Advertisement

ಮಳೆ ಹಾನಿ: ವಾರದೊಳಗೆ ವರದಿ ಸಲ್ಲಿಸಿ

04:58 PM Jun 06, 2018 | Team Udayavani |

ಧಾರವಾಡ: ಜಿಲ್ಲೆಯ ತಗ್ಗು ಪ್ರದೇಶಗಳಲ್ಲಿರುವ ಗ್ರಾಮಗಳು, ನಗರಗಳಲ್ಲಿನ ವಸತಿ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಮಳೆಯಿಂದ ಉಂಟಾಗಬಹುದಾದ ಸಮಸ್ಯೆ, ಅವುಗಳ ನಿಯಂತ್ರಣಕ್ಕೆ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮ, ಪರಿಸ್ಥಿತಿ ಎದುರಿಸಲು ಸಿದ್ಧತೆಗಳ ಕುರಿತು ವಾರದೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ದರ್ಪಣ ಜೈನ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಮಳೆಯಿಂದ ಹಾನಿಗೀಡಾದ ಪ್ರದೇಶಗಳು, ತೆಗೆದುಕೊಂಡ ಕ್ರಮಗಳು, ಕೃಷಿ ಚಟುವಟಿಕೆ ಹಾಗೂ ನೈಸರ್ಗಿಕ ವಿಕೋಪದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ನಗರದ ಡಿಸಿ ಕಚೇರಿಯಲ್ಲಿ ಜರುಗಿದ ಅ ಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲ ತಹಸೀಲ್ದಾರರು, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು, ಸಣ್ಣ ನೀರಾವರಿ, ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ, ಜಿಪಂ ಇಂಜಿನಿಯರಿಂಗ್‌ ವಿಭಾಗ, ಹೆಸ್ಕಾಂ, ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳ ಅಧಿ ಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು. ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಲಯವಾರು ತಂಡಗಳನ್ನು ರಚಿಸಿ ಸಮೀಕ್ಷೆ ಮತ್ತು ಪರಿಹಾರ ಕಾರ್ಯಕೈಗೊಳ್ಳಬೇಕು. ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳು ಸನ್ನದ್ಧವಾಗಿರಬೇಕು. ಬಿಆರ್‌ಟಿಎಸ್‌ ಕಾಮಗಾರಿಗಳಿಂದ ಕೆಲವೆಡೆ ಖಾಸಗಿ ಕಟ್ಟಡಗಳಿಗೆ ನೀರು ನುಗ್ಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಇವುಗಳನ್ನು ಆದ್ಯತೆಯ ಮೇಲೆ ಪರಿಹರಿಸಬೇಕು ಎಂದರು.

ಮಂಟೂರು ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದ ಘಟನೆ ಮರುಕಳಿಸಬಾರದು. ಮೋಟಾರು ಬೋಟ್‌ಗಳು, ಚಾಲಕರು, ಈಜು ಪರಿಣಿತರ ಪಟ್ಟಿ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ದುಸ್ಥಿತಿಯಲ್ಲಿರುವ ಹಾಗೂ ಒಡೆದಿರುವ ಕೆರೆಗಳ ಮಾಹಿತಿ ಸಿದ್ಧ ಮಾಡಿ ಕೂಡಲೇ ಸರಿಪಡಿಸಬೇಕು. ಕೆರೆಗಳು ತುಂಬಿದ ನಂತರ ನೀರು ಊರೊಳಗೆ ನುಗ್ಗದಂತೆ ವೈಜ್ಞಾನಿಕವಾಗಿ ಮಾರ್ಗ ಒದಗಿಸಬೇಕು ಎಂದು ಸೂಚಿಸಿದರು.

ಕುಂದಗೋಳ ಸೇರಿದಂತೆ ವಿವಿಧ ಪಟ್ಟಣಗಳಲ್ಲಿರುವ ಚಿಕ್ಕ ಚಿಕ್ಕ ಕೆರೆ ಹೊಂಡಗಳಿಗೆ ತಡೆಗೋಡೆಯಾಗಿ ಬೇಲಿ ಹಾಕಿಸಬೇಕು. ನೀರು ಸರಾಗವಾಗಿ ಹರಿದು ಹೋಗಲು ಚರಂಡಿಗಳನ್ನು ಶುಚಿಗೊಳಿಸಬೇಕು. ಅಪಾಯದ ಅಂಚಿನಲ್ಲಿರುವ ಮರಗಳು, ವಿದ್ಯುತ್‌ ಕಂಬಗಳನ್ನು ಗಟ್ಟಿಗೊಳಿಸಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

Advertisement

ಬೀಳುವ ಹಂತದಲ್ಲಿರುವ ವಾಸ ಯೋಗ್ಯವಲ್ಲದ ಮನೆಗಳು, ಕಟ್ಟಡಗಳ ಪಟ್ಟಿ ಮಾಡಿ ತೆರವುಗೊಳಿಸಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 108 ಆಂಬ್ಯುಲೆನ್ಸ್‌ ವಾಹನ, ಜೀವರಕ್ಷಕ ಔಷಧಿಗಳು, ನೀರು ಶುದ್ಧೀಕರಣಕ್ಕಾಗಿ ಹಾಲೊಜಿನ್‌ ಮಾತ್ರೆಗಳು, ವೈದ್ಯರು ಮತ್ತು ಸಿಬ್ಬಂದಿಯನ್ನು ಸಿದ್ಧತೆಯಲ್ಲಿಟ್ಟಿರಬೇಕು ಎಂದು ಸೂಚಿಸಿದರು.

