Advertisement

ಕರಾವಳಿಯಲ್ಲಿ ತಗ್ಗಿದ ಮಳೆಯ ಬಿರುಸು; ಆಗುಂಬೆ: ಲಘು ವಾಹನಕ್ಕೆ ಮುಕ್ತ

02:14 AM Jul 12, 2022 | Team Udayavani |

ಮಂಗಳೂರು: ಕಳೆದ ಹಲವು ದಿನಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಅಬ್ಬರಿಸುತ್ತಿದ್ದ ಮಳೆ ಸೋಮವಾರ ಬಹುತೇಕ ಕಡಿಮೆಯಾಗಿದೆ. ಕೆಲವು ಕಡೆಗಳಲ್ಲಿ ಮಾತ್ರ ಮಳೆಯಾಗಿದ್ದು, ಉಳಿದಂತೆ ಬಿಸಿಲಿನ ವಾತಾವರಣವಿತ್ತು.

Advertisement

ಮಂಗಳವಾರ ರೆಡ್‌ ಅಲರ್ಟ್‌ ಇರುವ ಬಗ್ಗೆ ಹವಾಮಾನ ಇಲಾಖೆಯು ಕೆಲವು ದಿನದ ಹಿಂದೆ ಪ್ರಕಟಿಸಿತ್ತು. ಆದರೆ ಸೋಮವಾರ ಸಂಜೆ ಪ್ರಕಟಿಸಿದ ಹೊಸ ಬುಲೆಟಿನ್‌ ಪ್ರಕಾರ ಮಂಗಳವಾರ ರೆಡ್‌ ಅಲರ್ಟ್‌ ಇಲ್ಲ; ಬದಲಾಗಿ ಆರೆಂಜ್‌ ಅಲರ್ಟ್‌ ಮಾತ್ರ ಇರಲಿದೆ. ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಶನಿವಾರ ಮುಂಜಾನೆವರೆಗೂ ಆರೆಂಜ್‌ ಅಲರ್ಟ್‌ ಇರಲಿದೆ.

ದ.ಕ. ಜಿಲ್ಲೆಯ ಮಂಗಳೂರು, ಸುಳ್ಯ, ಬೆಳ್ತಂಗಡಿ, ಕಡಬ ಭಾಗದಲ್ಲಿ ಸೋಮವಾರ ಮಳೆ ಕಡಿಮೆಯಿತ್ತು. ನದಿಗಳಲ್ಲೂ ನೀರಿನ ಹರಿವಿನ ಮಟ್ಟದಲ್ಲಿ ಕೊಂಚ ಕಡಿಮೆಯಾಗಿದೆ. ಸುಬ್ರಹ್ಮಣ್ಯ, ಮೂಡುಬಿದಿರೆ ಸಹಿತ ಕೆಲವು ಕಡೆ ಮಳೆಯಾಗಿದೆ. ಮಂಗಳೂರಿನ ಬಜಾಲ್‌ ಹಾಗೂ ಮಂಗಳಾದೇವಿ ಸಮೀಪ 2 ಮನೆಗಳಿಗೆ ಹಾನಿಯಾಗಿದೆ.

ಒಂದೂವರೆ ತಾಸು ಸಂಚಾರ ಸ್ಥಗಿತ
ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಮಸೀದಿ ಸನಿಹ ಬೃಹತ್‌ ಮರವೊಂದು ರಸ್ತೆಗೆ ಉರುಳಿದೆ. ಘನ ಲಾರಿಯೊಂದು ಸಂಚರಿಸುವ ಸಂದರ್ಭ ಮೇಲ್ಭಾಗಕ್ಕೆ ತಾಗಿದ್ದರಿಂದ ಮರ ರಸ್ತೆಗೆ ಬಿದ್ದಿದೆ. ಒಂದೂವರೆ ತಾಸು ಸಂಚಾರ ಸ್ಥಗಿತಗೊಂಡಿತು.

ಉಡುಪಿಯಲ್ಲಿ ಉತ್ತಮ ಮಳೆ
ಉಡುಪಿ: ಜಿಲ್ಲಾದ್ಯಂತ ಶನಿವಾರ ತಡರಾತ್ರಿ, ರವಿವಾರ ವ್ಯಾಪಕ ಮಳೆಯಾ ಗಿದೆ. ಕುಂದಾಪುರ, ಬೈಂದೂರು, ಕಾಪು, ಉಡುಪಿ, ಕಾರ್ಕಳ, ಅಜೆಕಾರು, ಪಡುಬಿದ್ರಿ, ಸಿದ್ದಾಪುರ, ಹೆಬ್ರಿ ಭಾಗದಲ್ಲಿ ಬಿಟ್ಟುಬಿಟ್ಟು ಧಾರಾಕಾರ ಮಳೆಯಾಗಿದೆ. ಬೈಂದೂರು ಭಾಗದಲ್ಲಿ ಅತಿಹೆಚ್ಚು ಮಳೆಯಾಗಿದೆ.

