Advertisement

ಹನುಮ ಜಯಂತಿಗೆ ಅಡ್ಡಿಯಾಗದ ಮಳೆ

03:05 PM Dec 02, 2017 | |

ಬೆಂಗಳೂರು: ಹನುಮ ಜಯಂತಿ ಪ್ರಯುಕ್ತ, ನಗರದ ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ, ಜಯನಗರದ ರಾಗಿ ಗುಡ್ಡದ ಪ್ರಸನ್ನ ಆಂಜನೇಯ, ಮಹಾಲಕ್ಷ್ಮಿ ಲೇಔಟ್‌ನ ವೀರಾಂಜನೇಯ ಸ್ವಾಮಿ ದೇವಾಲಯ ಹಾಗೂ ರಾಜಾಜಿನಗರದ ರಾಮಮಂದಿರ ಸೇರಿ ಎಲ್ಲ ಆಂಜನೇಯ ಸ್ವಾಮಿ ದೇವಾಲಯಗಳು ಶುಕ್ರವಾರ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾದವು.

Advertisement

ಜಿಟಿ, ಜಿಟಿ ಮಳೆಯ ನಡುವೆಯೂ ಬೆಳಗ್ಗೆಯಿಂದ ಸಂಜೆಯವರೆಗೂ ವಿವಿಧ ರೀತಿಯ ಪೂಜಾ ಕಾರ್ಯಕ್ರಗಳು ನಡೆದವು. ಮುಂಜಾನೆ ವೀರಾಂಜನೆಯನಿಗೆ ವಿಶೇಷ ಅಭಿಷೇಕ, ಶಾಖಾಂಬರಿ, ವೇದಪರಾಯಣ, ಹೋಮ-ಹವನ ಸೇರಿದಂತೆ ಹಲವು ದೈವಿಕ ಕಾರ್ಯಕ್ರಮಗಳು ಭಕ್ತರ ಚಿತ್ತಾಕರ್ಷಿಸಿದವು. ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಹಲವು ಸಂಖ್ಯೆಯಲ್ಲಿ ಆಂಜನೇಯ ಭಕ್ತರು ಪಾಲ್ಗೊಂಡಿದ್ದರು.

ವಿಜಯನಗರದ ಇತಿಹಾಸ ಪ್ರಸಿದ್ಧ ಮಾರುತಿ ದೇವಾಲಯದಲ್ಲೂ ಕೂಡ ಹನುಮ ಜಯಂತಿ ಪ್ರಯುಕ್ತ ವಿಶೇಷ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿತ್ತು. ಬೆಳಗ್ಗೆ 5 ಗಂಟೆಗೆ ಹನುಮಾಭಿಷೇಕ, ಶಾಖಾಂಬರಿ ಅಲಂಕಾರ, ಮಹಾ ಮಂಗಳಾರತಿ ಸೇರಿದಂತೆ ಹಲವು ಪೂಜಾ ಕಾರ್ಯಕ್ರಮಗಳು ನಡೆದವು. ಸರದಿ ಸಾಲಿನಲ್ಲಿ ನಿಂತು ಭಕ್ತರು ಆಂಜನೇಯನ ದರ್ಶನ ಪಡೆದುದರು. ಸಂಜೆ ದೇವರ ನಾಮ ಮತ್ತು ಹರಿದಾಸರ ಕೀರ್ತನೆಗಳು ಕೂಡ ಜರುಗಿದವು.

ನವಕಳಶ ಸ್ಥಾಪನೆ: ಶಿವಾಜಿ ನಗರದ ಬಸ್‌ ನಿಲ್ದಾಣದ ಎದಿರುವ ರಾಮಾಂಜನೇಯ ದೇವಾಲಯದಲ್ಲೂ ವಿಶೇಷ ಪೂಜೆ ನಡೆದವು. ನೆರೆದಿದ್ದ ಹಲವು ಭಕ್ತರ ಸಮ್ಮುಖದಲ್ಲಿ ಬೆಳಗ್ಗೆ 7.15ಕ್ಕೆ ಸುಪ್ರಭಾತ, ವೇದಪಾರಾಯಣ, ಪಂಚಾಮೃತ ಅಭಿಷೇಕ, ನವಕಳಸ ಸ್ಥಾಪನೆ, ತೋಮಾಲೆ ಸೇವೆ ಸೇರಿದಂತೆ ಹಲವು ಪೂಜಾ ಕಾರ್ಯಕ್ರಮಗಳು ಸಂಗೋಪವಾಗಿ ನಡೆದವು.