ಜನರು ಸಂಕಷ್ಟದ ಸಂದರ್ಭಗಳಲ್ಲಿ ವ್ಯವಧಾನ ಕಳೆದುಕೊಂಡು ವರ್ತಿಸುವ ಸಂಭವಗಳಿರುತ್ತವೆ. ಅಧಿಕಾರಿಗಳು ತಾಳ್ಮೆಯಿಂದ ವರ್ತಿಸಿ ಅವರ ನೋವಿಗೆ ಸ್ಪಂದಿಸಬೇಕು. ಸಿಡಿಲು ಬಡಿದು ಮೃತಪಟ್ಟವರ ಕುಟುಂಬಗಳಿಗೆ, ಮನೆ ಕಳೆದುಕೊಂಡವರಿಗೆ ಪರಿಹಾರ
ವಿತರಣೆಯಲ್ಲಿ ವಿಳಂಬವಾಗಬಾರದು. ಇದಲ್ಲದೇ ಬಿತ್ತನೆ ಕಾಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೀಜ,ರಸಗೊಬ್ಬರ ಸಿಗುವಂತೆ ಸೌಲಭ್ಯ ಕಲ್ಪಿಸಬೇಕು ಎಂದರು.

ಜಿಲ್ಲಾಧಿಕಾರಿ ಡಾ|ಎಸ್‌.ಬಿ.ಬೊಮ್ಮನಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಉತ್ತಮ ಮಳೆಯಾಗುತ್ತಿದೆ. ಜಿಲ್ಲೆಯ 13 ಮಳೆ ಮಾಪನ ಕೇಂದ್ರಗಳಲ್ಲೂ ಉತ್ತಮ ವರದಿ ದಾಖಲಾಗುತ್ತಿದೆ. ಬಿತ್ತನೆ ಕಾರ್ಯ ಇದೀಗ ಆರಂಭವಾಗಿದೆ ಶೇ.6ರಷ್ಟು ಪೂರ್ಣಗೊಂಡಿದೆ. ಜೂನ್‌ ಅಂತ್ಯಕ್ಕೆ ಬಹುತೇಕ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈ ಹಿಂದೆ 2001 ಹಾಗೂ 2009ರಲ್ಲಿ ನೈಸರ್ಗಿಕ ವಿಕೋಪ ಸಂಭವಿಸಿದ ಉದಾಹರಣೆ ಜಿಲ್ಲೆಯಲ್ಲಿದೆ. ಮುನ್ನೆಚ್ಚರಿಕೆಯಾಗಿ ಪರಿಸ್ಥಿತಿ ನಿಭಾಯಿಸಲು ಸಿದ್ಧತೆಗಳು ಅಗತ್ಯ. ಅಧಿಕಾರಿಗಳು ಪೂರ್ವಾನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡಬಾರದು. ರಜೆಯ ಮೇಲೆ ತೆರಳಬಾರದು ಎಂದು ಸೂಚಿಸಿದರು.

ಜಿಪಂ ಸಿಇಒ ಸ್ನೇಹಲ್‌ ಆರ್‌, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಇಬ್ರಾಹಿಂ ಮೈಗೂರ, ಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಜಿ.ಹಿರೇಮಠ, ಅಪರ ಜಿಲ್ಲಾ ಧಿಕಾರಿ ರಮೇಶ ಕಳಸದ, ಜಂಟಿ ಕೃಷಿ ನಿರ್ದೇಶಕ ಟಿ.ಎಸ್‌.ರುದ್ರೇಶಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಆರ್‌. ಎಂ.ದೊಡ್ಡಮನಿ, ಉಪವಿಭಾಗಾಧಿಕಾರಿ ಪಿ.ಜಯಮಾಧವ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳದಿಂದ ಆಗುವ ಹಾನಿಯ ಬಗ್ಗೆ ಹಿಂದಿನ ವರ್ಷಗಳಲ್ಲಿ ನಡೆದ ಘಟನೆಗಳನ್ನು ಪರಿಶೀಲಿಸಿ ಅವು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಬೇಕು. ತಗ್ಗು ಪ್ರದೇಶದಲ್ಲಿರುವ ಜಲಾವೃತಗೊಳ್ಳುವ ಕುಂದಗೋಳ ಹಾಗೂ ನವಲಗುಂದ ತಾಲೂಕಿನ ಹಳ್ಳಿಗಳಿಗೆ ಸಂಪರ್ಕ ಕಡಿತಗೊಳ್ಳದಂತೆ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು.
ದರ್ಪಣ ಜೈನ್‌, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next