ಗುಂಡ್ಲುಪೇಟೆ: ಸ್ವಲ್ಪ ಮಳೆ ಬಿದ್ದರೂ ಸಹರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳ ಮೇಲೆಯೇ ಕೊಳಚೆ ನೀರು ಹರಿಯುತ್ತಿದ್ದು, ಜೀವದ ಹಂಗು ತೊರೆದು ವಾಹನ ಸವಾರರು ಮತ್ತು ಪಾದಚಾರಿಗಳು ಸಂಚರಿಸಬೇಕಾಗಿದೆ.
ಪಟ್ಟಣದ ಮಡಹಳ್ಳಿ ಹಾಗೂ ಕೊಡಹಳ್ಳಿ ಸರ್ಕಲ್‌ನಿಂದ ಮುಂಭಾಗದ ರಸ್ತೆಯುದ್ದಕ್ಕೂ ಹರಿಯುವ ಕೊಳಚೆ ನೀರು ಮತ್ತು ಕೆಸರಿನಲ್ಲಿವಾಹನಗಳು ಸಂಚರಿಸಬೇಕಿದೆ. ಕಳೆದ 4 ವರ್ಷದ ಹಿಂದೆ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಿ ಮಳೆನೀರು ಸುಗಮವಾಗಿ ಹರಿದು ಹೋಗಲು ವ್ಯವಸ್ಥೆ ಮಾಡದ ಕಾರಣ ಈ ಅವ್ಯವಸ್ಥೆಉಂಟಾಗಿದೆ.
ಎಲ್ಲೆಲ್ಲಿ ಸಮಸ್ಯೆ: ಅಲ್ಲದೇ ರಸ್ತೆಯ ಪಕ್ಕದಲ್ಲಿರುವ ಚರಂಡಿಗಳು ಮುಚ್ಚಿಕೊಂಡಿರುವ ಪರಿಣಾಮ ರಾಷ್ಟ್ರೀಯ ಹೆದ್ದಾರಿ, ಚಾಮರಾಜನಗರ ರಸ್ತೆಗಳ ಬದಿಯಲ್ಲಿನ ರಸ್ತೆಗಳ ಮೇಲೆಯೇ ನೀರು ಹರಿಯುತ್ತಿದೆ. ಪ್ರತಿ ಬಾರಿ ಮಳೆ ಸುರಿದಾಗಲೂ ಪಟ್ಟಣದ ಆರ್‌ಟಿಒ ಕಚೇರಿ, ಪ್ರವಾಸಿ ಮಂದಿರ, ಎಂಡಿಸಿಸಿ ಬ್ಯಾಂಕ್, ಬಸ್ ನಿಲ್ದಾಣ, ಮಡಹಳ್ಳಿ ವೃತ್ತ, ಚಾಮರಾಜನಗರ ಜೋಡಿ ರಸ್ತೆ, ಆಂಜನೇಯಸ್ವಾಮಿ ದೇವಸ್ಥಾನ, ಶಿವಾನಂದ ವೃತ್ತಗಳ ಬಳಿಯಲ್ಲಿ ಭಾರೀ ಪ್ರಮಾಣದ ಕೊಳಚೆ ನೀರು ಹರಿಯುತ್ತದೆ. ಇದರಿಂದ ಸ್ಥಳೀಯರು ಸಾಕಷ್ಟು ಕಿರಿಕಿರಿ ಅನುಭವಿಸಬೇಕಿದೆ.
