ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ನಿರ್ಮಾಣ ಹಂತದ ಮನೆಯ ಕಾಂಪೌಂಡ್ ಕುಸಿದು ಬಿದ್ದಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಸಮೀಪದ ಮೇಗೂರು ಗ್ರಾಮದಲ್ಲಿ ನಡೆದಿದೆ. ಮೇಗೂರು ಗ್ರಾಮದ ಸುನೀಲ್ ಎಂಬುವರ ಮನೆಯ ಕಾಂಪೌಂಡ್ ಕುಸಿದು ಬಿದ್ದಿದೆ.
ಜಾವಳಿ, ಮೇಗೂರು, ಬಾಳೂರು ಭಾಗದಲ್ಲಿ ಕಳೆದ ಎರಡ್ಮೂರು ವರ್ಷದಿಂದ ಭಾರೀ ಮಳೆ ಸುರಿಯುತ್ತಿದೆ. 2019ರಲ್ಲಿ ಜಾವಳಿ ಸಮೀಪದ ಮಲೆಮನೆ ಗ್ರಾಮದಲ್ಲಿ ಗುಡ್ಡ ಕುಸಿದು 6 ಮನೆಗಳು ನೆಲಸಮವಾಗಿದ್ದವು. ಮೇಗೂರು ಗ್ರಾಮದಲ್ಲೂ ಮನೆಗಳು ಕುಸಿದು ಬಿದ್ದಿದ್ದವು. ಗುಡ್ಡ ಕುಸಿದು ಸೇತುವೆ ಕಟ್ ಆಗಿತ್ತು. ಜನ ನಿರಾಶ್ರಿತ ಕೇಂದ್ರಗಳಿಗೆ ಬಂದು ಜೀವ ಉಳಿಸಿಕೊಂಡಿದ್ದರು. ಸರ್ಕಾರದ ಸಿಕ್ಕ ಪರಿಹಾರ ಸರ್ಕಾರ ಹೇಳಿದ್ದಕ್ಕಿಂತ ಅರ್ಧಕ್ಕರ್ಧ ಕಡಿಮೆ.
ಇದನ್ನೂ ಓದಿ:- ಮಲೆನಾಡಲ್ಲಿ ಮಳೆ ಅಬ್ಬರ ಕೊಚ್ಚಿ ಹೋದ ಕಾಫಿ ತೋಟ
ಜನ ಹೊಟ್ಟೆ ಬಟ್ಟೆ ಕಟ್ಟಿ ಕೂಡಿಟ್ಟಿದ್ದ ಸಂಪತ್ತು ಮಳೆ ನೀರಲ್ಲಿ ಕೊಚ್ಚಿ ಹೋಗಿತ್ತು. ಇದೀಗ ಸಾಲಸೋಲ ಮಾಡಿ ಒಂದೇ ಜೀವಿತಾವಧಿಯ ಎರಡನೇ ಬದುಕಿಗೂ ಮಳೆರಾಯ ಮುಳ್ಳಾಗುತ್ತಿದ್ದಾನೆ. ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಅಕಾಲಿಕ ಮಳೆಗೆ ಮಲೆನಾಡಿಗರು ಭವಿಷ್ಯದ ಬಗ್ಗೆ ಆತಂಕಕ್ಕೀಡಾಗಿದ್ದಾರೆ.
ಮಲೆನಾಡಲ್ಲಿ ಬೀಸ್ತಿರೋ ಗಾಳಿ, ಸುರಿಯುತ್ತಿರೋ ಮಳೆ ನಾಳೆಯ ಆಸೆಯನ್ನೇ ಕಿತ್ತುಕೊಳ್ಳುವಂತಿದೆ. ಕಳೆದ ಮಳೆಗಾಲದಲ್ಲಿ ಮನೆ ಕಳೆದುಕೊಂಡವರು ಮನೆ ನಿರ್ಮಿಸುತ್ತಿದ್ದು ಮತ್ತೆ ಆತಂಕಕ್ಕೀಡಾಗಿದ್ದಾರೆ. ಅತ್ತ ಬದುಕಿಗೂ ಸಂಕಷ್ಟ ತಂದ ಮಳೆರಾಯನಿಂದ ಇತ್ತ ಬದುಕಿನ ಆಧಾರ ಸ್ತಂಭ ಕಾಫಿಯನ್ನೂ ಕಳೆದುಕೊಳ್ಳುವ ಆತಂಕ ಮಲೆನಾಡಿಗರದ್ದಾಗಿದೆ. ಕಾಫಿ ಕಾಯಾಗುವ ಸಮಯವಿದು.
ಕೆಲ ಭಾಗ ಈಗಾಗಲೇ ಹಣ್ಣು ಆಗಿದೆ. ಆದರೆ, ಈಗ ಈ ರೀತಿ ಹುಚ್ವು ಮಳೆ ಸುರಿಯುತ್ತಿರುವುದು ಬೆಳೆಗಾರರು ಅದರಲ್ಲೂ ಸಣ್ಣ ಬೆಳೆಗಾರರು ಕಂಗಾಲಾಗಿದ್ದಾರೆ. ಸರ್ಕಾರದಿಂದ ಸಮರ್ಪಕ ಪರಿಹಾರವೂ ಸಿಗಲ್ಲ. ಮಳೆ ನೋಡಿದರೆ ಈಗೆ ಸುರಿಯುತ್ತಿದೆ ನಾವು ಮುಂದೆ ಬದುಕೋದೇಗೆಂದು ಮಲೆನಾಡಿಗರು ಚಿಂತಾಕ್ರಾಂತರಾಗಿದ್ದಾರೆ.