ನರಗುಂದ: ಕಳೆದ ವರ್ಷ ಇತಿಹಾಸದಲ್ಲೇ ಮೊದಲ ಬಾರಿಗೆ ಉಕ್ಕಿ ಹರಿದ ಮಲಪ್ರಭಾ ನದಿ ಪ್ರವಾಹದಿಂದ ತಿಂಗಳುಗಟ್ಟಲೇ ರಸ್ತೆ ಬದಿ ಟೆಂಟ್ ಹಾಕಿ ಕೊಂಡು ಬದುಕಿದ ಈ ಗ್ರಾಮದ ಸಂತ್ರಸ್ತರ ಬದುಕು ವರ್ಷ ಗತಿಸುವ ಮುನ್ನ ಮತ್ತೇ ಬೀದಿಗೆ ಬಂದು ನಿಂತಿದೆ!
ಇದು ತಾಲೂಕಿನ ಗಡಿಗ್ರಾಮ ಹಾಗೂ ಮಲಪ್ರಭಾ ಪ್ರವಾಹಕ್ಕೆ ಮೊದಲು ತುತ್ತಾಗುವ ಲಕಮಾಪೂರ ಗ್ರಾಮದ ಜನರ ದುಸ್ಥಿತಿ. ನವಿಲುತೀರ್ಥ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ರವಿವಾರ 17 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಮಲಪ್ರಭೆಗೆ ಹರಿಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಲಕಮಾಪೂರ ಗ್ರಾಮಸ್ಥರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಊರು ಬಿಡುತ್ತಿರುವ ಜನ: ಸುಮಾರು 120 ಕುಟುಂಬಗಳಿರುವ ಈ ಗ್ರಾಮ ಮಲಪ್ರಭಾ ನದಿ ಪ್ರವಾಹಕ್ಕೆ ಅಕ್ಷರಶಃ ನಡುಗಡ್ಡೆಯಾಗಿ ಪರಿವರ್ತನೆಗೊಳ್ಳುತ್ತದೆ. ಈ ಗ್ರಾಮಕ್ಕೆ ಇರುವುದೊಂದೇ ಮುಖ್ಯರಸ್ತೆ. ನದಿ ನೀರು ಗ್ರಾಮ ಸುತ್ತುವರಿದ ಬಳಿಕ ಮುಖ್ಯ ರಸ್ತೆಗೆ ಹರಿಯುತ್ತಿದ್ದರೆ ಗ್ರಾಮಕ್ಕೆ ಸಂಪರ್ಕ ಕಡಿತಗೊಳ್ಳುತ್ತದೆ. ಇದು ಮಲಪ್ರಭಾ ನದಿ ಯಿಂದ ಈ ಗ್ರಾಮಕ್ಕಿರುವ ಬಹುದೊಡ್ಡ ಆಪತ್ತು. ನದಿ ನೀರು ಈಗಾಗಲೇ ಗ್ರಾಮವನ್ನು ಸುತ್ತುವರಿದಿದೆ. ಬೆಳಗ್ಗೆಯೇ ಹೆಚ್ಚುವರಿ ನೀರು ಬರಬಹುದು ಎಂಬ ತಾಲೂಕು ಅಧಿಕಾರಿಗಳ ಮುನ್ನೆಚ್ಚರಿಕೆಯಿಂದ ಸಂಜೆ ಹೊತ್ತಿಗೆ ಬಹಳಷ್ಟು ಜನರು ಸಾಮಾನು ಸರಂಜಾಮುಗಳೊಂದಿಗೆ ಗ್ರಾಮದಿಂದ 3 ಕಿ.ಮೀ. ದೂರದ ರಾಮದುರ್ಗ ರಸ್ತೆ ಕ್ರಾಸ್‌ಗೆ ಸ್ಥಳಾಂತರ ಆಗುತ್ತಿದ್ದಾರೆ.
ಚಕ್ಕಡಿ, ಟ್ರ್ಯಾಕ್ಟರ್‌ಗಳಲ್ಲಿ ಸಾಮಾನುಗಳನ್ನು ಹೇರಿಕೊಂಡು ಜಾನುವಾರು ಗಳೊಂದಿಗೆ ಕಾಲ್ನಡಿಗೆಯಲ್ಲಿ ಕ್ರಾಸ್‌ಗೆ ಬರುತ್ತಿದ್ದ ಜನರ ಗೋಳು ಹೇಳತೀರದು. ಒಟ್ಟಾರೆ ಒಂದು ವರ್ಷ ಗತಿಸುವ ಮುನ್ನವೇ ಮತ್ತೂಮ್ಮೆ ಪ್ರವಾಹ ಭೀತಿಯಿಂದ ಲಖಮಾಪೂರ ಜನರ ಬದುಕು ಬೀದಿಗೆ ಬಂದಿದೆ.
ಮಲಪ್ರಭಾ ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದೆ. ನದಿ ಪಾತ್ರದ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವ ಮೂಲಕ ಯಾವುದೇ ಅಪಾಯ ಆಗದಂತೆ ಗಮನ ಹರಿಸಬೇಕು. ಜಲಾಶಯದಲ್ಲಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗುವ ಸಂಭವವಿದ್ದು, ಯಾವುದೇ ಸಮಯದಲ್ಲಿ ಮತ್ತಷ್ಟು ನೀರು ಬಿಡುವ ಸಾಧ್ಯತೆಗಳಿವೆ. ಸುರಕ್ಷಿತ ಸ್ಥಳಕ್ಕೆ ತೆರಳುವ ಮೂಲಕ ಅಧಿಕಾರಿಗಳೊಂದಿಗೆ ಸಹಕರಿಸಬೇಕು.
-ಸಿ.ಸಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ
ಲಖಮಾಪೂರ ಜನರ ಸ್ಥಳಾಂತರಕ್ಕೆ ಬೆಳ್ಳೇರಿ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಗ್ರಾಮಸ್ಥರು ರಾಮದುರ್ಗ ರಸ್ತೆ ಕ್ರಾಸ್‌ಗೆ ಬಂದಿದ್ದಾರೆ. ಅಲ್ಲಿಯೇ 50 ತಾತ್ಕಾಲಿಕ ಶೆಡ್ ನಿರ್ಮಿಸಲಾಗುತ್ತಿದೆ. ಸಂತ್ರಸ್ತರಿಗೆ ಬಿಸಿಯೂಟ ಸಿಬ್ಬಂದಿಯಿಂದ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಬಹುತೇಕ ಗ್ರಾಮಸ್ಥರು ಸ್ಥಳಾಂತರ ಆಗಿದ್ದಾರೆ.
-ಎ.ಎಚ್. ಮಹೇಂದ್ರ, ನರಗುಂದ ತಹಶೀಲ್ದಾರ್
-ಸಿದ್ಧಲಿಂಗಯ್ಯ ಮಣ್ಣೂರಮಠ