೇ 105 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿತ್ತು. ಸಮೀಕ್ಷೆ ಪ್ರಕಾರ ಸುಮಾರು 3.25 ಕೋಟಿ ಮೌಲ್ಯದ ಬೆಳೆ ಹಾನಿಯಾಗಿದ್ದರೂ ಎನ್‌ಡಿಆರ್ ಎಫ್ ನಿಯಮಾವಳಿಯಂತೆ 11 ಲಕ್ಷ ರೂ. ಪರಿಹಾರ ಮಾತ್ರ ರೈತರಿಗೆ ದೊರೆಯಲಿದೆ. ಹಾಗೆ ನೋಡಿದರೆ ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯು ಮಳೆಯ ಕೊರತೆ ಎದುರಿಸುತ್ತಿದೆ.
ಪ್ರತಿಶತ 14ರಷ್ಟು ಮಳೆಯ ಕೊರತೆ ಉಂಟಾಗಿದೆ. ಈ ಹಂಗಾಮಿನಲ್ಲಿ ಇದುವರೆಗೆ ಶೇ.80ರಷ್ಟು ಬಿತ್ತನೆಯಾಗಿದೆ. ಈಗ ಕಡಲೆ, ಜೋಳ ಮೊದಲಾದ ಹಿಂಗಾರು ಬೆಳೆಗಳಿಗೆ ನೀರು ಬೇಕು. ಇನ್ನು 10 ದಿನಗಳ ಕಾಲ ಸಮಸ್ಯೆ ಇಲ್ಲ. 10 ದಿನಗಳ ನಂತರವೂ ಮಳೆ ಬಾರದೇ ಇದ್ದರೆ ಬೆಳೆಗಳಿಗೆ ಸಮಸ್ಯೆಯಾಗಲಿದೆ ಎನ್ನುತ್ತಾರೆ ಕೃಷಿ ಇಲಾಖೆ ಅದಿಕಾರಿಗಳು. ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 3.14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು ಇದುವರೆಗೆ 2.51 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿ ಪ್ರತಿಶತ 80ರಷ್ಟು ಪ್ರಗತಿ ಸಾಧಿಸಲಾಗಿದೆ. ಇದರಲ್ಲಿ ಮುಖ್ಯವಾಗಿ 1.06 ಲಕ್ಷ ಹೆಕ್ಟೇರ್ ಪೈಕಿ 98 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ, 1,11 ಲಕ್ಷ ಹೆಕ್ಟೇರ್ ಪ್ರದೇಶದ ಪೈಕಿ 95 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಹಾಗೂ 40 ಸಾವಿರ ಹೆಕ್ಟೇರ್ ಪ್ರದೇಶದ ಗುರಿಯಲ್ಲಿ 31 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗೋಧಿ ಬಿತ್ತನೆ ಮಾಡಲಾಗಿದೆ. 2300 ಹೆಕ್ಟೇರ್ ಪ್ರದೇಶದ ಪೈಕಿ 350 ಹೆಕ್ಟೇರ್ ಪ್ರದೇಶದಲ್ಲಿ ಕುಸುಬಿ ಬಿತ್ತನೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಎಲ್ಲಿಯೂ ಅಕಾಲಿಕ ಮಳೆಯಿಂದ ಬೆಳೆ ಹಾನಿಯಾಗಿಲ್ಲ. ಬದಲಾಗಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಹಿಂಗಾರು ಹಂಗಾಮಿನಲ್ಲಿ ಮಳೆಯ ಕೊರತೆ ಎದುರಾಗಿದೆ. ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಹಿಂಗಾರಿನ ಪ್ರಮುಖ ಬೆಳೆಗಳಾದ ಕಡಲೆ, ಜೋಳ ಮತ್ತು ಗೋಧಿಗೆ ಈಗ ಮಳೆಯ ಅಗತ್ಯತೆ ಇದೆ.
– ಶಿವನಗೌಡ ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಬೆಳಗಾವಿ ತೋಟಗಾರಿಕೆ ಬೆಳೆಗಳಿಗೆ ಅಕಾಲಿಕ ಮಳೆಯ ಪರಿಣಾಮ ಈಗ ಆಗಿಲ್ಲ.
ಅಕ್ಟೋಬರ್‌ದಲ್ಲಿ ಮಾತ್ರ ಅಕಾಲಿಕ ಮಳೆಯಿಂದ ಅತ್ಯಲ್ಪ ಪ್ರಮಾಣದಲ್ಲಿ ಬಾಳೆ, ಟೊಮ್ಯಾಟೊ, ಈರುಳ್ಳಿ, ಕ್ಯಾರೆಟ್ ಮತ್ತು ಮೆಣಸಿಕಾಯಿ ಬೆಳೆಗಳಿಗೆ ಹಾನಿಯಾಗಿತ್ತು. ಕಂದಾಯ ಇಲಾಖೆ ಮೂಲಕ ಬೆಳೆ ಹಾನಿ ಸಮೀಕ್ಷೆ ಮಾಡಲಾಗಿದೆ. ಎನ್‌ಡಿಆರ್‌ಎಫ್ ಪ್ರಕಾರ 194 ರೈತರಿಗೆ ಬೆಳೆ ಹಾನಿ ಪರಿಹಾರ ನೀಡಲು ಕ್ರಮ ವಹಿಸಲಾಗಿದೆ. –
ಮಹಾಂತೇಶ ಮುರಗೋಡ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಬೆಳಗಾವಿ ಇದುವರೆಗೆ ಮಳೆಯಿಂದ ರೈತರಿಗೆ ತೊಂದರೆಯಾಗಿಲ್ಲ. ಜುಲೈ ಹಾಗೂ ಆಗಸ್ಟ್ ಅವಧಿಯಲ್ಲಿ ಆದಂತೆ ವಿಪರೀತ ಮಳೆ ಈಗ ಎಲ್ಲಿಯೂ ಆಗಿಲ್ಲ. ಆದರೆ ಕಳೆದ ತಿಂಗಳು ಬಿದ್ದ ಮಳೆಯಿಂದ ಕೊಯ್ಲು ಮಾಡಿದ್ದ ಸೋಯಾಬಿನ್ ಸ್ವಲ್ಪ ಪ್ರಮಾಣದಲ್ಲಿ ಹಾನಿಗೊಳಗಾಯಿತು. ಅದನ್ನು ಬಿಟ್ಟರೆ ಜಿಲ್ಲೆಯಲ್ಲಿ ಎಲ್ಲಿಯೂ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾಗಿಲ್ಲ. ಇದರ ಮಧ್ಯೆ ಈ ಹಿಂದೆ ಆಗಿರುವ ಬೆಳೆ ಹಾನಿಗೆ ಸಮರ್ಪಕವಾದ ಪರಿಹಾರ ಸಿಕ್ಕಿಲ್ಲ. ಇದರಿಂದ ರೈತರು ಸಮಸ್ಯೆಯಲ್ಲಿದ್ದಾರೆ.
ಸಿದಗೌಡ ಮೋದಗಿ, ರೈತ ಮುಖಂಡ, ಬೆಳಗಾವಿ
-ಕೇಶವ ಆದಿ