Advertisement

ಬಿಸಿಲ ತಾಪ ಇಳಿಸಿದ ಮಳೆ

12:58 AM May 18, 2019 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಪಮಾನದಲ್ಲಿ 11 ಡಿಗ್ರಿ ಸೆಲ್ಸಿಯಸ್‌ ಇಳಿಕೆಯಾಗಿದೆ. ಜತೆಗೆ ಶುಕ್ರವಾರ ಆಲಿಕಲ್ಲು ಸಹಿತ ಸುರಿದ ಧಾರಾಕಾರ ಮಳೆಗೆ 20ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ಕೆಲ ವಾಹನಗಳು ಜಖಂಗೊಂಡಿವೆ.

Advertisement

ಕಳೆದ ಕೆಲ ದಿನಗಳಿಂದ ನಗರದ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್‌ ದಾಟಿತ್ತು. ಪರಿಣಾಮ ತೀವ್ರ ಸೆಕೆಯ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಮೂರ್‍ನಾಲ್ಕು ದಿನಗಳಿಂದ ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಪಮಾನದಲ್ಲಿ ಭಾರೀ ಬದಲಾವಣೆಯಾಗಿದ್ದು, ಶುಕ್ರವಾರ ನಗರದಲ್ಲಿ ತಾಪಮಾನ 22 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಇದರೊಂದಿಗೆ ನಗರದ ಪೂರ್ವ ಭಾಗದ ಬಹುತೇಕ ಕಡೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ಮಹದೇವಪುರ, ಜಯನಗರ, ಜೆ.ಪಿ.ನಗರ ಸೇರಿದಂತೆ ಪ್ರಮುಖ ಭಾಗಗಳಲ್ಲಿ 20ಕ್ಕೂ ಹೆಚ್ಚು ಮರ ಹಾಗೂ ಮರದ ಕೊಂಬೆಗಳು ಉರುಳಿವೆ. ಜಯನಗರ ಮೆಟ್ರೋ ನಿಲ್ದಾಣದ ಬಳಿ ಉರುಳಿದ ಭಾರಿ ಗಾತ್ರದ ಮರದ ಕೊಂಬೆಗಳು ಕಾರಿನ ಮೇಲೆ ಉರುಳಿದ ಪರಿಣಾಮ ಕಾರು ಜಖಂಗೊಂಡಿದೆ.

ಶುಕ್ರವಾರ ಮಧ್ಯಾಹ್ನ ಆರಂಭವಾದ ಧಾರಾಕಾರ ಮಳೆ ರಾತ್ರಿಯವರೆಗೆ ಸುರಿದ ಪರಿಣಾಮ ಕೆಲವೆಡೆ ರಸ್ತೆಗಳಲ್ಲಿ ನೀರು ನಿಂತು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು. ಮರಗಳು ರಸ್ತೆಗೆ ಉರುಳಿದ ಪರಿಣಾಮ ತೀವ್ರ ಸಂಚಾರ ದಟ್ಟಣೆ ಉಂಟಾಗಿ ಮಳೆಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ವಾಹನ ಸವಾರರು ಎದುರಿಸಿದರು.

ನಿರಂತರವಾಗಿ ಸುರಿದ ಮಳೆಯಿಂದಾಗಿ ಟ್ರಿನಿಟಿ ವೃತ್ತ, ಇಂದಿರಾನಗರ 80 ಅಡಿ ರಸ್ತೆ, ಕೆ.ಆರ್‌.ವೃತ್ತ, ಲಿ ಮೆರಿಡಿಯನ್‌, ಸ್ಯಾಂಕಿ ರಸ್ತೆ, ಹಳೆ ಮದ್ರಾಸ್‌ ರಸ್ತೆ, ಕಾರ್ಪೊರೇಷನ್‌ ವೃತ್ತ ಸೇರಿದಂತೆ ನಗರದ ಪ್ರಮುಖ ಜಂಕ್ಷನ್‌ಗಳು ಹಾಗೂ ರಸ್ತೆಗಳಲ್ಲಿ ನೀರು ಹರಿದ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆಯಾಯಿತು.

Advertisement

ಜೋರಾದ ಗಾಳಿಯೊಂದಿಗೆ ಸುರಿದ ಮಳೆಗೆ 20ಕ್ಕೂ ಹೆಚ್ಚು ಮರ ಹಾಗೂ ಮರದ ಕೊಂಬೆಗಳು ಧರೆಗುರುಳಿದರಿಂದ ಹಲವೆಡೆಗಳಲ್ಲಿ ದಟ್ಟಣೆ ಸಮಸ್ಯೆ ಉಂಟಾಗಿತ್ತು. ನಿಮ್ಹಾನ್ಸ್‌, ಜಯನಗರ, ಜೆ.ಪಿ.ನಗರ, ಸಂಪಿಗೆ ರಸ್ತೆಯಲ್ಲಿ ತಲಾ 1 ಮರ ಉರುಳಿದ್ದು, ಜೆಎಸ್‌ಎಸ್‌ ವೃತ್ತದಲ್ಲಿ ಬೃಹದಾಕಾರದ 2 ಮರಗಳು ಧರೆಗುರುಳಿವೆ.

ಉಳಿದಂತೆ ಮಹದೇವಪುರ ವಲಯದಲ್ಲಿ 6 ಬೃಹತ್‌ ಗಾತ್ರದ ಮರಗಳು ಹಾಗೂ 8 ಕಡೆಗಳಲ್ಲಿ ರೆಂಬೆ, ಕೊಂಬೆಗಳು ಉರುಳಿವೆ. ಪರಿಣಾಮ ಪ್ರಮುಖ ರಸ್ತೆಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿ ಜನರು ಸಮಸ್ಯೆ ಎದುರಾಗಿದ್ದು, ಪಾಲಿಕೆಯ ಅರಣ್ಯ ಘಟಕದ ಸಿಬ್ಬಂದಿ ಅವುಗಳನ್ನು ತೆರವುಗೊಳಿಸಿದ್ದಾರೆ.

ಆಲಿಕಲ್ಲು ತಂದ ಖುಷಿ: ನಗರದ ಪೂರ್ವ ಭಾಗದ ಮಹದೇವಪುರ, ಯಲಹಂಕ, ಹೆಬ್ಟಾಳ, ಕೆ.ಆರ್‌.ಪುರ ಸೇರಿದಂತೆ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ಬಹುದಿನಗಳ ಬಳಿಕ ಆಲಿಕಲ್ಲು ಕಂಡ ಜನ ಅವುಗಳನ್ನು ಹಿಡಿದು ಖುಷಿ ಪಟ್ಟರು. ಇನ್ನು ಕೆಲವರು ಆಲಿಕಲ್ಲು ಹಿಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿ ಸಂತಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next