ಕೊಳಚೆ ನೀರಲ್ಲೇ ಸಂಚಾರ: ಇತ್ತೀಚೆಗೆ ಬಿದ್ದ ಮಳೆ ನೀರಿನೊಂದಿಗೆ ಕೊಳಚೆ ನೀರು ಬೆರೆತು ಪ್ರವಾಹದಂತೆ ಹರಿಯುತ್ತಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಮಂಡಿಯುದ್ದದ ಕೊಳಚೆ ನೀರಿನಲ್ಲಿ ಹಾದುಹೋಗಲು ತೀವ್ರಪ್ರಯಾಸ ಪಡಬೇಕಾಯಿತು. ಜೋಡಿರಸ್ತೆಯ ಯುಜಿಡಿ, ಚರಂಡಿಗಳು ಹಾಗೂ ಪಟ್ಟಣದ ಮೇಲ್ಭಾಗದಿಂದ ಚರಂಡಿಗಳಲ್ಲಿ ಕೆಳಗೆ ಬಂದ ನೀರು ವೀರಯೋಧ ಶಿವಾನಂದವೃತ್ತದ ಬಳಿ ಚರಂಡಿಯಲ್ಲಿ ಉಕ್ಕಿ ಹರಿದು ಚಾಮರಾಜನಗರ ರಸ್ತೆಯುದ್ದಕ್ಕೂ ಕಾಲುವೆಯಂತೆ ಹರಿಯುತ್ತಿದೆ. ಅಲ್ಲದೇ ಚರಂಡಿಯಲ್ಲಿದ್ದ ಕಸಕಡ್ಡಿಗಳು ರಸ್ತೆಯ ಮೇಲೆಯೇ ಬಿದ್ದಿರುವುದರಿಂದ ಗಬ್ಬುನಾರುತ್ತಿದ್ದು, ಈ ಮಾರ್ಗದಲ್ಲಿ ಮೂಗು ಮುಚ್ಚಿಕೊಂಡು ಸಾಗುವಂತಾಗುತ್ತಿದೆ. ಜೊತೆಗೆ ಸಾಂಕ್ರಾಮಿಕ ರೋಗಗಳ ಭೀತಿ ಕೂಡ ಎದುರಾಗಿದೆ. ಪ್ರತಿ ಬಾರಿಯೂ ಈ ಅವ್ಯವಸ್ಥೆ ಎದುರಾಗುತ್ತಿದ್ದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸಿಲ್ಲ. ಶಾಸಕರು ಹಾಗೂ ಅಧಿಕಾರಿಗಳು ಮಳೆಗಾಲದಲ್ಲಿ ಕೊಳಚೆ ನೀರು ರಸ್ತೆಗೆ ಬಾರದಂತೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶಾಸಕರೇ ಪ್ರಾಧಿಕಾರದ ಮೇಲೆ ಒತ್ತಡ ಹೇರಿ ಸಮಸ್ಯೆ ಪರಿಹರಿಸಿ : ಕಳೆದ 4 ವರ್ಷದ ಹಿಂದೆ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಿ ಮಳೆನೀರು ಸುಗಮವಾಗಿ ಹರಿದುಹೋಗಲು ವ್ಯವಸ್ಥೆ ಮಾಡದ ಕಾರಣ ಈ ಅವ್ಯವಸ್ಥೆ ಉಂಟಾಗಿದೆ. ಪ್ರತಿ ಬಾರಿ ಮಳೆ ಬಂದಾಗಲೂ ಕೂಡ ಇದೇ ಸಮಸ್ಯೆ ಎದುರಾಗಿ ವಾಹನ ಸವಾರರಿಗೆ ಕಿರಿಕಿರಿಯಾಗುತ್ತದೆ. ಅಲ್ಲದೇ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ. ಈ ಸಮಸ್ಯೆ ಕುರಿತು ಪುರಸಭೆಯನ್ನು ಪ್ರಶ್ನಿಸಿದರೆ ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೆಲಸವಾಗಿ ಎಂದು ಪ್ರತಿಕ್ರಿಯಿಸಿದೆ. ಹೀಗಾಗಿ ಕ್ಷೇತ್ರದ ಶಾಸಕ ನಿರಂಜನ್ ಕುಮಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿಗಳು ಪ್ರಾಧಿಕಾರದ ಮೇಲೆ ಒತ್ತಡ ಹೇರಿ ಸಮರ್ಪಕ ಒಳಚರಂಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರವಾಸಿ ಮಂದಿರದಿಂದ ಮಡಹಳ್ಳಿ ವೃತ್ತದವರೆಗೂ ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಮಳೆನೀರು ನಿಲ್ಲದಂತೆ ಮಾಡಲು ಕಳೆದ ವರ್ಷ ಪುರಸಭೆ ವತಿಯಿಂದ 70 ಲಕ್ಷ ರೂ.ವೆಚ್ಚದಲ್ಲಿ ಟೆಂಡರ್ ಕರೆದು ವರ್ಕ್ ಆರ್ಡರ್ ಮಂಜೂ ರಾಗಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ತಾವೇ ಕಾಮಗಾರಿ ಮಾಡುವುದಾಗಿಹೇಳಿದ್ದರಿಂದ ಇದನ್ನು ಕೈಬಿಡಲಾಗಿದೆ. ಇದೇ ಹಣವನ್ನು ಶಿವಾ ನಂದ ವೃತ್ತದ ಬಳಿ ದೊಡ್ಡ ಚರಂಡಿ ನಿರ್ಮಿಸಲು ಕ್ರಮಕೈಗೊಳ್ಳ ಲಾಗಿದೆ. ಶೀಘ್ರದಲ್ಲೇ ಈ ಸಮಸ್ಯೆಗೆ ಅಂತ್ಯ ಹಾಡಲಾಗುವುದು.
– ಎ.ರಮೇಶ್, ಪುರಸಭೆ ಮುಖ್ಯಾಧಿಕಾರಿ
– ಸೋಮಶೇಖರ್