Advertisement

ವರುಣನ ಕೋಪಕ್ಕೆ ತುತ್ತಾಗಿದ್ದ ರಸ್ತೆ ಅಭಿವೃದ್ಧಿಯ ಕಡೆಗೆ 

11:53 AM Sep 08, 2018 | Team Udayavani |

ಸುಬ್ರಹ್ಮಣ್ಯ : ಬಿಸಿಲೆ ಘಾಟಿ ಭಾಗದಲ್ಲಿ ಇತ್ತೀಚೆಗೆ ಭಾರೀ ಮಳೆಯಾದ ಪರಿಣಾಮ ರಸ್ತೆಯೇ ಕೊಚ್ಚಿ ಹೋಗಿತ್ತು. ಪರಿಣಾಮ ಜನಸಂಪರ್ಕ ಹಾಗೂ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದೀಗ ಮಾರ್ಗದ ಮರುಜೋಡಣೆ ಕಾರ್ಯ ಭರದಿಂದ ಸಾಗುತ್ತಿದ್ದು, ಶೇ. 70ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

Advertisement

ದ.ಕ. ಜಿಲ್ಲಾ ವ್ಯಾಪ್ತಿಗೆ ಸೇರಿದ ಕುಲ್ಕುಂದದಿಂದ ಶ್ರೀ ದೇವಿಗುಡಿ ತನಕ ಮಾರ್ಗ ಈಗ ಸಂಪೂರ್ಣ ಸಂಚಾರಕ್ಕೆ ಸಿದ್ಧವಾಗಿದೆ. ಶ್ರೀಗಡಿ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದ ಪಕ್ಕದಲ್ಲಿ ಹರಿಯುವ ತೊರೆಯಲ್ಲಿ ಬೃಹತ್‌ ಗಾತ್ರದ ನೂರಾರು ಮರದ ದಿಮ್ಮಿಗಳು ಭಾರೀ ಪ್ರಾವಾಹದೊಂದಿಗೆ ಕೊಚ್ಚಿ ಬಂದು ಸಂಗ್ರಹಗೊಂಡಿದ್ದವು.

ಇದರ ತೆರವು ಕಾರ್ಯವನ್ನು ಕುಲ್ಕುಂದ ಹಾಗೂ ಸುಬ್ರಹ್ಮಣ್ಯ ಪರಿಸರದ ನಾಗರಿಕರು ನಡೆಸಿದ್ದರು. ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನ, ಶ್ರೀಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠ, ಸುಬ್ರಹ್ಮಣ್ಯ ಸ್ಥಳೀಯಾಡಳಿತ ನೆರವು ನೀಡಿದ್ದರು. ತೆರವು ಕಾಮಗಾರಿಗೆ ಜೆಸಿಬಿ, ಮರ ಕತ್ತರಿಸುವ ಯಂತ್ರ ಇತ್ಯಾದಿ ಒದಗಿಸಲಾಗಿತ್ತು. ತೆರವು ಕಾರ್ಯ ಇದೀಗ ಅಂತಿಮಗೊಂಡಿದೆ.

ಅಂತಿಮ ಹಂತದಲ್ಲಿ ಕಾಮಗಾರಿ
ಹಾಸನ-ಸಕಲೇಶಪುರ ಪಿಡಬ್ಲ್ಯುಡಿ ಇಲಾಖೆಗೆ ಸೇರಿದ ಶ್ರೀ ಚೌಡಮ್ಮನ ಗುಡಿ ಬಳಿಯಿಂದ ವೀಕ್ಷಣಾಗೋಪುರ ಮಧ್ಯೆ ಸುಮಾರು ಆರು ಕಡೆಗಳಲ್ಲಿ 14 ಕಿ.ಮೀ. ವ್ಯಾಪ್ತಿಯಲ್ಲಿ ಸಮಸ್ಯೆ ತೀವ್ರವಾಗಿ ತಲೆ ದೋರಿತ್ತು. ಅಶೋಕ ಕೊಲ್ಲಿ, ಹ್ಯಾರ್‌ಪಿನ್‌ ತಿರುವು ಮೊದಲಾದಡೆ ರಸ್ತೆ ಮೇಲೆ ಭಾರೀ ಪ್ರಮಾಣದ ಮರ, ಬಂಡೆಕಲ್ಲು, ಮಣ್ಣು ಸಂಗ್ರಹಗೊಂಡು ಬಂದ್‌ ಆಗಿತ್ತು. 