ಸಂಜೆ ಕಳಶಾರಾಧನೆ, ಲಕ್ಷಾರ್ಚನೆ, ಮಹಾಮಂಗಳಾರತಿ ಕಾರ್ಯಕ್ರಮಗಳನ್ನು ತೀರ್ಥ ಪ್ರಸಾದ ವಿನಿಯೋಗ ಕೂಡ ನಡೆಯಿತು. ಜಯ ನಗರದ 9ನೇ ಬಡಾವಣೆಯಲ್ಲಿರುವ ರಾಗಿಗುಡ್ಡ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಜ್ರಕವಚ ಧಾರಣೆ ಅಲಂಕಾರ ಭಕ್ತರ ಮನಸೆಳೆಯಿತು.

Advertisement

ಹೆಜ್ಜೆಗೊಂದು ಎಳನೀರು ಸೇವೆ: ಬನ್ನೇರು ಘಟ್ಟದ ಅರಕೆರೆ ವೀರಾಂಜನೇಯ ಸ್ವಾಮಿ ದೇವಸ್ಥಾನ ಮಂಡಳಿ 9ನೇ ವರ್ಷದ ಅಂಗವಾಗಿ ಹಮ್ಮಿಕೊಂಡಿದ್ದ ವೀರಾಂಜನೇಯ ಸ್ವಾಮಿ ರಥೋತ್ಸವ ನೆರದ ಭಕ್ತರ ಚಿತ್ತಾಕರ್ಷಿಸಿತು. ಗ್ರಾಮದ ರಾಜಬೀದಿಯಲ್ಲಿ ಸಾಗಿದ ರಥೋತ್ಸವದಲ್ಲಿ ಹೆಜ್ಜೆಗೊಂದು ಎಳನೀರು ಸೇವೆ ಕೂಡ ನಡೆಯಿತು.

ಯಲಹಂಕದ ಬಾಲಾಂಜನೇಯ ಸ್ವಾಮಿ ದೇವಸ್ಥಾನ, ಯಶವಂತಪುರದ ದಾರೀ ಆಂಜನೇಯ ಸ್ವಾಮಿ ದೇವಾಲಯ, ಪದ್ಮನಾಭ ನಗರದ  ವರಪ್ರದ ಆಂಜನೇಯ ದೇವಸ್ಥಾನ, ಗಾಂಧೀ ನಗರದ ಓಣಿ ಆಂಜನೇಯ ಸ್ವಾಮಿ ದೇವಾಲಯ ಸೇರಿದಂತೆ ಹಲವು ದೇವಾಲಯಗಳಲ್ಲಿ ಹನುಮ ಜಯಂತಿ ಪ್ರಯುಕ್ತ ಹಲವು ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಲಕ್ಷ ಬತ್ತಿಗಳ ದೀಪೋತ್ಸವ: ಗಾಂಧಿನಗರದ ಓಣಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ವಿಶೇಷ ಅಂಲಕಾರ, ಮುತ್ತಿನ ಕವಚ ಧಾರಣೆ, ಸಂಜೆ ಹೂವಿನ ಅಲಂಕಾರ ಮತ್ತು ಲಕ್ಷ ಬತ್ತಿಗಳಿಂದ ದೀಪೋತ್ಸವ ಕೂಡ ನಡೆಯಿತು. ಪದ್ಮನಾಭ ನಗರದ ಆಂಜನೇಯಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ಗಣಪತಿ ಪೂಜೆ, ಕಲಶಸ್ಥಾಪನೆ, ಪಂಚಾಮೃತ ಅಭಿಷೇಕ, ಅನ್ನ ಸಂತರ್ಪಣೆ ಸೇರಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು. 

ಶಿವಾಜಿನಗರದ ತಿಮ್ಮಯ್ಯ ರಸ್ತೆ ಕ್ರಾಸ್‌ನ ಶ್ರೀ ವೀರ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ಹೋಮ, ಅಭಿಷೇಕ ಹಾಗೂ ವಿಶೇಷ ಅಲಂಕಾರವಿತ್ತು. ಶಿವಾಜಿನಗರ, ಫ್ರೆàಜರ್‌ಟೌನ್‌, ಭಾರತಿನಗರ, ಸರ್ವಜ್ಞನಗರ ಸೇರಿದಂತೆ ನಗರದ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಹೋಮದಲ್ಲಿ ಪಾಲ್ಗೊಂಡು ಸೀತಾರಾಮ ಸಮೇತ ವೀರಾಂಜನೇಯ ಸ್ವಾಮಿಯ ದರ್ಶನ ಪಡೆದರು.

ಮಧ್ಯಾಹ್ನ ಅನ್ನದಾನ ಆಯೋಜಿಸಲಾಗಿತ್ತು. ಸಂಜೆ ದೇವರ ಉತ್ಸವ ವಿಜೃಂಭಣೆಯಿಂದ ನಡೆಯಿತು. ಹನುಮ ಜಯಂತಿಯ ಪ್ರಯುಕ್ತ ಎಲ್ಲಾ ದೇವಾಲಯಗಳಲ್ಲಿ ಭಕ್ತರ ಸುಗಮ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಂಜೆ ವೇಳೆ ಸಂಗೀತ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next