Advertisement

ಜಿಲ್ಲೆಯ ತಗ್ಗು ಪ್ರದೇಶಗಳು, ಕೃಷಿ ಭೂಮಿಗೆ ನೆರೆ ಹಾವಳಿ ಮುಂದುವರಿ ದಿದೆ. ಉಡುಪಿ ನಗರ ಸಹಿತ ಸುತ್ತಲಿನ ಪ್ರದೇಶದಲ್ಲಿ ಸೋಮವಾರ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೂ ಹೆಚ್ಚು ಮಳೆಯಾ ಗಿದ್ದು, ಸಂಜೆಯ ಅನಂತರ ಕ್ಷೀಣಿಸಿದೆ.

ಕಾರ್ಕಳ: ಮನೆ, ಬಾವಿಗೆ ಹಾನಿ
ಕಾರ್ಕಳ: ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಸೋಮವಾರ ನಿಟ್ಟೆ ಗ್ರಾಮದ ಜಯರಾಮ ಆಚಾರ್ಯ ಅವರ ಬಾವಿಯ ದಂಡೆ ಕುಸಿದಿದೆ. ಹಿರ್ಗಾನ ಗ್ರಾಮದ ಕಾನಂಗಿ ಜಗದೀಶ್‌ ಶೆಟ್ಟಿ ಅವರ ವಾಸ್ತವ್ಯದ ಮನೆಯ ಗೋಡೆ ಬಿರುಕು ಬಿಟ್ಟು 3 ಲಕ್ಷ ರೂ. ನಷ್ಟವಾಗಿದೆ. ಕಡ್ತಲ ಗ್ರಾಮದ ಗೋಳಿಪಲ್ಕೆ ನಿವಾಸಿ ಗೋಪಾಲ ನಾಯಕ್‌ ಪರವರ ಮನೆ ಕುಸಿದು ಅಂದಾಜು 30 ಸಾವಿರ ರೂ. ನಷ್ಟವಾಗಿದೆ.

ನಾವುಂದದಲ್ಲಿ ಮತ್ತೆ ನೆರೆ
ಕುಂದಾಪುರ: ಘಾಟಿ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದರಿಂದ ನಾವುಂದ ಗ್ರಾಮದ ಸಾಲ್ಬುಡ, ಅರೆಹೊಳೆ ಪರಿಸರ ದಲ್ಲಿ ಸೋಮವಾರ ಮತ್ತೆ ನೆರೆಯಾಗಿದೆ. ಸಾಲ್ಬುಡದಿಂದ ನಾವುಂದ ಪೇಟೆ ಕಡೆಗೆ ಬರಲು ದೋಣಿಯನ್ನು ಆಶ್ರಯಿಸುವಂತಾಯಿತು. ಅರೆಹೊಳೆ – ನಾವುಂದ 2 ಕಿ.ಮೀ. ದೂರದ ರಸ್ತೆ ಮುಳುಗಡೆಯಾಗಿದೆ. 80 ಮನೆಗಳಿಗೆ ಸಂಪರ್ಕ ಕಡಿತಗೊಂಡಿದೆ.

ಆಗುಂಬೆ: ಲಘು ವಾಹನಕ್ಕೆ ಮುಕ್ತ
ಹೆಬ್ರಿ: ಆಗುಂಬೆ ಘಾಟಿಯ 4ನೇ ಸುತ್ತಿನಲ್ಲಿ ಭೂಕುಸಿತವಾಗಿ ಘಾಟಿ ಸಂಚಾರ ಬಂದ್‌ ಆಗಿದ್ದು, ಅಲ್ಲಿ ರವಿವಾರ ಬೆಳಗ್ಗಿನಿಂದ 3 ಹಿಟಾಚಿಗಳ ಮೂಲಕ ಮಣ್ಣು ತೆರವು ಕಾರ್ಯ ಮಾಡಲಾಗುತ್ತಿದೆ. ತೆಗದಷ್ಟೂ ಮಣ್ಣು ಮತ್ತೆ ಕುಸಿಯುತ್ತಿದೆ. ಸದ್ಯ ಲಘು ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ.ಮಳೆ ಇದೇ ರೀತಿ ಮುಂದುವರಿದರೆ ಮತ್ತೆ ಕುಸಿಯುವ ಭೀತಿ ಇದ್ದು, ಬಸ್‌ ಸಂಚಾರ ಕಷ್ಟಸಾಧ್ಯ ಎನ್ನಲಾಗುತ್ತಿದೆ.

ತಡೆಗೋಡೆ ಬಿರುಕು: ನಾಲ್ಕನೇ ಸುತ್ತಿನಲ್ಲಿ ನಿರ್ಮಾಣವಾದ ತಡೆಗೋಡೆ ಮತ್ತು ರಸ್ತೆಯ ನಡುವೆ ಬಿರುಕು ಕಂಡಿದ್ದು ಕುಸಿಯುವ ಭೀತಿಯಲ್ಲಿದೆ. ಅಲ್ಲದೆ ಘಾಟಿಯ ಇಕ್ಕೆಲಗಳಲ್ಲಿ ಅಪಾಯಕಾರಿ ಮರಗಳಿದ್ದು ಭಾರೀ ಮಳೆಯಿಂದ ಧರೆಗುರುಳುವ ಭೀತಿ ಎದುರಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next