ಈ ಮಧ್ಯೆ ಒಂದು ಕಡೆ ರಸ್ತೆಯೇ ಅರ್ಧ ಕೊಚ್ಚಿಹೋಗಿತ್ತು. ಹಾಸನ-ಸಕಲೇಶಪುರ ವಿಭಾಗದ ಲೋಕೋಪಯೋಗಿ ಇಲಾಖೆ ವತಿಯಿಂದ ಮರ, ಮಣ್ಣು, ಬಂಡೆಕಲ್ಲು ತೆರವು ಕಾರ್ಯ ನಡೆಯುತ್ತಿದೆ. ಜೆಸಿಬಿ, ಇನ್ನಿತರ ಯಂತ್ರ ಬಳಸಿ ಮೂರು ಕಡೆಗಳಲ್ಲಿ ತೆರವು ಕಾರ್ಯ ಮುಗಿದಿದ್ದು, ಭಾರಿ ಹಾನಿ ಸಂಭವಿಸಿದ ಎರಡು ಕಡೆಗಳಲ್ಲಿ ಮಾತ್ರ ಕಾಮಗಾರಿ ಅಂತಿಮ ಹಂತದಲ್ಲಿದೆ.

Advertisement

ಅಡ್ಡಹೊಳೆ ಸಮೀಪದ ತಿರುವಿನ ಸ್ಥಳದಲ್ಲಿ ರಸ್ತೆಯೇ ಕೊಚ್ಚಿ ಹೋಗಿರುವುದರಿಂದ ಈ ರಸ್ತೆ ಸುಸ್ಥಿತಿಗೆ ತರಲು ಲೋಕೋಪಯೋಗಿ ಇಲಾಖೆ ಶ್ರಮಿಸುತ್ತಿದೆ. ಕಾಮಗಾರಿ ಭರದಿಂದ ನಡೆಯುತ್ತಿರುವ ಕಾರಣ ಮುಂದಿನ ಹತ್ತು ದಿನಗಳಲ್ಲಿ ಈ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಹಾಸನ ವಿಭಾಗದ ಲೊಕೋಪಯೋಗಿ ಇಲಾಖೆ ಮಾಹಿತಿ ನೀಡಿದ್ದಾರೆ.

ಸಂಪರ್ಕ ರಸ್ತೆ
ಬಿಸಿಲೆ-ಶನಿವಾರ ಸಂತೆ- ಹೊಳೆನರಸೀಪುರ ಮೂಲಕ ಬೆಂಗಳೂರಿಗೆ ಪ್ರಯಾಣಿಸಲು ಹತ್ತಿರದ ದಾರಿಯಾಗಿದೆ. ಅರಕಲಗೂಡು ಮಾರ್ಗವಾಗಿ ಪ್ರಸಿದ್ಧ ಪುಣ್ಯಕ್ಷೇತ್ರ ರಾಮನಾಥಪುರ, (ಪ್ರಸನ್ನ ಸುಬ್ರಹ್ಮಣ್ಯ ಕ್ಷೇತ್ರ) ಮೂಲಕ ಮೈಸೂರಿಗೆ ಸಂಪರ್ಕ ಕಲ್ಪಿಸುತ್ತಿದೆ. ಶನಿವಾರ ಸಂತೆ-ಸೋಮವಾರಪೇಟೆ ಕಡೆಯ ವಿದ್ಯಾರ್ಥಿಗಳು ಶ್ರೀಕ್ಷೇತ್ರ ಸುಬ್ರಹ್ಮಣ್ಯದ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪೂರೈಸುತ್ತಿದ್ದಾರೆ. ಸುಬ್ರಹ್ಮಣ್ಯದಿಂದ ಸಕಲೇಶಪುರ-ಹಾಸನ, ಬಿಸಿಲೆ, ಶನಿವಾರ ಸಂತೆ, ಹೊಳೆನರಸೀಪುರ ಮಾರ್ಗವಾಗಿ ಬೆಂಗಳೂರು, ಸೋಮವಾರ ಪೇಟೆ, ಅರಕಲಗೂಡು, ರಾಮನಾಥಪುರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಿದಾಗಿದೆ.

ಸುಸ್ತಿಗೆ ತಲುಪಿದ ರಸ್ತೆ
ಬೆಟ್ಟವೇ ಒಡೆದು ಮರಗಳ ಸಹಿತ ನೀರು ಹರಿದು ಬಂದ ಪರಿಣಾಮ ಬಿಸಿಲೆ ಘಾಟಿ ರಸ್ತೆ ಕೊಚ್ಚಿಕೊಂಡು ಹೋಗಿ ಭಾರಿ ಹಾನಿ ಸಂಭವಿಸಿತ್ತು. ಪ್ರವಾಹ ಮತ್ತು ಭೂಕುಸಿತಕ್ಕೆ ರಸ್ತೆ ತನ್ನ ಸ್ವರೂಪವನ್ನೇ ಕಳೆದುಕೊಂಡಿತ್ತು. ಕೆಲವು ಕಡೆಗಳಲ್ಲಿ ರಸ್ತೆಯೇ ತೊರೆಯಾಗಿ ಹರಿದಿತ್ತು. ರಸ್ತೆಯಿದ್ದ ಕುರುಹುಗಳೇ ಅಳಿದು ಹೋಗಿತ್ತು. ಕಲ್ಲು ಬಂಡೆ, ಮಣ್ಣು, ಮರಗಳು ಉರುಳಿದ ಪರಿಣಾಮವಾಗಿ ರಸ್ತೆಯೆಲ್ಲ ಸಂಪೂರ್ಣವಾಗಿ ಕೆಸರುಮಯವಾಗಿದ್ದವು. ಈ ರಸ್ತೆಯನ್ನು ಇತ್ತೀಚೆಗೆ 1 ಕೋಟಿ ರೂ. ವೆಚ್ಚ ಮಾಡಿ ಕಾಂಕ್ರೀಟ್‌ ರಸ್ತೆಯನ್ನಾಗಿ ನಿರ್ಮಿಸಿ 15 ದಿನಗಳ ಹಿಂದೆಯಷ್ಟೆ ಸಂಚಾರಕ್ಕೆ ತರೆಯಲಾಗಿತ್ತು.

ಒತ್ತಡ ತಗ್ಗಲಿದೆ
ಹಾದಿಯುದ್ದಕ್ಕೂ ಪ್ರಕೃತಿ ಸೊಬಗಿನ ಸಂಭ್ರಮ ಉಣಬಡಿಸುವ ಈ ರಸ್ತೆ. ಬಿಸಿಲೆ-ಕುಕ್ಕೆ ನಡುವಿನ ರಸ್ತೆಯಲ್ಲಿ 18 ಕಿ.ಮೀ. ದೂರದ ತನಕ ಕಾಂಕ್ರೀಟ್‌ ಆಗಿದೆ. ಇದರಲ್ಲಿ ಎರಡು ಕಾಲು ಕಿ.ಮೀ. ನಷ್ಟು ಮಾತ್ರ ಅನುದಾನ ಕೊರತೆಯಿಂದ ಭಾಕಿಯಾಗಿದೆ. ಈ ರಸ್ತೆ ಸಂಚಾರಕ್ಕೆ ಮುಕ್ತವಾದಲ್ಲಿ ಶಿರಾಡಿ ಘಾಟಿ ರಾ.ಹೆ. ಒತ್ತಡ ಕಡಿಮೆಯಾಗಿಲಿದೆ.

ಗಣ್ಯರಿಂದ ಪರಿಶೀಲನೆ
ಅತಿವೃಷ್ಠಿ ಸಂಭವಿಸಿದ ವೇಳೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮುಖ್ಯಮಂತ್ರಿ  ಎಚ್‌.ಡಿ. ಕುಮಾರಸ್ವಾಮಿ, ಹಾಸನ ಜಿಲ್ಲಾ ಕಾರಿ ರೋಹಿಣಿ ಸಿಂಧೂರಿ ಮೊದಲಾದವರು ಭೇಟಿ ನೀಡಿ ರಸ್ತೆಯ ಪರಿಶೀಲಿಸಿದ್ದರು.

ಈ ರಸ್ತೆ ಅನುಕೂಲ
ಅತಿವೃಷ್ಟಿಗೆ ಹಾನಿಯಾದ ದೇವಿ ಗುಡಿ ತನಕದ ಮಾರ್ಗವನ್ನು ಶ್ರಮ ಸೇವೆ ಮೂಲಕ ಪೂರ್ಣಗೊಳಿಸಿದ್ದೇವೆ. ಬಿಸಿಲೆ ಭಾಗದಲ್ಲಿ ಕಾಮಗಾರಿ ಇನ್ನಷ್ಟೇ ಮುಗಿಯಬೇಕಿದೆ. ಇದು ಬಳಕೆಗೆ ಲಭ್ಯವಾದಲ್ಲಿ ಎರಡೂ ಭಾಗದವರಿಗೂ ಅನುಕೂಲವಾಗಲಿದೆ.
 - ರಾಜೇಶ್‌ ಎನ್‌.ಎಸ್‌. ಗ್ರಾ.ಪಂ. ಸದಸ್ಯ, ಸುಬ್ರಹ್ಮಣ್ಯ

ಕಾಮಗಾರಿ ನಡೆಯುತ್ತಿದೆ
ಬಿಸಿಲೆ ಘಾಟಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿ ಪೂರ್ಣ ಕೆಲಸ ಮುಗಿದ ಬಳಿಕವಷ್ಟೆ ಸಂಚಾರಕ್ಕೆ ಮುಕ್ತವಾಗಲಿದೆ.
– ವೆಂಕಟೇಶ್‌ ಪಿಡಬ್ಲ್ಯುಡಿ
ಎಂಜನಿಯರ್‌ ಹಾಸನ ವಿಭಾಗ

 ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next