ಕಲಬುರಗಿ: ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಯಿಂದಾಗಿ ಜನರಿಗೆ ಎದುರಾಗಿರುವ ತೊಂದರೆ ನಿವಾರಣೆಗೆ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಅಮೆರಿಕಾದಿಂದ ವಿಡಿಯೋ ಕಾನ್ಫರೆನ್ಸ್ ಮಾಡಿ ಜಿಲ್ಲಾಡಳಿತ ಸೂಚನೆ ನೀಡಿ ಜನಪರ ಕಾಳಜಿ ಮೆರೆದಿದ್ದಾರೆ.
ಜಾಗತಿಕ ಬಂಡವಾಳ ಹೂಡಿಕೆ ಸಂಬಂಧ ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ನಿರಾಣಿ ಅವರು, ಕಲಬುರಗಿ ಜಿಲ್ಲಾಧಿಕಾರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಭಾನುವಾರ ಸಂಜೆ ವಿಡಿಯೋ ಕಾನ್ಪರೆನ್ಸ್ ನಡೆಸಿದ್ದಾರೆ. ಜಿಲ್ಲೆಯಲ್ಲಿನ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ. ಇದೇ ವೇಳೆ ಜನರಿಗೆ ತೊಂದರೆ ಆಗದಂತೆ ಕಾಳಜಿವಹಿಸಿ ಎಂದು ಜಿಲ್ಲಾಧಿಕಾರಿ ಗುರುಕರ್ ಅವರಿಗೆ ಸೂಚಿಸಿದ್ದಾರೆ.
ಅಮೆರಿಕ ಪ್ರವಾಸದಲ್ಲಿದ್ದರೂ ಜಿಲ್ಲೆಯ ಪ್ರತಿಯೊಂದು ಮಾಹಿತಿಯನ್ನು ಕ್ಷಣಕ್ಷಣಕ್ಕೂ ಸಂಬಂಧ ಪಟ್ಟ ಅಧಿಕಾರಿಗಳಿಂದ ಪಡೆಯು ತ್ತಿದ್ದೇನೆ, ಜನ ಮತ್ತು ಜಾನುವಾರುಗಳ ರಕ್ಷಣೆಗೆ ಆದ್ಯತೆ ಕೊಡಬೇಕು. ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವುದು. ಅಗತ್ಯವಿರುವ ಕಾಳಜಿ ಕೇಂದ್ರಗಳನ್ನು ತೆರೆಯಬೇಕು. ಸಂತ್ರಸ್ತರಿಗೆ ಉಟ, ಬಟ್ಟೆ, ಸೇರಿದಂತೆ ಮತ್ತಿತರ ಸೌಲಭ್ಯ ಕಲ್ಪಿಸಿಕೊಡುವಂತೆ ಅಧಿಕಾರಿಗಳಿಗೆ ಸಚಿವ ನಿರಾಣಿ ಅವರು ತಾಕೀತು ಮಾಡಿದ್ದಾರೆ. ಪರಿಹಾರ ಕಾರ್ಯಕ್ಕೆ ಬೇರೆ ಬೇರೆ ಇಲಾಖೆಯ ಅಧಿಕಾರಿಗಳನ್ನು ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅಧಿಕಾರಿಗಳಿಗೆ ರಜೆ ನೀಡಬಾರದು. ಆಶಿಸ್ತು ತೋರುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಜರುಗಿಸಲು ಸೂಚನೆ ಕೊಟ್ಟಿದ್ದಾರೆ.
ಮಹಾರಾಷ್ಟ್ರ ಡ್ಯಾಂಗಳಿಂದ ಬರುವ ನೀರು ಕಡಿಮೆ ಆಗಿದ್ದರಿಂದ ಸದ್ಯಕ್ಕೆ ಜಿಲ್ಲೆಯಲ್ಲಿ ಪ್ರವಾಹ ಭೀತಿಯಿಲ್ಲ. ಹೀಗಾಗಿ ಜನರು ಆತಂಕ ಪಡಬೇಕಾಗಿಲ್ಲ. ಜನರ ರಕ್ಷಣೆ ಮಾಡಲು ಜಿಲ್ಲಾಡಳಿತ ಸಜ್ಜಾಗಿದೆ. ಮಹಾರಾಷ್ಟ್ರದ ಸಚಿವರೊಂದಿಗೆ ತಾವು ಸಹ ಕರೆ ಮಾಡಿ ಮಾತನಾಡಿದ್ದು, ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವುದಿಲ್ಲ ಎಂದು ನಿರಾಣಿ ಹೇಳಿದ್ದಾರೆ.